ಆ್ಯಪ್ನಗರ

ಬಿಜೆಪಿಗೆ ಗುತ್ತೇದಾರ್‌, ಸಂದೇಶ್‌ ?

ಚುನಾವಣೆ ಘೋಷಣೆ ಬೆನ್ನಲ್ಲಿಯೇ ಪಕ್ಷಾಂತರ ಪರ್ವ ಚುರುಕುಗೊಂಡಿದೆ...

Vijaya Karnataka 29 Mar 2018, 5:00 am
ಬೆಂಗಳೂರು : ಚುನಾವಣೆ ಘೋಷಣೆ ಬೆನ್ನಲ್ಲಿಯೇ ಪಕ್ಷಾಂತರ ಪರ್ವ ಚುರುಕುಗೊಂಡಿದೆ. ಕಾಂಗ್ರೆಸ್‌ ಶಾಸಕ ಮಾಲೀಕಯ್ಯ ಗುತ್ತೇದಾರ್‌ ಹಾಗೂ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಅವರು ಬಿಜೆಪಿ ಸೇರ್ಪಡೆಯಾಗಲು ವೇದಿಕೆ ಸಜ್ಜಾಗಿದೆ.
Vijaya Karnataka Web Malikayya Guttedar- Cong - Afzalpur


ಅಹಿಂದ ಮತಬ್ಯಾಂಕ್‌ ಛಿದ್ರಗೊಳಿಸುವುದಕ್ಕೆ ತಂತ್ರಗಾರಿಕೆ ರೂಪಿಸಿರುವ ಬಿಜೆಪಿ ಕಾಂಗ್ರೆಸ್‌ನ ಹಿರಿಯ ಶಾಸಕ ಮಾಲೀಕಯ್ಯ ಗುತ್ತೇದಾರ್‌ ಅವರಿಗೆ ಗಾಳ ಹಾಕಿದ್ದು, ಸದ್ಯದಲ್ಲೇ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಪಕ್ಷದ ಮಾಜಿ ಶಾಸಕ ಎಂ.ವೈ.ಪಾಟೀಲ್‌ ಅವರನ್ನು ಕರೆಸಿ ಮಾತುಕತೆ ನಡೆಸಿದ್ದು, ಅಫ್ಜಲ್‌ಪುರ ಶಾಸಕ ಗುತ್ತೇದಾರ್‌ ಅವರು ಬಿಜೆಪಿಗೆ ಸೇರುತ್ತಿದ್ದು ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ. ಚುನಾವಣೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಮೊದಲ ಶಾಸಕರ ಬೇಟೆ ಇದಾಗಲಿದ್ದು, ಗುಲ್ಬರ್ಗ ಜಿಲ್ಲೆಯಲ್ಲಿ ಇದು ಮಹತ್ವದ ಪರಿಣಾಮ ಬೀರಲಿದೆ.

ಆರು ಬಾರಿ ಶಾಸಕರಾಗಿರುವ ಗುತ್ತೇದಾರ್‌ ಅವರು ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಜತೆ ಭಿನ್ನಾಭಿಪ್ರಾಯ ಹೊಂದಿದ್ದು, ಕಳೆದ ಬಾರಿ ಎನ್‌ಸಿಪಿ ಸೇರುವುದಕ್ಕೆ ಪ್ರಯತ್ನ ನಡೆಸಿದ್ದರು. ಹಿಂದುಳಿದ ಈಡಿಗ ಸಮಾಜಕ್ಕೆ ಸೇರಿದ ಗುತ್ತೇದಾರ್‌ ಜಿಲ್ಲೆಯಲ್ಲಿ ತನ್ನದೇ ಆದ ಬಲ ಹೊಂದಿದ್ದು, ಕಾಂಗ್ರೆಸ್‌ಗೆ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಏಟು ಬೀಳುವ ಸಾಧ್ಯತೆ ಇದೆ.

ಆದರೆ ಗುತ್ತೇದಾರ್‌ ಪಕ್ಷ ಸೇರ್ಪಡೆಗೆ ಎಂ.ವೈ.ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಇಷ್ಟು ವರ್ಷಗಳ ಕಾಲ ಗುತ್ತೇದಾರ್‌ ವಿರುದ್ಧವೇ ಹೋರಾಟ ನಡೆಸಿಕೊಂಡು ಬಂದಿದ್ದು, ಈಗ ಸಹಕರಿಸುವುದಕ್ಕೆ ಸಾಧ್ಯವಿಲ್ಲ. ನಾನು ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿಯೇ ಸಿದ್ದ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಉಭಯ ಪಕ್ಷಗಳಿಂದಲೂ ಜಿಗಿತ ನಡೆಯುವ ಸಾಧ್ಯತೆ ಇದೆ.

ಸಂದೇಶ್‌ ಸೇರ್ಪಡೆ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಸಂದೇಶ್‌ ನಾಗರಾಜ್‌ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಮೈಸೂರಿನಲ್ಲಿ ಮಾರ್ಚ್‌ 30ರಂದು ಅಮಿತ್‌ ಶಾ ಸಮ್ಮುಖದಲ್ಲಿ ಸಂದೇಶ್‌ ನಾಗರಾಜ್‌ ಹಾಗೂ ಅವರ ಪುತ್ರ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ