ಆ್ಯಪ್ನಗರ

ಬಂದ್‌ ಅಸಂವಿಧಾನಿಕವೆಂದು ಕೋರ್ಟ್‌ ಸಾರಿದೆ, ಮತ್ತೆ ಆದೇಶ ನೀಡಬೇಕೆ?

ಬಂದ್‌ ಮಾಡುವುದು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ, ಈ ಕುರಿತು ರಾಜ್ಯ ಸರಕಾರಕ್ಕೂ ಫೆ...

Vijaya Karnataka 11 Apr 2018, 5:00 am
ಬೆಂಗಳೂರು: ಬಂದ್‌ ಮಾಡುವುದು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ, ಈ ಕುರಿತು ರಾಜ್ಯ ಸರಕಾರಕ್ಕೂ ಫೆ.4ರಂದೇ ಸ್ಪಷ್ಟ ಆದೇಶ ನೀಡಲಾಗಿದೆ, ಆದರೂ ಮತ್ತೆ ಬಂದ್‌ ಆಚರಣೆಗೆ ತಡೆ ಆದೇಶ ನೀಡುವ ಅಗತ್ಯವಿದೆಯೇ ಎಂದು ಹೈಕೋರ್ಟ್‌ ಮಂಗಳವಾರ ಪ್ರಶ್ನಿಸಿತು.
Vijaya Karnataka Web court


ಕನ್ನಡ ಪರ ಸಂಘಟನೆಗಳು ಪದೇ ಪದೆ ಬಂದ್‌ ಗೆ ಕರೆ ನೀಡುತ್ತಿರುವುದನ್ನು ಪ್ರಶ್ನಿಸಿ ವಕೀಲರಾದ ನಟರಾಜ್‌, ರಾಘವೇಂದ್ರ ಮತ್ತಿತರರು ಸಲ್ಲಿಸಿರುವ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಬಿ.ಎಂ.ಶ್ಯಾಮ್‌ ಸುಂದರ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದವು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ಪೀಠ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಬುಧವಾರಕ್ಕೆ ಮುಂದೂಡಿ, ಸರಕಾರ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಸೂಚನೆ ನೀಡಿತು.

ಅರ್ಜಿದಾರರ ಪರ ವಕೀಲರು ''ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ವಾಟಾಳ್‌ ನಾಗರಾಜ್‌ ಏ.12ರಂದು ಬಂದ್‌ಗೆ ಕರೆ ನೀಡಿದ್ದರು. ಮತ್ತೆ ವಾಪಸ್‌ ಪಡೆದಿದ್ದಾರೆ. ಈ ರೀತಿ ಮತ್ತೆ ಮತ್ತೆ ಬಂದ್‌ ಆಚರಿಸುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ''ಎಂದರು.

ಆಗ ನ್ಯಾಯಪೀಠ ''ಕೋರ್ಟ್‌ ಫೆ.4ರಂದು ಬಂದ್‌ ಸಂವಿಧಾನ ಬಾಹಿರ, ಅದನ್ನು ಆಚರಿಸಬಾರದು, ರಾಜ್ಯ ಸರಕಾರ ಸಾಮಾನ್ಯ ಜನಜೀವನಕ್ಕೆ ತೊಂದರೆ ಆಗುವ ರೀತಿ ಬಂದ್‌ಗೆ ಅವಕಾಶ ಮಾಡಿಕೊಡಬಾರದು ಎಂದು ಆದೇಶಿಸಿದೆ. ಆದಾದ ನಂತರ ಯಾವ ಬಂದ್‌ ನಡೆದಿಲ್ಲ. ಅಲ್ಲದೆ, ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಉಭಯ ರಾಜ್ಯಗಳ ಜನತೆ ಶಾಂತಿ ಮತ್ತು ಸಂಯಮದಿಂದ ವರ್ತಿಸಬೇಕು ಎಂದು ಹೇಳಿದೆ. ಹಾಗಾಗಿ ಮತ್ತೆ ಹೈಕೋರ್ಟ್‌ ಈ ವಿಷಯದಲ್ಲಿ ಆದೇಶ ನೀಡುವ ಅಗತ್ಯವಿಲ್ಲ ''ಎಂದರು.

''ರಾಜ್ಯ ಸರಕಾರ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದ್ದರೆ ಏನಾದರೂ ಕ್ರಮ ಕೈಗೊಳ್ಳಬಹುದು, ಆದರೆ ಆ ರೀತಿಯಲ್ಲಿ ಏನೂ ಆಗಿಲ್ಲ.ಆದ್ದರಿಂದ ಏನು ಆದೇಶ ನೀಡಲು ಸಾಧ್ಯ,'' ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎನ್‌.ಪಿ.ಅಮೃತೇಶ್‌ ''ಒಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಪದೇ ಪದೇ ಬಂದ್‌ಗೆ ಕರೆ ನೀಡುತ್ತಾ, ಎಲ್ಲರನ್ನೂ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಆದರೆ ಸರಕಾರ ಆ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ '' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ