ಆ್ಯಪ್ನಗರ

ಪ್ರಾಣ ಹೋದ್ರೂ ಮೆಡಿಕಲ್‌ ಕಾಲೇಜು ಬಿಡಲ್ಲ: ಡಿಕೆಶಿ ಪ್ರತಿಜ್ಞೆ

ನನ್ನ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತರಬೇಕು ಎಂಬ ಉದ್ದೇಶದಿಂದಲೇ ಹಿಂದೆ ನಾನು ವೈದ್ಯಕೀಯ ಶಿಕ್ಷಣ ಇಲಾಖೆ ಆಯ್ಕೆ ಮಾಡಿಕೊಂಡಿದ್ದೆ. ಇದು ನನ್ನ ಕನಸಿನ ಯೋಜನೆ , ಎಂದಿದ್ದಾರೆ ಡಿಕೆಶಿ.

Vijaya Karnataka 30 Oct 2019, 7:31 am
ಬೆಂಗಳೂರು: ಹಿಂದಿನ ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿರುವ ಬಿಜೆಪಿ ಸರಕಾರದ ವಿರುದ್ಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web DKS


ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರೂ ಸರಿ, ಕನಕಪುರಕ್ಕೆ ಮೆಡಿಕಲ್‌ ಕಾಲೇಜು ತಂದೇ ತರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕನಕಪುರಕ್ಕೆ ವೈದ್ಯ ಕಾಲೇಜು ಮಂಜೂರಾಗಿ ಹಣವೂ ಮಂಜೂರಾಗಿತ್ತು. ಸಚಿವ ಸಂಪುಟದ ಅನುಮತಿಯೂ ದೊರೆತು, ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಆದರೆ, ಬಿಜೆಪಿ ಸರಕಾರ ಏಕಾಏಕಿ ತೀರ್ಮಾನ ಬದಲಿಸಿ, ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಲು ನಿರ್ಧರಿಸಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲ,'' ಎಂದು ಗುಡುಗಿದರು.

ಸಿದ್ದರಾಮಯ್ಯಗೆ ನನ್ನ ಮೇಲೆ ಜಾಸ್ತಿ Love: ಡಿ ಕೆ ಶಿವಕುಮಾರ್

ಕಾಲೇಜು ತರಲೆಂದೇ ಖಾತೆ ಪಡೆದಿದ್ದೆ: ''ನನ್ನ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತರಬೇಕು ಎಂಬ ಉದ್ದೇಶದಿಂದಲೇ ಹಿಂದೆ ನಾನು ವೈದ್ಯಕೀಯ ಶಿಕ್ಷಣ ಇಲಾಖೆ ಆಯ್ಕೆ ಮಾಡಿಕೊಂಡಿದ್ದೆ. ಇದು ನನ್ನ ಕನಸಿನ ಯೋಜನೆ. ಕನಕಪುರಕ್ಕೆ ವೈದ್ಯ ಕಾಲೇಜು ಮಂಜೂರಾತಿ ಬಗ್ಗೆ ಪ್ರತಿಪಕ್ಷ ನಾಯಕರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಸೇರಿ ಯಾರಿಂದಲೂ ಆಕ್ಷೇಪ ಇರಲಿಲ್ಲ. ಕುಮಾರಸ್ವಾಮಿ ಅಮೆರಿಕ ಪ್ರವಾಸಕ್ಕೆ ತೆರಳದಿದ್ದರೆ ನೂತನ ವೈದ್ಯಕೀಯ ಕಾಲೇಜು ಭೂಮಿ ಪೂಜೆಯೂ ನಡೆದುಹೋಗುತ್ತಿತ್ತು. ಕನಕಪುರದ ಜನತೆಗಾಗಿ ನನ್ನ ಪ್ರಾಣ ಹೋದರೂ ಪರವಾಗಿಲ್ಲ. ಮೆಡಿಕಲ್‌ ಕಾಲೇಜಿಗಾಗಿ ಹೋರಾಟ ನಡೆಸುತ್ತೇನೆ,'' ಎಂದು ಹೇಳಿದರು.

ಹಿಂದೆ ಸರಿಯದಿದ್ದರೆ ಹೋರಾಟ ಅನಿವಾರ್ಯ: ''ಚಿಕ್ಕಬಳ್ಳಾಪುರಕ್ಕೆ ವೈದ್ಯ­ಕೀಯ ಕಾಲೇಜು ನೀಡಿರುವುದಕ್ಕೆ ನನ್ನ ಆಕ್ಷೇಪ ಇಲ್ಲ. ಇನ್ನೂ 100 ಕಾಲೇಜುಗಳಿಗೆ ಅನುಮತಿ ಕೊಡಲಿ. ಆದರೆ, ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಅಲ್ಲಿಗೆ ಕೊಟ್ಟರೆ ಸಹಿಸುವುದಿಲ್ಲ. 2-3 ದಿನಗಳಲ್ಲಿಈ ಸಂಬಂಧ ಸಿಎಂಗೆ ಪತ್ರ ಬರೆಯುತ್ತೇನೆ. ಮರುಪರಿಶೀಲನೆ ಮಾಡಲು ಸೂಕ್ತ ಸಮಯಾವಕಾಶ ಕೊಡುತ್ತೇನೆ. ಸರಕಾರ ತೀರ್ಮಾನದಿಂದ ಹಿಂದೆ ಸರಿಯದಿದ್ದರೆ ಹೋರಾಟ ಅನಿವಾರ್ಯವಾಗಲಿದೆ. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ನನಗೂ ರಾಜಕಾರಣ ಮಾಡುವುದು ಗೊತ್ತು,'' ಎಂದು ಎಚ್ಚರಿಕೆ ನೀಡಿದರು. ವೈದ್ಯ ಕಾಲೇಜು ಸ್ಥಳಾಂತರ ವಿಚಾರದಲ್ಲಿಅನರ್ಹ ಶಾಸಕ ಡಾ.ಸುಧಾಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿ ''ಸುಧಾಕರ್‌ಗೂ ನಮಗೂ ಏನು ಸಂಬಂಧ? ನನ್ನ ಮೇಲೆ ಏನಾದರೂ ಹಗೆತನ ಇದ್ದರೆ ಮಾಡಿಕೊಳ್ಳಲಿ. ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ. ನನ್ನ ಕನಸಿನ ಯೋಜನೆಯಾದ ವೈದ್ಯಕೀಯ ಕಾಲೇಜು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಾನು ಕೆಂಪೇಗೌಡ ಮತ್ತು ಗೌರಮ್ಮನ ಮಗ ಮಾತ್ರ ವಲ್ಲ, ಕನಕಪುರ ಕ್ಷೇತ್ರದ ಜನತೆಯ ನಿರೀಕ್ಷೆ ಈಡೇರಿಸುವುದೇ ನನ್ನ ಗುರಿ,'' ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ