ಆ್ಯಪ್ನಗರ

ಶುಲ್ಕ ಏರಿಕೆ: ಸರಕಾರ- ಖಾಸಗಿ ಮಧ್ಯೆ ಹಗ್ಗಜಗ್ಗಾಟ

2018-19ನೇ ಸಾಲಿನಲ್ಲಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರಕಾರಿ ಕೋಟಾದ ಸೀಟುಗಳ ಪ್ರವೇಶ ಶುಲ್ಕ ಹೆಚ್ಚಳ ಸಂಬಂಧ ರಾಜ್ಯ ಸರಕಾರ ಹಾಗೂ ಖಾಸಗಿ ಆಡಳಿತ ಮಂಡಳಿಗಳ ಒಕ್ಕೂಟದ ನಡುವೆ ಹಗ್ಗ-ಜಗ್ಗಾಟ ಆರಂಭವಾಗಿದೆ.

Vijaya Karnataka 14 Jun 2018, 11:00 am
ಬೆಂಗಳೂರು: 2018-19ನೇ ಸಾಲಿನಲ್ಲಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರಕಾರಿ ಕೋಟಾದ ಸೀಟುಗಳ ಪ್ರವೇಶ ಶುಲ್ಕ ಹೆಚ್ಚಳ ಸಂಬಂಧ ರಾಜ್ಯ ಸರಕಾರ ಹಾಗೂ ಖಾಸಗಿ ಆಡಳಿತ ಮಂಡಳಿಗಳ ಒಕ್ಕೂಟದ ನಡುವೆ ಹಗ್ಗ-ಜಗ್ಗಾಟ ಆರಂಭವಾಗಿದೆ.
Vijaya Karnataka Web counselling


ಕಳೆದ ಮೂರು ವರ್ಷಗಳಿಂದ ಶುಲ್ಕ ಹೆಚ್ಚಳ ಮಾಡದಿರುವುದರಿಂದ ಎಂಜಿನಿಯರಿಂಗ್‌ ಪ್ರವೇಶ ಶುಲ್ಕವನ್ನು ಶೇ.30ರಷ್ಟು ಏರಿಸಬೇಕೆಂದು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಬೇಡಿಕೆ ಮುಂದಿಟ್ಟರೆ, ಅಷ್ಟೊಂದು ಶುಲ್ಕ ಹೆಚ್ಚಿಸುವುದು ಅಸಾಧ್ಯ ಎಂದು ಹೇಳುವ ಮೂಲಕ ಸರಕಾರ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಬುಧವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಆಡಳಿತ ಮಂಡಳಿ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ, ಸರ್ವ ಸಮ್ಮತವಾಗುವಂಥ ಪ್ರಸ್ತಾವನೆ ಸಲ್ಲಿಸುವಂತೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಸೂಚಿಸಲಾಯಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ''ಅಲ್ಲದೆ, ಶೇ.30ರಷ್ಟು ಶುಲ್ಕ ಏರಿಕೆ ಮಾಡುವುದರಿಂದ ಬಡ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತೀವ್ರ ತೊಂದರೆಯಾಗಲಿದೆ. ಈ ಬಗ್ಗೆ ಸರ್ವ ಸಮ್ಮತ ನಿರ್ಧಾರ ಕೈಗೊಂಡು ಸೂಕ್ತ ಪ್ರಸ್ತಾವನೆ ಸಲ್ಲಿಸಿದ ನಂತರ ಒಂದು ವಾರದೊಳಗೆ ನಾನೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ'' ಎಂದು ಹೇಳಿದರು. ''ಸರಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಶೇ 8ರಷ್ಟು ಶುಲ್ಕ ಹೆಚ್ಚಿಸಬೇಕೆಂದು ಶುಲ್ಕ ನಿಯಂತ್ರಣ ಪ್ರಾಧಿಕಾರ ಸರಕಾರಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ,'' ಎಂದೂ ಹೇಳಿದರು. ''ನಾನು ಮುಖ್ಯಮಂತ್ರಿಯಾಗಿರುವವರೆಗೆ ಉನ್ನತ ಶಿಕ್ಷಣ ಖಾತೆಯನ್ನೂ ನಾನೇ ನಿರ್ವಹಿಸುತ್ತೇನೆ'' ಎಂದು ಹೇಳಿದರು.

ಶುಲ್ಕ ಹೆಚ್ಚಳ ಎಷ್ಟಾಗಬಹುದು?

ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶ ಶುಲ್ಕ 55,000 ರೂ. ಇದೆ. ಖಾಸಗಿ ಕಾಲೇಜುಗಳ ಬೇಡಿಕೆಯಂತೆ ಶೇ 30ರಷ್ಟು ಶುಲ್ಕ ಹೆಚ್ಚಳವಾದರೆ 16,500 ರೂ., ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಒಪ್ಪಿದಂತೆ ಶೇ 15ರಷ್ಟಾದರೆ 8,250 ರೂ. ಹಾಗೂ ಶುಲ್ಕ ನಿಯಂತ್ರಣ ಪ್ರಾಧಿಕಾರದ ಶಿಫಾರಸಿನಂತೆ ಶೇ 8ರಷ್ಟು ಹೆಚ್ಚಳವಾದರೆ 4,400 ರೂ. ಶುಲ್ಕ ಹೆಚ್ಚಳವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ