ಆ್ಯಪ್ನಗರ

ಕಾಂಗ್ರೆಸ್‌ ನಾಯಕತ್ವದ ವಿರುದ್ದ ಗುಡುಗಿದ ಸಿಎಂ ಇಬ್ರಾಹಿಂ

"ನಮಗೆ ಕಿಮ್ಮತ್ತಿಲ್ಲ, ಸತ್ತೀದ್ದೀವಿ ಎಂದಾದರೆ ಶವಸಂಸ್ಕಾರವನ್ನಾದರೂ ಮಾಡಬೇಕು. ಅದನ್ನೂ ಮಾಡದೆ ಎಲ್ಲೋ ಶವ ಬಿಸಾಕಿ ಹೋಗ್ತೀವಿ ಅಂದರೆ ಹೇಗೆ? ಅದಕ್ಕಿಂತ ಮನೆ ಸಾವೇ ಬೆಸ್ಟ್‌ ಅನಿಸುತ್ತದೆ. ಹೀಗಾಗಿ, ಮನೆಯಲ್ಲೇ ಇರುತ್ತೇನೆ," ಎಂದು ಪಕ್ಷದಿಂದ ಹೊರಗುಳಿಯುವ ಇಂಗಿತವನ್ನು ಇಬ್ರಾಹಿಂ ವ್ಯಕ್ತಪಡಿಸಿದ್ದಾರೆ.

Vijaya Karnataka 17 Dec 2019, 11:52 pm

ಬೆಂಗಳೂರು: ಉಪಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಹೊಣೆ ಹೊತ್ತು ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಪದತ್ಯಾಗದ ಹೆಜ್ಜೆ ತುಳಿದ ಬಳಿಕ ಮೂಲ ಕಾಂಗ್ರೆಸ್ಸಿಗರ ಕೋಪ ತಣ್ಣಗಾಯಿತು ಎನ್ನುವಾಗಲೇ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ.
Vijaya Karnataka Web CM Ibrahim 01


ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ತಮ್ಮ ಹಿರಿತನ ಪರಿಗಣಿಸದ ಕಾರಣ ಉಪಚುನಾವಣೆ ಪ್ರಚಾರಕ್ಕೆ ಚಕ್ಕರ್‌ ಹೊಡೆದು ವಿದೇಶಕ್ಕೆ ತೆರಳಿದ್ದ ಇಬ್ರಾಹಿಂ ಮರಳಿ ಬಂದಿದ್ದಾರೆ. ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ''ಪಕ್ಷದಲ್ಲಿಓಡಾಡಿ ಓಟು ಹಾಕಿಸುವುದು ಮಾತ್ರ ನಮ್ಮ ಕೆಲಸ. ನಿರ್ಧಾರ ತೆಗೆದುಕೊಳ್ಳಲು ನಾವು ಬೇಡ ಎಂದರೆ ಹೇಗೆ? ಎಲ್ಲರನ್ನೂ ವಿರೋಧ ಮಾಡಿಕೊಂಡು ಓಡಾಡಿ ಭಾಷಣ ಮಾಡೋದು ನಾವು, ಅಧಿಕಾರ ಅನುಭವಿಸೋಕೆ ಮಾತ್ರ ಬೇರೆಯವರಾ?" ಎಂದು ಟಿಕೆಟ್‌ ಹಂಚಿಕೆಯಲ್ಲಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗದಿರುವ ಬಗ್ಗೆ ಆಕ್ರೋಶ ಹೊರಹಾಕಿದರು.

"ನಮಗೆ ಕಿಮ್ಮತ್ತಿಲ್ಲ, ಸತ್ತೀದ್ದೀವಿ ಎಂದಾದರೆ ಶವಸಂಸ್ಕಾರವನ್ನಾದರೂ ಮಾಡಬೇಕು. ಅದನ್ನೂ ಮಾಡದೆ ಎಲ್ಲೋ ಶವ ಬಿಸಾಕಿ ಹೋಗ್ತೀವಿ ಅಂದರೆ ಹೇಗೆ? ಅದಕ್ಕಿಂತ ಮನೆ ಸಾವೇ ಬೆಸ್ಟ್‌ ಅನಿಸುತ್ತದೆ. ಹೀಗಾಗಿ, ಮನೆಯಲ್ಲೇ ಇರುತ್ತೇನೆ," ಎಂದು ಪಕ್ಷದಿಂದ ಹೊರಗುಳಿಯುವ ಇಂಗಿತ ವ್ಯಕ್ತಪಡಿಸಿದರು.

ಡಿಕೆಶಿ v/s ಮುನಿಯಪ್ಪ; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಬಿ

''ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಮೇಲೆ ನನ್ನ ಸಿಟ್ಟಿಲ್ಲ. ಪಕ್ಷದ ಬಗ್ಗೆ ಸಿಟ್ಟಿದೆ. ಮೇಲ್ಮನೆಯ ಹಿರಿಯ ಸದಸ್ಯ ನಾನು. ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕ ಯಾರಾಗಬೇಕಿತ್ತು? ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರಾದರೂ ನನ್ನ ಪರ ಮಾತನಾಡಬಹುದಿತ್ತಲ್ಲಾ," ಎಂದು ಅವರು ತಮ್ಮ ಅಸಮಾಧಾನಕ್ಕೆ ಕಾರಣವನ್ನೂ ತಿಳಿಸಿದರು.

ಬಿಎಸ್‌ವೈ ಇಲ್ಲದ ಬಿಜೆಪಿ ನಥಿಂಗ್‌

"ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಬರುವುದಿಲ್ಲಎಂದು ಮೊದಲೇ ಹೇಳಿದ್ದೆ. ಇಡೀ ವೀರಶೈವ ಸಮುದಾಯ ಯಡಿಯೂರಪ್ಪ ಅವರ ಕೈಹಿಡಿದಿದೆ. ಯಡಿಯೂರಪ್ಪ ಹೊರತಾದ ಬಿಜೆಪಿ ಇಲ್ಲ ಎಂಬುದೂ ಸಾಬೀತಾಗಿದೆ. ಜೆಡಿಎಸ್‌ ಪಕ್ಷಕ್ಕೆ ಒಕ್ಕಲಿಗರ ಶಕ್ತಿ ಇತ್ತು. ಈಗ ಒಕ್ಕಲಿಗರೂ ಜೆಡಿಎಸ್‌ನಿಂದ ದೂರವಾಗುತ್ತಿದ್ದಾರೆ. ಈ ಎರಡೂ ಪ್ರಬಲ ಸಮುದಾಯಗಳು ಬಿಜೆಪಿ ಪರ ನಿಂತಿವೆ. ಈ ವಾಸ್ತವ ಸತ್ಯ ಹೇಳಲು ಕಾಂಗ್ರೆಸ್‌ನಲ್ಲಿ ಯಾರೂ ತಯಾರಿಲ್ಲ. ನಾನಂತೂ ಧೈರ್ಯವಾಗಿ ಹೇಳುತ್ತೇನೆ," ಎಂದರು.

ಸಿದ್ದರಾಮಯ್ಯ ಜತೆ ಮುನಿಸು, ವಿದೇಶ ಪ್ರವಾಸದಲ್ಲಿ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕ ಸಿಎಂ ಇಬ್ರಾಹಿಂ!

''ರಾಜ್ಯದಲ್ಲಿ ಶೇ. 15 ರಿಂದ ಶೇ. 16 ರಷ್ಟು ಅಲ್ಪಸಂಖ್ಯಾತರಿದ್ದಾರೆ. ಕಾಂಗ್ರೆಸ್‌ ವರಿಷ್ಠರು ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಯಲಿಲ್ಲ. ಹೀಗಾಗಿ, ಅನೇಕ ಕಡೆಗಳಲ್ಲಿ ಮೈನಾರಿಟಿ ಸಮುದಾಯ ಕೂಡ ಯಡಿಯೂರಪ್ಪ ಅವರಿಗೆ ಉಪಚುನಾವಣೆಯಲ್ಲಿ ಬೆಂಬಲ ನೀಡಿದೆ," ಎಂದು ಇಬ್ರಾಹಿಂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ