ಆ್ಯಪ್ನಗರ

ಡಿಕೆಶಿ ಆಸ್ತಿ 5 ವರ್ಷದಲ್ಲಿ 368 ಕೋಟಿ ರೂ. ಹೆಚ್ಚಳ!

ಕಳೆದ ಚುನಾವಣೆಯಲ್ಲೇ ಅವರು ದೇಶದಲ್ಲಿಯೇ 2ನೇ ಅತಿ ಶ್ರೀಮಂತ ರಾಜಕಾರಣಿ ಎಂದೆನಿಸಿದ್ದರು. ಇದೀಗ ಅವರ ಆಸ್ತಿಪಾಸ್ತಿ ಎರಡು ಪಟ್ಟು ಹೆಚ್ಚಾಗಿದೆ.

Vijaya Karnataka 20 Apr 2018, 10:01 am
ಹಾರೋಹಳ್ಳಿ (ಕನಕಪುರ ): ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ಒಟ್ಟು ಮೌಲ್ಯ ಬರೋಬ್ಬರಿ 619 ಕೋಟಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 251 ಕೋಟಿ ರೂ.ಗಳಿದ್ದ ಚರಾಸ್ತಿ ಮತ್ತು ಸ್ಥಿರಾಸ್ತಿ ಐದು ವರ್ಷಗಳಲ್ಲಿ 368 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಇದು ಚುನಾವಣೆ ಆಯೋಗಕ್ಕೆ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಅಧಿಕೃತ ವಿವರಗಳು.
Vijaya Karnataka Web d k shivakumar declares assets at over rs 600 crore
ಡಿಕೆಶಿ ಆಸ್ತಿ 5 ವರ್ಷದಲ್ಲಿ 368 ಕೋಟಿ ರೂ. ಹೆಚ್ಚಳ!


ಕಳೆದ ಚುನಾವಣೆಯಲ್ಲೇ ಅವರು ದೇಶದಲ್ಲಿಯೇ 2ನೇ ಅತಿ ಶ್ರೀಮಂತ ರಾಜಕಾರಣಿ ಎಂದೆನಿಸಿದ್ದರು. ಇದೀಗ ಅವರ ಆಸ್ತಿಪಾಸ್ತಿ ಎರಡು ಪಟ್ಟು ಹೆಚ್ಚಾಗಿದೆ. ಸಚಿವ ಶಿವಕುಮಾರ್‌ 2016-17ನೇ ಸಾಲಿಗೆ 87.54ಲಕ್ಷ ರೂ. ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದಾರೆ. 2011-12ನೇ ಸಾಲಿನಲ್ಲಿ ಇವರ ವಾರ್ಷಿಕ ಆದಾಯ 58ಲಕ್ಷ ಇತ್ತು. ಅಂದರೆ ಇವರ ವಾರ್ಷಿಕ ಆದಾಯ ಐದು ವರ್ಷಗಳಲ್ಲಿ ಸರಾಸರಿ 30ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಆದರೆ, ಸದ್ಯಕ್ಕೆ ಸಚಿವರ ಬಳಿ 6.49ಲಕ್ಷ ರೂ. ನಗದು ಮಾತ್ರ ಇದೆ!

ಬ್ಯಾಂಕ್‌ಗಳಲ್ಲಿ ಹೂಡಿಕೆ, ಚಿನ್ನಾಭರಣ, ವಾಹನ ಮುಂತಾದ ಚರಾಸ್ತಿಯ ಮೌಲ್ಯ 70.95 ಕೋಟಿ ರೂ.ಗಳಷ್ಟಿದೆ. ಸ್ಥಿರಾಸ್ತಿಯ ಹಾಲಿ ಮಾರುಕಟ್ಟೆ ಮೌಲ್ಯ 548.80 ಕೋಟಿ ರೂ. ಈ ಪೈಕಿ ಇವರ ಸ್ವಯಾರ್ಜಿತ ಆಸ್ತಿಯ ಮೌಲ್ಯ 541.73 ಕೋಟಿ ಇದ್ದರೆ, ಇವರು ತಮ್ಮ ಹಿರಿಯರಿಂದ ಬಳುವಳಿ ಪಡೆದ ಆಸ್ತಿಯ ಹಾಲಿ ಮಾರುಕಟ್ಟೆ ಮೌಲ್ಯ 7.12 ಕೋಟಿ ರೂ.ಗಳಾಗಿದೆ. ಸಚಿವರು ಬ್ಯಾಂಕ್‌ಳು ಮತ್ತು ಹಣಕಾಸು ಸಂಸ್ಥೆಗಳಿಂದ 101.78 ಕೋಟಿ ರೂ. ಸಾಲ ಪಡೆದಿದ್ದಾರೆ.

2002ರಲ್ಲಿ ಕೊಂಡ 8.35ಲಕ್ಷ ಬೆಲೆ ಬಾಳುವ ಟೊಯೋಟ ಕ್ವಾಲಿಸ್‌ ಕಾರನ್ನು ಹೊಂದಿದ್ದಾರೆ. 2 ಕೆಜಿ 184 ಗ್ರಾಂ ಚಿನ್ನಾಭರಣ, 12 ಕೆ.ಜಿ 600 ಗ್ರಾಂ ಬೆಳ್ಳಿ ಹಾಗೂ 1.26 ಕೋಟಿ ರೂ ಮೌಲ್ಯದ ವಜ್ರ, ಮಾಣಿಕ್ಯ ಮತ್ತು ಇತರ ಬೆಲೆಬಾಳುವ ಹರಳು ಉಳ್ಳ ಚಿನ್ನಾಭರಣ, 9ಲಕ್ಷ ರೂ. ಬೆಲೆ ಬಾಳುವ ರೋಲೆಕ್ಸ್‌ ಕೈಗಡಿಯಾರ ಇರುವುದಾಗಿ ಘೋಷಿಸಿದ್ದಾರೆ.

ಪತ್ನಿ ಉಷಾ ಅವರ ಬಳಿ 2 ಕೆಜಿ 200 ಗ್ರಾಂ ಚಿನ್ನಾಭರಣ, 20 ಕೆ.ಜಿ ಬೆಳ್ಳಿ ಇದೆ. 1.72ಲಕ್ಷ ರೂ. ನಗದು ಉಂಟು. 25.04 ಕೋಟಿ ರೂ. ಚರಾಸ್ತಿ ಮತ್ತು ಹಾಲಿ ಮಾರುಕಟ್ಟೆ ಮೌಲ್ಯದ 86.95 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ದಂಪತಿಗಳ ಪುತ್ರಿ ಐಶ್ವರ್ಯ ಬಳಿ 3.80ಲಕ್ಷ ರೂ. ನಗದು ಇದೆ. ಇವರ ಹೆಸರಿನಲ್ಲಿ 5.17 ಕೋಟಿ ರೂ. ಚರಾಸ್ತಿ, 102.88 ಕೋಟಿ ರೂ. ಹಾಲಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಮತ್ತು 950 ಗ್ರಾಂ ಚಿನ್ನಾಭರಣವನ್ನು ಹೊಂದಿದ್ಧಾರೆ. ಸಚಿವ ಡಿ.ಕೆ.ಶಿವಕುಮಾರ್‌ ಕುಟುಂಬದಲ್ಲಿ ಹಾಲಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ, ಚರಾಸ್ತಿಲೆಕ್ಕ ಹಾಕಿದರೆ ಈ ಕುಟುಂಬದ ಬಳಿ 800ಕ್ಕೂ ಹೆಚ್ಚು ಕೋಟಿ ರೂ. ಮೌಲ್ಯದ ಆಸ್ತಿಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ