ಆ್ಯಪ್ನಗರ

ತೆಂಗಿನ ಎಣ್ಣೆಯಿಂದ ಹೃದ್ರೋಗ ಬಾರದು

ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪತ್ತಿಯಾಗುವ ತೆಂಗಿನ ಎಣ್ಣೆಯ ಆರೋಗ್ಯ ಮೌಲ್ಯದ ಬಗ್ಗೆ ಆಗಾಗ ಚರ್ಚೆಗಳು ಹುಟ್ಟುತ್ತಲೇ ಇವೆ. ಅದರಲ್ಲೂ 2011ರಲ್ಲಿ ಜಾಗತಿಕವಾಗಿ ಸೂಪರ್‌ ಫುಡ್‌ ಎಂಬ ಮಾನ್ಯತೆ ಸಿಕ್ಕಿದ ಬಳಿಕ ಅದರ ಬಗ್ಗೆ ಅಪಪ್ರಚಾರ ಹೆಚ್ಚುತ್ತಿದೆ.

Vijaya Karnataka 24 Aug 2018, 9:26 am
ಬೆಂಗಳೂರು: ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪತ್ತಿಯಾಗುವ ತೆಂಗಿನ ಎಣ್ಣೆಯ ಆರೋಗ್ಯ ಮೌಲ್ಯದ ಬಗ್ಗೆ ಆಗಾಗ ಚರ್ಚೆಗಳು ಹುಟ್ಟುತ್ತಲೇ ಇವೆ. ಅದರಲ್ಲೂ 2011ರಲ್ಲಿ ಜಾಗತಿಕವಾಗಿ ಸೂಪರ್‌ ಫುಡ್‌ ಎಂಬ ಮಾನ್ಯತೆ ಸಿಕ್ಕಿದ ಬಳಿಕ ಅದರ ಬಗ್ಗೆ ಅಪಪ್ರಚಾರ ಹೆಚ್ಚುತ್ತಿದೆ.
Vijaya Karnataka Web Coconut Oil


ಭಾರತೀಯರು ಸಹಸ್ರಾರು ವರ್ಷಗಳಿಂದ ಬಳಸುತ್ತಿರುವ, ಕೇರಳದ ಪ್ರಧಾನ ಆಹಾರ ತೈಲವಾಗಿರುವ ತೆಂಗಿನೆಣ್ಣೆಯ ಬಗ್ಗೆ ಆಗಾಗ ಎತ್ತಲಾಗುತ್ತಿರುವ ತಕರಾರುಗಳೆಲ್ಲವೂ ಸುಳ್ಳು ಎನ್ನುವುದು ಕಾಲದಿಂದ ಕಾಲಕ್ಕೆ ಸಾಬೀತಾಗುತ್ತಿದ್ದರೂ ಹೊಸ ಹೊಸ ಧ್ವನಿಗಳನ್ನು ಎಬ್ಬಿಸಲಾಗುತ್ತಿರುವುದು ಅಚ್ಚರಿ. ತೆಂಗಿನ ಎಣ್ಣೆಯ ಆರೋಗ್ಯಕರ ಅಂಶದ ಬಗ್ಗೆ ಹೆಚ್ಚು ಅಪಪ್ರಚಾರಗಳು ಹುಟ್ಟಿದ್ದು ಅದು ಜೀವ ನಿರೋಧಕ ಅಂಶಗಳನ್ನು ಹೊಂದಿದೆ ಮತ್ತು ಸ್ಥೂಲದೇಹಿಗಳಲ್ಲಿ ತೂಕ ಕಡಿಮೆ ಮಾಡುವ ಶಕ್ತಿ ಹೊಂದಿದೆ ಎಂಬ ಅಂಶ ಹೆಚ್ಚು ಪ್ರಚಾರಕ್ಕೆ ಬಂದಾಗ. ನಿಜವೆಂದರೆ, ಈ ಅಂಶಗಳ ಬಗ್ಗೆ ಈಗಲೂ ಹೆಚ್ಚು ಚರ್ಚೆಗಳು ನಡೆಯುತ್ತಿಲ್ಲ. ಬದಲಾಗಿ ಅದು ಹೃದಯ ರೋಗಗಳಿಗೆ ಕಾರಣವಾಗುತ್ತದೆ ಎಂಬ ವಾದವನ್ನು ಹರಿಯಬಿಡಲಾಗುತ್ತಿದೆ.

ಖ್ಯಾತ ವೈದ್ಯ ಡಾ. ಬಿ.ಎಂ. ಹೆಗ್ಡೆ ಅವರ ಪ್ರಕಾರ, ತೆಂಗಿನ ಎಣ್ಣೆ ಭಾರತ ಮೂಲದ್ದೇ ಆದರೂ, ಅದಕ್ಕೊಂದು ಮಾನ್ಯತೆ ದೊರಕಿದ್ದು ಹಾರ್ವರ್ಡ್‌ ವಿವಿಯ ಪ್ರೊಫೆಸರ್‌ ಅದರ ಆರೋಗ್ಯದ ಗುಣಗಳನ್ನು ಪ್ರಚಾರ ಮಾಡಿದಾಗ. ಈಗ ಅದೇ ವಿವಿಯ ಪ್ರೊಫೆಸರ್‌ ತದ್ವಿರುದ್ಧ ವಾದ ಮಂಡನೆ ಮಾಡಿರುವುದು ಲಾಬಿಯೇ ಹೊರತು ಬೇರೇನಲ್ಲ.

ಸಂಬಂಧವೇ ಇಲ್ಲ


ಹಲವಾರು ಸಂಶೋಧನೆಗಳು ಮತ್ತು ವೈದ್ಯಕೀಯ ವರದಿಗಳು ತೆಂಗಿನ ಎಣ್ಣೆಗೂ ಹೃದಯ ರೋಗಗಳಿಗೂ ಸಂಬಂಧವೇ ಇಲ್ಲ ಎಂದು ಹೇಳಿವೆ. 'ಪ್ಯೂರ್‌' ಎಂಬ ಜರ್ನಲ್‌ನಲ್ಲಿ ಇದನ್ನು ಸಾಧಾರವಾಗಿ ನಿರೂಪಿಸಲಾಗಿದೆ.

ಯಾವುದು ಅಪಾಯಕಾರಿ?


ನಿಜವೆಂದರೆ, ಸಂತೃಪ್ತ ಕೊಬ್ಬು (ಸಾಚುರೇಟೆಡ್‌ ಫ್ಯಾಟ್ಸ್‌ ) ಇರುವ ತೈಲಗಳು ಅಪಾಯಕಾರಿಯಲ್ಲ. ಆಲಿವ್‌, ಸಾಸಿವೆ ಎಣ್ಣೆ, ಶೇಂಗಾ ಸೇರಿ ಎಲ್ಲ ರೀತಿಯ ಬೀಜದ ಎಣ್ಣೆಗಳಲ್ಲಿರುವ ಅನ್‌ ಸಾಚುರೇಟೆಡ್‌ ಮೋನೋ ಫ್ಯಾಟಿ ಆಸಿಡ್‌ಗಳು(ಮುಫಾ) ಕೂಡಾ ಡೇಂಜರಸ್‌ ಅಲ್ಲ. ಪಾಲಿ ಅನ್‌ ಸಾಚುರೇಟೆಡ್‌ ಫ್ಯಾಟಿ ಆಸಿಡ್‌(ಪುಫಾ) ಹೊಂದಿರುವ ಸೂರ್ಯಕಾಂತಿ, ಸೋಯಾಬೀನ್‌ ಮತ್ತಿತರ ಎಣ್ಣೆಗಳಿಂದ ತೊಂದರೆ ಇದೆ ಎನ್ನುತ್ತಾರೆ ಮುಂದುವರಿಕಾ ವೈದ್ಯಕೀಯ ಶಿಕ್ಷಣ ಸಂಶೋಧಕ ಡಾ. ಪ್ರವೀಣ್‌ ಜಾಕೊಬ್‌.

ತೆಂಗಿನ ಎಣ್ಣೆ ಬಳಕೆಯಿಂದ ಕೊಲೆಸ್ಟರಾಲ್‌ ಪ್ರಮಾಣ ಹೆಚ್ಚುತ್ತದೆ ಎನ್ನುವುದು ನಿಜ. ಆದರೆ, ಇದು ಹೃದಯಕ್ಕೆ ಅನಾರೋಗ್ಯ ಉಂಟು ಮಾಡುವ ಕೆಟ್ಟ ಕೊಲೆಸ್ಟರಾಲ್‌ ಅಲ್ಲ. ಪಾಲಿ ಅನ್‌ ಸಾಚುರೇಟೆಡ್‌ ತೈಲಗಳನ್ನು ಬಳಸುವುದರಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ. ಆದರೆ, ಅದೇ ಹೊತ್ತಿಗೆ ಒಳ್ಳೆಯ ಕೊಲೆಸ್ಟರಾಲ್‌ ಕೂಡಾ ಕಡಿಮೆಯಾಗುತ್ತದೆ ಎನ್ನುತ್ತಾರೆ ಅವರು.

ಸಮೀಕ್ಷೆಯಲ್ಲಿ ಕಂಡದ್ದು

ಶಿರಸಿ ಭಾಗದಲ್ಲಿ ತೆಂಗಿನ ಎಣ್ಣೆಯನ್ನೇ ಪ್ರಧಾನವಾಗಿ ಬಳಸುವ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಯಾರಿಗೂ ಹೃದಯ ಸಂಬಂಧಿ ಮತ್ತಿತರ ರೋಗಗಳು ಕಂಡಿರಲಿಲ್ಲ. ಆದರೆ, ಪುಫಾ ಮಾದರಿಯ ತೈಲ ಬಳಕೆ ಮಾಡಿದ ಮುಂದಿನ ಪೀಳಿಗೆಯಲ್ಲಿ 30% ಜನರಿಗೆ ಮಧುಮೇಹ ಮತ್ತು 25% ಜನರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ.

ಕರಿದರೂ ತೊಂದರೆ ಇಲ್ಲ

ತೆಂಗಿನ ಎಣ್ಣೆ ಅತಿ ಹೆಚ್ಚು ಸ್ಥಿರತೆ(ಸ್ಟೆಬಿಲಿಟಿ) ಹೊಂದಿರುವುದರಿಂದ ಕಾಯಿಸಿದರೂ ತನ್ನ ಮೂಲ ಗುಣ ಕಳೆದುಕೊಳ್ಳುವುದಿಲ್ಲ. ಹಾಗಾಗಿ ಇದರಲ್ಲಿ ಕರಿದ ತಿಂಡಿ ತಿಂದರೂ ತೊಂದರೆ ಇಲ್ಲ. ಅದೇ ಪುಫಾ ಮಾದರಿಯ ಎಣ್ಣೆಗಳು ಕ್ಯಾನ್ಸರ್‌ ಕಾರಕ ಆಲ್ಡಿಹೈಡ್‌ಗಳನ್ನು ಸೃಜಿಸುತ್ತವೆ ಎನ್ನುತ್ತಾರೆ ಡಾ. ಪ್ರವೀಣ್‌ ಜಾಕೊಬ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ