ಆ್ಯಪ್ನಗರ

ಇಡಿಯಿಂದ ಡಿಕೆಶಿ ಬಂಧನ ಖಂಡಿಸಿ ಸೆ.11 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಅಕ್ರಮ ಹಣಕಾಸು ವರ್ಗಾವಣೆ ಆರೋಪಡಿಯಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನವನ್ನು ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ವ್ಯತ್ಯಯ ಆಗದಂತೆ ಬೆಂಗಳೂರು ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Vijaya Karnataka Web 10 Sep 2019, 8:35 pm
ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಸೆಪ್ಟಂಬರ್ 11 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ರಸ್ತೆ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
Vijaya Karnataka Web dk shivakumar arrest


ಪ್ರತಿಭಟನೆಯಿಂದ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಟ್ರಾಫಿಕ್ ಮಾರ್ಗಗಳಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. 13 ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದ್ದು 9 ಕಡೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು 25 ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.

ಪ್ರತಿಭಟನಾ ಮೆರವಣಿಗೆ ಬೆಳಗ್ಗೆ 11 ಗಂಟೆಗೆ ಆರಂಭವಾಗಿ ನ್ಯಾಷನಲ್ ಕಾಲೇಜು ಮೈದಾನ- ವಾಣಿ ವಿಲಾಸ ರಸ್ತೆ- ಸಜ್ಜನ್ ರಾವ್ ಸರ್ಕಲ್- ಮಿನರ್ವ ಸರ್ಕಲ್- ಜೆಸಿ ರಸ್ತೆ- ಶಿವಾಜಿ ಜಂಕ್ಷನ್- ಟೌನ್ ಹಾಲ್- ಮೈಸೂರು ಬ್ಯಾಂಕ್ ಮೂಲಕವಾಗಿ ಫ್ರೀಡಂ ಪಾರ್ಕ್ ತಲುಪಲಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂಧೋಬಸ್ಥ್ ಕೈಗೊಳ್ಳಲಾಗಿದೆ. ಕೋಲಾರ, ಕನಕಪುರ, ರಾಮನಗರ ಭಾಗದಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು , ಯಾವುದೇ ಅಹಿತಕರ ಘಟನೆ ನಡೆದರೆ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಿ - ಟ್ವೀಟ್ ಮೂಲಕ ಡಿಕೆಶಿ ಮನವಿ

ಬಂಧನ ಖಂಡಿಸಿ ನಡೆಯಲಿರುವ ಪ್ರತಿಭಟನೆ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಸಚಿವ ಡಿಕೆ ಶಿವಕುಮಾರ್, ತನ್ನ ಪರವಾಗಿ ಪ್ರತಿಭಟನೆ ಆಯೋಜನೆ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಪ್ರತಿಭಟನೆಯ ವೇಳೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವಾಗದಂತೆ ನಡೆದುಕೊಳ್ಳಬೇಕು ಎಂದು ವಿನಂತಿಸಿದ್ದಾರೆ.


ಇನ್ನು ಪ್ರತಿಭಟನೆಗೆ ಜೆಡಿಎಸ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು ಡಿಕೆ ಶಿವಕುಮಾರ್ ಬಂಧನ ರಾಜಕೀಯ ಉದ್ದೇಶದಿಂದ ನಡೆದಿದೆ ಎಂದು ಆರೋಪಿಸಿದೆ. ಇದೇ ವೇಳೆ ಪ್ರತಿಭಟನೆ ಶಾಂತಿಯುತವಾಗಿ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. ಶಾಂತ ರೀತಿಯ ಪ್ರತಿಭಟನೆಗೆ ಅಭ್ಯಂತರವಿಲ್ಲ ಎಂದ ಅವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಸೂಕ್ತ ಕ್ರಮ ಜರಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ