ಆ್ಯಪ್ನಗರ

ದೋಸ್ತಿ ಸಂಪುಟ ವಿಸ್ತರಣೆ: ಪಕ್ಷೇತರ ಆರ್ ಶಂಕರ್‌, ನಾಗೇಶ್‌ ಸಚಿವರಾಗಿ ಪ್ರಮಾಣ

ಪೂರ್ವನಿಗದಿಯಂತೆ ಮಧ್ಯಾಹ್ನ 1 ಗಂಟೆಗೆ ಪ್ರಮಾಣವಚನ ಸ್ವೀಕಾರ ನಡೆಯಬೇಕಿತ್ತಾದರೂ, ಹತ್ತು ನಿಮಿಷ ವಿಳಂಬವಾಗಿ ನಡೆಯಿತು. ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಮೈತ್ರಿ ಪಕ್ಷಗಳ ಕಿತ್ತಾಟ, ಬಂಡಾಯದ ಬೇಗುದಿ, ಅಪಸ್ವರದ ಮಧ್ಯೆಯೇ ಕಾಂಗ್ರೆಸ್‌ನ ಹತ್ತಾರು ಆಕಾಂಕ್ಷಿಗಳ ನಿರೀಕ್ಷೆಗಳನ್ನು ಬದಿಗಿರಿಸಿ ಇಬ್ಬರು ಪಕ್ಷೇತರರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ.

Vijaya Karnataka Web 14 Jun 2019, 2:29 pm
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ 13 ತಿಂಗಳ ಹರೆಯದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಸಚಿವ ಸಂಪುಟ 2ನೇ ಬಾರಿಗೆ ಶುಕ್ರವಾರ ವಿಸ್ತರಣೆಯಾಗಿದೆ. ರಾಣೆಬೆನ್ನೂರು ಕ್ಷೇತ್ರದ ಆರ್‌. ಶಂಕರ್‌ ಹಾಗೂ ಮುಳಬಾಗಲು ಶಾಸಕ ನಾಗೇಶ್‌ ಅವರು ನೂತನ ಸಚಿವರಾಗಿ ರಾಜಭವನದಲ್ಲಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
Vijaya Karnataka Web R Shankar (New Minister Oath taking)


ಪೂರ್ವನಿಗದಿಯಂತೆ ಮಧ್ಯಾಹ್ನ 1 ಗಂಟೆಗೆ ಪ್ರಮಾಣವಚನ ಸ್ವೀಕಾರ ನಡೆಯಬೇಕಿತ್ತಾದರೂ ಹತ್ತು ನಿಮಿಷ ವಿಳಂಬವಾಗಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಮೈತ್ರಿ ಪಕ್ಷಗಳ ಕಿತ್ತಾಟ, ಬಂಡಾಯದ ಬೇಗುದಿ, ಅಪಸ್ವರದ ಮಧ್ಯೆಯೇ ಕಾಂಗ್ರೆಸ್‌ನ ಹತ್ತಾರು ಆಕಾಂಕ್ಷಿಗಳ ನಿರೀಕ್ಷೆಗಳನ್ನು ಬದಿಗಿರಿಸಿ ಇಬ್ಬರು ಪಕ್ಷೇತರರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಾಂಗ್ರೆಸ್‌ನಿಂದ ಒಂದು ಹಾಗೂ ಜೆಡಿಎಸ್‌ ಕೋಟಾದಲ್ಲಿ 2 ಸಚಿವ ಸ್ಥಾನಗಳು ಖಾಲಿ ಇದ್ದು, ಆರ್‌. ಶಂಕರ್‌ ಕಾಂಗ್ರೆಸ್‌ ಕೋಟಾದಲ್ಲಿ ಹಾಗೂ ನಾಗೇಶ್‌ ಜೆಡಿಎಸ್‌ ಕಡೆಯಿಂದ ಮೈತ್ರಿ ಸಂಪುಟ ಸೇರಿದರು. ಜೆಡಿಎಸ್‌ ಕೋಟಾದಲ್ಲಿ ಬಾಕಿ ಉಳಿಯುವ ಮತ್ತೊಂದು ಸ್ಥಾನಕ್ಕೆ ಮೇಲ್ಮನೆ ಸದಸ್ಯ ಬಿ.ಎಂ. ಫಾರೂಕ್‌ ಅವರಿಗೆ ಅವಕಾಶ ಕಲ್ಪಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಬಯಸಿದ್ದರೂ, ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇಬ್ಬರು ಪಕ್ಷೇತರರ ಸೇರ್ಪಡೆಗೆ ಸೀಮಿತವಾಗಿ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ನಡೆದಿದೆ.

ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಾಗೇಶ್ ಅವರನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅಭಿನಂದಿಸಿದರು.


ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದ ಆರ್‌.ಶಂಕರ್‌ ಅವರನ್ನು ಕೆಲತಿಂಗಳ ಹಿಂದೆ ಸಂಪುಟ ವಿಸ್ತರಣೆ ವೇಳೆ ಕೈಬಿಡಲಾಗಿತ್ತು. ಬಳಿಕ, ಶಂಕರ್‌ ಕಾಂಗ್ರೆಸ್‌ ಬಂಡಾಯ ಶಾಸಕರ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಲ್ಲದೆ ಬಿಜೆಪಿ ಬಾಗಿಲು ತಟ್ಟಿದ್ದರು. ಸಮ್ಮಿಶ್ರ ಸರಕಾರದ ಸುರಕ್ಷತೆಗೆ ಒತ್ತು ನೀಡುವ ಮೈತ್ರಿ ನಾಯಕರ ಕಾರ್ಯತಂತ್ರದ ಭಾಗವಾಗಿ ಶಂಕರ್‌ ಅವರನ್ನು ಮತ್ತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಹಸದಸ್ಯತ್ವದೊಂದಿಗೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸಂಪುಟಕ್ಕೆ ಶಂಕರ್‌ ಮರು ಸೇರ್ಪಡೆಗೆ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮುಂದೇನು?
ಕಾಂಗ್ರೆಸ್‌ ಶಾಸಕರ ಅತೃಪ್ತಿ, ಅಸಮಾಧಾನ ತೀವ್ರಗೊಂಡ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸಂಪುಟ ಸರ್ಜರಿಗೆ ಗಂಭೀರ ಚಿಂತನೆ ಆರಂಭವಾಗಿತ್ತು. ಆದರೆ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ಸಲಹೆಯಂತೆ ಪುನರ್‌ರಚನೆ ಪ್ರಸ್ತಾವನೆ ಮುಂದೂಡಿ, 2 ಖಾಲಿ ಸ್ಥಾನಗಳ ಭರ್ತಿಗೆ ಸೀಮಿತವಾಗಲು ನಿರ್ಧರಿಸಲಾಗಿತ್ತು. ಬಹುದಿನಗಳಿಂದ ನಡೆದ ಕಸರತ್ತಿನಂತೆ ಶುಕ್ರವಾರದ ಸಂಪುಟ ವಿಸ್ತರಣೆ ಮುಗಿದ ಬಳಿಕ ಘಟಿಸಬಹುದಾದ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ. ಕಾಂಗ್ರೆಸ್‌ನ ಡಜನ್‌ಗಟ್ಟಲೆ ಸಚಿವ ಸ್ಥಾನ ಆಕಾಂಕ್ಷಿಗಳ ಬೇಗುದಿ ಯಾವ ಸ್ವರೂಪ ಪಡೆದುಕೊಳ್ಳಲಿದೆ, ರಮೇಶ್‌ ಜಾರಕಿಹೊಳಿ ಒಳಗೊಂಡು ಕಾಂಗ್ರೆಸ್‌ ಬಂಡಾಯ ಶಾಸಕರ ಮುಂದಿನ ನಡೆ ಏನಿರಲಿದೆ ಎಂಬುದು ಮಹತ್ವ ಪಡೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ