ಆ್ಯಪ್ನಗರ

ರಾಜ್ಯ ರಾಜಕಾರಣದಲ್ಲಿ ಸಿ.ಡಿ ಸದ್ದು, ಕಾಂಗ್ರೆಸ್‌ನಿಂದ ಕಾದು ನೋಡುವ ಲೆಕ್ಕಾಚಾರ

ರಾಜ್ಯ ರಾಜಕಾರಣದಲ್ಲಿ ಸಿ.ಡಿ ವಿಚಾರ ಕೋಲಾಹಲ ಸೃಷ್ಟಿಸಿದೆ. ಸಿ.ಡಿ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ ಎಂದು ಕಾಂಗ್ರೆಸ್ ಒತ್ತಾಯ ಪಡಿಸಿದರೂ ಸದ್ಯ ಒಂದು ಹಂತದಲ್ಲಿ ಅಂತರವನ್ನು ಕಾಯ್ದುಕೊಂಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

Vijaya Karnataka Web 15 Jan 2021, 10:37 am
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿ.ಡಿ ಬಾಂಬ್ ಭಾರೀ ಸದ್ದು ಮಾಡುತ್ತಿದೆ. ಸಚಿವ ಸ್ಥಾನವನ್ನು ಪಡೆದುಕೊಳ್ಳಲು ಸಿ.ಡಿ ಮೂಲಕ ಬ್ಲ್ಯಾಕ್‌ ಮೇಲ್ ಮಾಡಲಾಗಿದೆ ಎಂಬ ಬಿಜೆಪಿ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಸದ್ಯ ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಸಿ.ಡಿ ವಿಚಾರವಾಗಿ ನಾವು ಸದ್ದು ಮಾಡುವುದಕ್ಕಿಂತ ಕಮಲ ಪಕ್ಷದೊಳಗಿನ ಧ್ವನಿಯೇ ಸದ್ದಾಗಲಿ ಎಂಬುವುದು ಕಾಂಗ್ರೆಸ್ ಲೆಕ್ಕಾಚಾರ.
Vijaya Karnataka Web Siddaramaiah DK Shivakumar


ಸಿ.ಡಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರೂ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಸಿ.ಡಿ ವಿಚಾರವಾಗಿ ತನಿಖೆ ನಡೆಯಲಿ ಎಂದಷ್ಟೇ ಅವರು ಆಗ್ರಹಿಸಿದ್ದಾರೆ. ಹೊರತಾಗಿ ಕೈಗೆ ಸಿಕ್ಕಿರುವ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ಯೋಚನೆಯಲ್ಲಿ ಕಾಂಗ್ರೆಸ್ ಪಕ್ಷ ಇದ್ದ ಹಾಗಿಲ್ಲ ಎಂಬುವುದು ಮೂಲಗಳ ಮಾಹಿತಿ.

ಅಮಿತ್ ಶಾ ಮುಂದೆ 'ಆರೋಪ ಪಟ್ಟಿ' ಮಂಡಿಸಲು ಕಮಲ ಅತೃಪ್ತರ ಸಿದ್ಧತೆ! ಬಿಎಸ್‌ವೈ ಪ್ರತಿತಂತ್ರ ಏನು?

ಇದಕ್ಕೆ ಪೂರಕ ಎಂಬಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಕೂಡಾ ಹೇಳಿಕೆ ನೀಡಿದ್ದಾರೆ. ಸಿ.ಡಿ ವಿಚಾರವಾಗಿ ಕಾಂಗ್ರೆಸ್‌ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಮಾಹಿತಿ ಇದೆ. ಆದರೆ ಅವರು ಮಾತನಾಡುತ್ತಿಲ್ಲ ಎನ್ನುವ ಮೂಲಕ ಸಿಡಿ ಗುಮ್ಮದ ಬಗ್ಗೆ ಪ್ರತಿಪಕ್ಷಗಳ ನಿಲುವಿನ ಬಗ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಪ್ರತಿಪಕ್ಷವಾಗಿ ಕಾಂಗ್ರೆಸ್ ಸರ್ಕಾರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಸಿ.ಡಿ ಮೂಲಕವೇ ಕಾಂಗ್ರೆಸ್ ಕೆಲವು ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಗುತ್ತಿದೆ, ಬಿಜೆಪಿ ಶಾಸಕರು ಅನುದಾನ ಕೇಳಿದರೆ ಹಣ ಇಲ್ಲ ಎನ್ನುತ್ತಾರೆ ಸಿಎಂ ಎಂದು ಅವರು ಆರೋಪ ಮಾಡಿದ್ದಾರೆ.

ಈ ಹಿಂದೆ ಸಿಎಂ ಬಿಎಸ್‌ವೈ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗಲೂ ಆರಂಭದಲ್ಲಿ ಕಾಂಗ್ರೆಸ್ ಧ್ವನಿ ಎತ್ತಿತ್ತು. ಹೋರಾಟ ನಡೆಸುವ ಎಚ್ಚರಿಕೆಯನ್ನು ಕೊಟ್ಟಿತ್ತು. ಆದರೆ ಬಳಿಕ ಎಲ್ಲವೂ ತಣ್ಣಗಾಗಿ ಹೋಯಿತು. ಇದೀಗ ಸಿ.ಡಿ ವಿಚಾರವಾಗಿಯೂ ನ್ಯಾಯಾಂಗ ತನಿಖೆಗೆ ಡಿಕೆ ಶಿವಕುಮಾರ್ ಆಗ್ರಹ ಮಾಡಿದ್ದಾರೆ. ಆದರೂ ಒಂದು ಹಂತದಲ್ಲಿ ಅಂತರವನ್ನು ಕಾಯ್ದುಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್ ಪಕ್ಷಕ್ಕೆ ಇದ್ದಂತಿದೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ಇದರ ವಿರುದ್ಧ ಧ್ವನಿ ಎತ್ತುವುದಕ್ಕಿಂತ ಬಿಜೆಪಿ ಒಳಗಡೆಯಿಂದಲೇ ಕಲಹ ಸ್ಫೋಟಗೊಳ್ಳಲಿ ಎಂಬುವುದು ಇದರ ಹಿಂದಿರುವ ಲೆಕ್ಕಾಚಾರವಾಗಿದೆ ಎಂಬುವುದು ಕಾಂಗ್ರೆಸ್ ಮೂಲಗಳ ಮಾಹಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ