ಆ್ಯಪ್ನಗರ

ಸಂಪುಟ ವಿಸ್ತರಣೆ: ಕರಾವಳಿಯ ಕಡೆಗಣನೆ ಸರಿಯೇ ? ಬಿಎಸ್‌ವೈಗೆ ಪ್ರಶ್ನೆ

ಬಿಜೆಪಿ ಪಕ್ಷಕ್ಕೆ ಸೈದ್ಧಾಂತಿಕ ಬಲ ತುಂಬಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಬಿಎಸ್‌ವೈ ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಬಿಎಸ್‌ವೈ ಸಂಪುಟದಲ್ಲಿ ಎಸ್‌ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯವಿದ್ದರೂ ಅದು ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಇರ್ಷಾದ್ ಉಪ್ಪಿನಂಗಡಿ | Vijaya Karnataka Web 3 Feb 2020, 2:37 pm
ಬೆಂಗಳೂರು: ಸಿಎಂ ಬಿ.ಎಸ್‌ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದು ಗುರುವಾರ (ಫೆ.6) ಎಂದು 13 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗೆದ್ದ 11 ಶಾಸಕರ ಪೈಕಿ ಹತ್ತು ಶಾಸಕರಿಗೆ ಹಾಗೂ ಮೂಲ ಬಿಜೆಪಿಯ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಸಿಎಂ ಅಧಿಕೃತ ಹೇಳಿಕೆ ನೀಡಿದ್ದಾರೆ. ಆದರೆ ಈ ಬಾರಿಯೂ ಬಿಎಸ್‌ವೈ ಸಂಪುಟದಲ್ಲಿ ಕರಾವಳಿಯನ್ನು ಕಡೆಗಣಿಸಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
Vijaya Karnataka Web coastal karnataka negleted by bs yeddyurappa
ಸಂಪುಟ ವಿಸ್ತರಣೆ: ಕರಾವಳಿಯ ಕಡೆಗಣನೆ ಸರಿಯೇ ? ಬಿಎಸ್‌ವೈಗೆ ಪ್ರಶ್ನೆ


ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಬಿಜೆಪಿ ಪಾಲಿಗೆ ಶಕ್ತಿ ಕೇಂದ್ರ ಹಾಗೂ ಪ್ರಯೋಗ ಶಾಲೆಯಾಗಿ ಗುರುತಿಸಿಕೊಂಡಿವೆ. ಸಂಘ ಸಿದ್ಧಾಂತದ ಅಡಿಯಲ್ಲಿ ಪಕ್ಷದ ಸಂಘಟನೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ರಾಜ್ಯ ಬಿಜೆಪಿ ಪಾಲಿಗೆ ಮಾದರಿ ಜಿಲ್ಲೆಗಳು. ಆರ್.ಎಸ್‌.ಎಸ್‌ ಹಾಗೂ ಪರಿವಾರ ಸಂಘಟನೆಗಳು ಕರಾವಳಿಯಲ್ಲಿ ಪ್ರಬಲವಾಗಿವೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಏಳು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ. ಹೀಗಿದ್ದರೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಬಿಎಸ್‌ವೈ ಸಂಪುಟದಲ್ಲಿ ನೀಡಿರುವುದು ಕೇವಲ ಒಂದು ಸಚಿವ ಸ್ಥಾನ.

ವಿಶ್ವನಾಥ್ ಜೊತೆಗಿನ ಸಂಧಾನ ಸಕ್ಸಸ್ ! ಹಳ್ಳಿ ಹಕ್ಕಿಗೆ ಬಿಎಸ್‌ವೈ ನೀಡಿದ ಆಫರ್‌ ಏನು?

ಉಡುಪಿ ಜಿಲ್ಲೆಯ ಕೋಟ ಶ್ರೀನಿವಾಸ್‌ ಪೂಜಾರಿಗೆ ಸಚಿವ ಸ್ಥಾನ ನೀಡಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಈ 'ಭಾಗ್ಯ' ಸಿಕ್ಕಿಲ್ಲ. ಇದು ಕರಾವಳಿಗರ ಅಸಮಧಾನಕ್ಕೆ ಕಾರಣವಾಗಿದೆ. ಪಕ್ಷ ಸಂಘಟನೆಯಲ್ಲಿ ಕರಾವಳಿಗರ ಪಾತ್ರ ಬಹುಮುಖ್ಯವಾದರೂ ಸರ್ಕಾರದಲ್ಲಿ ಯಾಕೆ ಕಡೆಗಣನೆ ಮಾಡಲಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಕರಾವಳಿಯಲ್ಲಿ ನಾಲ್ವರು ಸಚಿವರು

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರಾವಳಿಗೆ ನಾಲ್ಕು ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ರಮಾನಾಥ ರೈ, ಯು.ಟಿ ಖಾದರ್, ಅಭಯಚಂದ್ರ ಜೈನ್, ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್‌ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಬಳಿಕ ಅಭಯಚಂದ್ರ ಜೈನ್‌ ಅವರಿಂದ ಸಚಿವ ಸ್ಥಾನ ಹಿಂಪಡೆದುಕೊಳ್ಳಲಾಯಿತು. ಮೈತ್ರಿ ಸರಕಾರದ ಅವಧಿಯಲ್ಲಿ ಯು.ಟಿ ಖಾದರ್‌ ಸಚಿವರಾಗಿದ್ದರು.

ಸಂಪುಟ ವಿಸ್ತರಣೆ ಫಿಕ್ಸ್ : ಧವಳಗಿರಿಯಲ್ಲಿ ಗರಿಗೆದರಿದ ರಾಜಕೀಯ ಬೆಳವಣಿಗೆ

ಆರು ಬಾರಿ ಶಾಸಕರಾದರೂ ಅಂಗಾರಗೆ ಸಚಿವ ಸ್ಥಾನ ಯಾಕಿಲ್ಲ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಿನ ಭದ್ರಕೋಟೆ. 2013ನೇ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಸೋತರೂ ಸುಳ್ಯದಲ್ಲಿ ಎಸ್‌. ಅಂಗಾರ ಗೆದ್ದಿದ್ದರು.

ಎಸ್‌. ಅಂಗಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಶಾಸಕರಾಗಿದ್ದಾರೆ. ಒಟ್ಟು ಆರು ಬಾರಿ ಶಾಸಕರಾಗಿದ್ದರೂ ಸಚಿವರಾಗುವ ಭಾಗ್ಯ ಇದುವರೆಗೂ ಒದಗಿ ಬಂದಿಲ್ಲ. ಸಮ್ಮಿಶ್ರ ಸರಕಾರ ಪತನವಾಗಿ ಬಿಎಸ್‌ವೈ ಸರಕಾರ ರಚನೆಯಾದಾಗ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು, ಆದರೆ ಅದು ಕೈಗೂಡಲಿಲ್ಲ.

ನಂಬಿ ಕೆಟ್ಟರೇ ಮಹೇಶ್ ಕುಮಟಳ್ಳಿ ! ಮಂತ್ರಿಗಿರಿ ಸಿಗದಿದ್ದರೆ ಮುಂದಿನ ದಾರಿ ಏನು ?

ಇದೀಗ ಎರಡನೇ ಹಂತದಲ್ಲಿ ಫೆಬ್ರವರಿ 6 ರಂದು ಸಂಪುಟ ವಿಸ್ತರಣೆ ನಡೆಯಲಿದ್ದು ನೂತನ ಬಿಜೆಪಿ ಶಾಸಕರ ಜೊತೆಗೆ ಮೂವರು ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಮೂರು ಸ್ಥಾನಕ್ಕಾಗಿ ಸಾಕಷ್ಟು ಲಾಬಿಗಳು ನಡೆಯುತ್ತಿವೆ.

ಈ ಬಾರಿಯಾದರೂ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಎಸ್‌ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಸುಳ್ಯದ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರನ್ನು ಭೇಟಿಯಾಗಿದ್ದಾರೆ.

ಈ ಕುರಿತಾಗಿ ವಿಜಯ ಕರ್ನಾಟಕದ ಜೊತೆಗೆ ಮಾತನಾಡಿದ ಶಾಸಕ ಎಸ್‌. ಅಂಗಾರ “ ನನಗೆ ಸಚಿವ ಸ್ಥಾನ ನೀಡುವ ಕುರಿತಾಗಿ ಪಕ್ಷ ತೀರ್ಮಾನ ಮಾಡಬೇಕು. ಕಾರ್ಯಕರ್ತರು ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಈ ನಿಟ್ಟಿನಲ್ಲಿ ಪಕ್ಷ ಪರಿಗಣಿಸಬೇಕು” ಎಂದರು.

ಸಂಪುಟದಲ್ಲಿ ಬೆಳಗಾವಿಗೆ ಬಹುಪಾಲು

ಬಿಎಸ್‌ವೈ ಸಂಪುಟದಲ್ಲಿ ಬೆಳಗಾವಿಗೆ ಬಹುಪಾಲು ಸ್ಥಾನ ಸಿಗಲಿದೆ. ಈಗಾಗಲೇ ಬೆಳಗಾವಿ ಜಿಲ್ಲೆಗೆ ಡಿಸಿಎಂ ಪಟ್ಟ ನೀಡಲಾಗಿದೆ. ಇದೀಗ ನೂತನ ಬಿಜೆಪಿ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ. ಉಮೇಶ್ ಕತ್ತಿ ಸಂಪುಟದಲ್ಲಿ ಸೇರುವ ತವಕದಲ್ಲಿದ್ದಾರೆ. ಜೊತೆಗೆ ಮಹೇಶ್ ಕುಮಟಳ್ಳಿ ಕೂಡಾ ಲಾಬಿ ಮುಂದುವರಿಸಿದ್ದಾರೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ