ಆ್ಯಪ್ನಗರ

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆ ನಿರ್ಣಯ: ಎಚ್. ಕೆ. ಪಾಟೀಲ್ ಆಕ್ರೋಶ

'ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡದಂತೆ ನಿರ್ಣಯ ಅಂಗೀಕಾರ ಮಾಡಿರುವುದು ಸರಿಯಲ್ಲ. ಇದು ಅತ್ಯಂತ ಖಂಡನೀಯ. ಇದು ಅಸಮರ್ಪಕ, ಯಾರೂ ಒಪ್ಪಲು ಸಾಧ್ಯವೇ ಇಲ್ಲದ ನಿರ್ಣಯವಾಗಿದೆ. ಈಗಾಗಲೇ ಕಾವೇರಿ ವಿವಾದ ಇತ್ಯರ್ಥವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ' - ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಹಾಗೂ ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ಕೈಗೊಂಡಿರುವ ಸರ್ವಾನುಮತದ ನಿರ್ಣಯದ ವಿರುದ್ಧ ಕಾಂಗ್ರೆಸ್ ನಾಯಕ ಎಚ್. ಕೆ. ಪಾಟೀಲ್ ಕಿಡಿ ನುಡಿ.

Authored byಇರ್ಷಾದ್ ಉಪ್ಪಿನಂಗಡಿ | Edited byದಿಲೀಪ್ ಡಿ. ಆರ್. | Vijaya Karnataka Web 21 Mar 2022, 1:12 pm

ಹೈಲೈಟ್ಸ್‌:

  • ಮೇಕೆದಾಟು ಯೋಜನೆ ಸಂಬಂಧ ಶುಕ್ರವಾರ ರಾಜ್ಯದ ಸರ್ವ ಪಕ್ಷಗಳ ಸಭೆ ನಡೆದಿತ್ತು
  • ಸಭೆಯಲ್ಲಿ ಮೇಕೆದಾಟು ಸೇರಿದಂತೆ ಇತರ ಜಲ ವಿವಾದಗಳ ಕುರಿತಾಗಿ ಚರ್ಚೆ ನಡೆದಿತ್ತು
  • ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರಕ್ಕೆ ತೆರಳುವ ಬಗ್ಗೆಯೂ ರಾಜ್ಯದ ನಾಯಕರು ಚಿಂತಿಸಿದ್ದರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web hk patil
ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆ ನಿರ್ಣಯ: ಎಚ್. ಕೆ. ಪಾಟೀಲ್ ಆಕ್ರೋಶ
ಬೆಂಗಳೂರು: ಕರ್ನಾಟಕ ಸರ್ಕಾರ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿರುವ ಯೋಜನೆಯ ಜಾರಿ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರವಾಗಿದೆ. ಇದಕ್ಕೆ ತಮಿಳುನಾಡು ಬಿಜೆಪಿ ಘಟಕ ಕೂಡಾ ದನಿಗೂಡಿಸಿದೆ. ಈ ಬೆಳವಣಿಗೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಎಚ್. ಕೆ. ಪಾಟೀಲ್ ತೀವ್ರವಾಗಿ ವಿರೋಧಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡದಂತೆ ನಿರ್ಣಯ ಅಂಗೀಕಾರ ಮಾಡಿರುವುದು ಸರಿಯಲ್ಲ. ಇದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಾರಾಜ್ಯ ಜಲವಿವಾದ ಸಂಬಂಧ ಅಗತ್ಯವಿದ್ದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ: ಬಸವರಾಜ ಬೊಮ್ಮಾಯಿ
ಇದು ಅಸಮರ್ಪಕ, ಯಾರೂ ಒಪ್ಪಲು ಸಾಧ್ಯವೇ ಇಲ್ಲದ ನಿರ್ಣಯವಾಗಿದೆ. ಈಗಾಗಲೇ ಕಾವೇರಿ ವಿವಾದ ಇತ್ಯರ್ಥವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಎಚ್. ಕೆ. ಪಾಟೀಲ್ ಕಿಡಿ ಕಾರಿದರು.


ಮೇಕೆದಾಟು ಯೋಜನೆ ಸೇರಿದಂತೆ ಅಂತಾರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಧಾನಸೌಧದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿತ್ತು. ಸಭೆಯಲ್ಲಿ ಮೇಕೆದಾಟು ಸೇರಿದಂತೆ ಇತರ ಜಲ ವಿವಾದಗಳ ಕುರಿತಾಗಿ ಚರ್ಚೆ ನಡೆದಿತ್ತು.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಗತ್ಯವಿದ್ದರೆ ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರಕ್ಕೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಯೋಜನೆ ಜಾರಿಗೆ ಆಗ್ರಹಿಸುವ ಕುರಿತಾಗಿ ಸಿಎಂ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದರು. ಅಷ್ಟೇ ಅಲ್ಲದೆ ಯೋಜನೆ ಜಾರಿಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯುವ ಪ್ರಯತ್ನ ನಡೆಸಲಾಗುವುದು ಎಂಬ ಭರವಸೆಯನ್ನೂ ಸಿಎಂ ಬೊಮ್ಮಾಯಿ ನೀಡಿದ್ದರು.

ಈ‌ ಬೆಳವಣಿಗೆಗಳ ನಡುವೆಯೇ ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಮಾರ್ಚ್ 21ರಂದು ಮೇಕೆದಾಟು ಯೋಜನೆ ಜಾರಿ ವಿರೋಧಿಸಿ ಸರ್ವ ಪಕ್ಷಗಳ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಇದು ಕರ್ನಾಟಕ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಂತಾರಾಜ್ಯ ಜಲವಿವಾದ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ
ತಮಿಳುನಾಡಿನ ವಾದ ಏನು..?

ಕರ್ನಾಟಕ ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ಈಗಾಗಲೇ ಅನುದಾನ ನಿಗದಿಪಡಿಸಿದೆ. ಆದ್ರೆ, ಕರ್ನಾಟಕ ಸರ್ಕಾರವು ತಮಿಳುನಾಡಿನ ಅನುಮತಿ ಇಲ್ಲದೆಯೇ ತನ್ನ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಿದೆ ಅನ್ನೋದು ತಮಿಳುನಾಡು ಸರ್ಕಾರದ ಆಕ್ಷೇಪ. ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಮಾತನಾಡಿದ ಸಚಿವ ದೊರೈ ಮುರುಗನ್, ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಮಾನ್ಯತೆ ನೀಡದಿರಲು ಹಾಗೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಅನುಮತಿ ನೀಡದಿರಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಮಂಡಿಸಿದಾಗ ಎಐಎಡಿಎಂಕೆ, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಸದಸ್ಯರು ಪಕ್ಷ ಬೇಧ ಮರೆತು ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕೂಡಾ ಸುಪ್ರೀಂ ಕೋರ್ಟ್‌ ಹಾಗೂ ಕಾವೇರಿ ನದಿ ನೀರು ಪ್ರಾಧಿಕಾರದ ಸಲಹೆ ಪಡೆಯದೆ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಸದಸ್ಯರು ಆಗ್ರಹಿಸಿದರು. ತಮಿಳುನಾಡಿನ ಕಾವೇರಿ ಕೊಳ್ಳದ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ಯೋಜನೆ ವಿರುದ್ಧ ಹೋರಾಡಲು ತಮಿಳುನಾಡು ವಿಧಾನಸಭೆ ನಿರ್ಧರಿಸಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ