ಆ್ಯಪ್ನಗರ

ಕಾಂಗ್ರೆಸ್‌ಗೆ ಸವಾಲಾದ ಬಳ್ಳಾರಿ, ಶಿವಮೊಗ್ಗ ಅಭ್ಯರ್ಥಿ ಆಯ್ಕೆ

ಹೈಕಮಾಂಡ್‌ ಪ್ರತಿನಿಧಿ ನೇತೃತ್ವದ ಸಭೆ ಬಳಿಕವೂ ಬಳ್ಳಾರಿ ...

Vijaya Karnataka 11 Oct 2018, 5:00 am
ಬೆಂಗಳೂರು : ಹೈಕಮಾಂಡ್‌ ಪ್ರತಿನಿಧಿ ನೇತೃತ್ವದ ಸಭೆ ಬಳಿಕವೂ ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ.
Vijaya Karnataka Web congress-flag


ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಮಂಗಳವಾರ ಸಭೆ ನಡೆಸಿದ್ದರು. ಬಳ್ಳಾರಿಯಲ್ಲಿ ಗೊಂದಲ ಇದ್ದದ್ದರಿಂದ ಈ ಕ್ಷೇತ್ರದ ಉಮೇದುವಾರರ ಆಯ್ಕೆ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ವಹಿಸಲಾಗಿತ್ತು. ಶಿವಮೊಗ್ಗದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅಥವಾ ಸ್ಥಳೀಯ ಮುಖಂಡ ಸುಂದರೇಶ್‌ ಅವರನ್ನು ಕಣಕ್ಕಿಳಿಸುವ ನಿಲುವಿಗೆ ಬರಲಾಗಿತ್ತು. ಆದರೆ, ಈಗ ಈ ನಾಯಕರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ.

ವೇಣುಗೋಪಾಲ್‌ ಸೂಚನೆಯಂತೆ ಬಳ್ಳಾರಿ ಅಭ್ಯರ್ಥಿ ಶೋಧಕ್ಕೆ ಸಚಿವ ಡಿಕೆಶಿ ಬುಧವಾರ ಸಭೆ ನಡೆಸಿದರೂ ಫಲಪ್ರದವಾಗಲಿಲ್ಲ. ಶಾಸಕರಾದ ಆನಂದ್‌ ಸಿಂಗ್‌, ಪಿ.ಟಿ. ಪರಮೇಶ್ವರ್‌ ನಾಯ್ಕ್‌, ಆನಂದ್‌ ಸಿಂಗ್‌ ಹಾಗೂ ಮಾಜಿ ಸಚಿವ ಸಂತೋಷ್‌ ಲಾಡ್‌ ಗೈರು ಹಾಜರಾದರು. ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್‌ ಪ್ರಸಾದ್‌ ಅವರನ್ನು ಕಣಕ್ಕಿಳಿಸಲು ಪಕ್ಷದಲ್ಲಿ ಒಲವು ತೋರಲಾಗಿದೆ. ಇದಕ್ಕೆ ಜಿಲ್ಲೆಯ ಇತರ ಶಾಸಕರು ಅಸಮ್ಮತಿ ಸೂಚಿಸಿದ್ದಾರೆ. ಪಕ್ಷಕ್ಕಾಗಿ ಹಲವಾರು ವರ್ಷದಿಂದ ದುಡಿದಿರುವ ನಿಷ್ಠಾವಂತರನ್ನು ಗುರುತಿಸಬೇಕು. ಈ ಸಂಬಂಧ ಮಾಜಿ ಶಾಸಕ ಬಿ.ಎಂ. ನಾಗರಾಜ್‌ ಹಾಗೂ ಮಹಿಳಾ ಕಾಂಗ್ರೆಸ್‌ನ ನಾಗವೇಣಿ ಹೆಸರನ್ನು ಮುಂಚೂಣಿಗೆ ತರಲಾಗಿದೆ. ನಾಗೇಂದ್ರ ಜತೆಗೆ ಬಿಜೆಪಿ ನಾಯಕರು ಸತತ ಸಂಪರ್ಕದಲ್ಲಿದ್ದಾರೆ. ಇಂಥ ಸನ್ನಿವೇಶದಲ್ಲಿ ಅವರ ಅಣ್ಣನಿಗೆ ಟಿಕೆಟ್‌ ನೀಡಬಾರದು ಎಂಬ ಒತ್ತಡವೂ ಪಕ್ಷದೊಳಗಿದೆ. ಇದರಿಂದಾಗಿ ಬಳ್ಳಾರಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ ಎನ್ನಲಾಗಿದೆ.

ಸ್ಪರ್ಧೆಗೆ ನಿರಾಕರಣೆ

ಶಿವಮೊಗ್ಗದಿಂದ ಸ್ಪರ್ಧಿಸಲು ಕಿಮ್ಮನೆ ರತ್ನಾಕರ್‌ ನಿರಾಕರಿಸಿದ್ದರು. ಇತರ ನಾಯಕರೂ ಸ್ಪರ್ಧೆಗೆ ಮನಸ್ಸು ಮಾಡಿರಲಿಲ್ಲ. ಹಾಗಾಕಿ ಕಿಮ್ಮನೆ ಸೇರಿದಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸುಂದರೇಶ್‌ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತೊಮ್ಮೆ ಸಭೆ ನಡೆಸಿದರು. ಪಕ್ಷದ ಪ್ರತಿಷ್ಠೆ ಉಳಿಸಲು ಕಣಕ್ಕಿಳಿಯುವಂತೆ ಮನವೊಲಿಸುವ ಯತ್ನ ಮಾಡಿದರು. ಆದರೆ, ಕಿಮ್ಮನೆ ನಿಲುವಿನಲ್ಲಿ ಬದಲಾವಣೆ ಆಗಲಿಲ್ಲ. ವಯಸ್ಸಿನ ಕಾರಣ ನೀಡಿ ಕಾಗೋಡು ಅವರೂ ಸ್ಪರ್ಧಿಸುವುದಲ್ಲವೆಂದರು. ಈ ಚುನಾವಣೆಯಲ್ಲಿ ತಮಗೆ ಎಲ್ಲ ರೀತಿಯ ಸಹಕಾರವನ್ನು ಪಕ್ಷ ನೀಡಿದರೆ ಸ್ಪರ್ಧಿಸಲಾಗುವುದು. ಜತೆಗೆ 2019ರ ಲೋಕಸಭೆ ಚುನಾವಣೆಯಲ್ಲೂ ಟಿಕೆಟ್‌ ಖಾತರಿ ಪಡಿಸುವಂತೆ ಸುಂದರೇಶ್‌ ಷರತ್ತು ಹಾಕಿದರು. ಈ ವಿಚಾರದಲ್ಲಿ ಭರವಸೆ ನೀಡಲಾಗದೆಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು. ಇದರೊಂದಿಗೆ ಈ ಮಾತುಕತೆಯೂ ಮುರಿದು ಬಿತ್ತು ಎಂದು ಹೇಳಲಾಗಿದೆ.

ಒಂದು ವೇಳೆ ಶಿವಮೊಗ್ಗದಿಂದ ಜೆಡಿಎಸ್‌ ಸ್ಪರ್ಧಿಸುವುದಾದರೆ ಕ್ಷೇತ್ರ ಬಿಟ್ಟುಕೊಡುವುದು ಉತ್ತಮವೆಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿದೆ. ಆದರೆ, ಜೆಡಿಎಸ್‌ನಲ್ಲೂ ಸೂಕ್ತ ಉಮೇದುವಾರರು ಇಲ್ಲದ ಸ್ಥಿತಿಯಿದೆ. ಮಾಜಿ ಶಾಸಕ ಮಧು ಬಂಗಾರಪ್ಪ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದ್ದರೂ ಅವರಿಗೇ ಆಸಕ್ತಿಯಿಲ್ಲ. ಮಧು ವಿದೇಶ ಪ್ರವಾಸದಲ್ಲಿದ್ದು, ಉಪ ಚುನಾವಣೆ ಗೊಡವೆಯಿಂದಲೇ ದೂರವಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಮಧು ಬಂಗಾರಪ್ಪ ವಾಪಸಾಗುವುದನ್ನು ನಿರೀಕ್ಷಿಸಲಾಗುತ್ತಿದೆ. ಆ ಬಳಿಕ ಶಿವಮೊಗ್ಗದ ಸ್ಪರ್ಧೆ ಬಗ್ಗೆ ಸ್ಪಷ್ಟತೆ ಸಿಗುವುದಾಗಿ ವಿಜಯಪುರದಲ್ಲಿ ಮಾತಾಡಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿರುವುದು ಕುತೂಹಲ ಕೆರಳಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ