ಆ್ಯಪ್ನಗರ

ಮುನಿಯಪ್ಪ ವಿರುದ್ಧ ಮುನಿಸು: ಕುಟುಂಬಕ್ಕೆ ಮಾತ್ರ ಮೀಸಲು ಲಾಭ ಎಂದ ದಲಿತರು

ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಸಂಸದ ಕೆ.ಎಚ್‌. ಮುನಿಯಪ್ಪ ವಿರುದ್ಧ ದಲಿತ ಮುಖಂಡರೇ ತಿರುಗಿ ಬಿದ್ದಿದ್ದಾರೆ

Vijaya Karnataka 1 Oct 2018, 8:26 am
ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಸಂಸದ ಕೆ.ಎಚ್‌. ಮುನಿಯಪ್ಪ ವಿರುದ್ಧ ದಲಿತ ಮುಖಂಡರೇ ತಿರುಗಿ ಬಿದ್ದಿದ್ದಾರೆ. ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಬಾರದು ಎಂದು ದಲಿತ ಸಂಘಟನೆ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.
Vijaya Karnataka Web muniyappa


ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸಭೆ ನಡೆಸಿದ ದಲಿತ ಸಂಘಟನೆಯ ಮುಖಂಡರು, ಈ ಬಗ್ಗೆ ನಿರ್ಣಯ ಕೈಗೊಂಡಿದ್ದು, ಕೆಪಿಸಿಸಿ ಹಾಗೂ ಎಐಸಿಸಿಗೂ ಈ ಸಂಬಂಧ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಸತತ 7 ಬಾರಿ ಕೋಲಾರ ಲೋಕಸಭೆ ಕ್ಷೇತ್ರದಿಂದ ಮುನಿಯಪ್ಪ ಅವರು ಆಯ್ಕೆಯಾಗಿದ್ದಾರೆ. ಯುಪಿಎ ಅವಧಿಯಲ್ಲಿ ಭರ್ತಿ 10 ವರ್ಷ ಕೇಂದ್ರ ಸಚಿವರಾಗಿದ್ದರು. ಈ ನಡುವೆಯೂ ಸಮುದಾಯದ ಅಭ್ಯುದಯಕ್ಕೆ ಅವರ ಕೊಡುಗೆ ನಗಣ್ಯವಾಗಿದೆ. ತಮ್ಮ ಕುಟುಂಬದ ಸದಸ್ಯರಿಗೆ ರಾಜಕೀಯ ಹಾಗೂ ಆರ್ಥಿಕ ಲಾಭ ಮಾಡಿಕೊಡುವುದೇ ಮುನಿಯಪ್ಪ ಆದ್ಯತೆಯಾಗಿದೆ ಎನ್ನುವುದು ದಲಿತ ಮುಖಂಡರ ನೇರ ಆರೋಪವಾಗಿದೆ.

''ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರೂ ಈ ಸಭೆಯಲ್ಲಿ ಭಾಗಿಯಾಗಿದ್ದರು. 220 ಹೆಚ್ಚು ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮುನಿಯಪ್ಪ ಮರು ಸ್ಪರ್ಧೆ ಮಾಡಬಾರದೆಂಬುದೇ ಎಲ್ಲರ ಆಗ್ರಹವಾಗಿದೆ,'' ಎಂದು ದಲಿತ ಸಂಘಟನೆ ಮುಖಂಡ ಸಿ.ಎಂ. ಮುನಿಯಪ್ಪ ತಿಳಿಸಿದ್ದಾರೆ.

ಎಐಸಿಸಿಗೆ ನಿಯೋಗ

''ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಬಾರದೆಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವುದು. ಅಂಬೇಡ್ಕರ್‌ ಆಶಯಕ್ಕೂ ಮುನಿಯಪ್ಪ ಧಕ್ಕೆ ತಂದಿದ್ದಾರೆ ಎನ್ನುವುದನ್ನು ಕಾಂಗ್ರೆಸ್‌ ನಾಯಕರಿಗೆ ಮನವರಿಕೆ ಮಾಡಿಕೊಡಲಾಗುವುದು. ಹಾಗೆಯೇ ಕೋಲಾರ ಜಿಲ್ಲೆಯ ಕಾಂಗ್ರೆಸ್‌ನ ಜನಪ್ರತಿನಿಧಿಗಳಿಗೂ ಈ ವಿಚಾರ ತಿಳಿಸಲಾಗುವುದು. ಎಸ್‌ಸಿ, ಎಸ್‌ಟಿಗಳೊಂದಿಗೆ ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರನ್ನೂ ಜತೆಗೆ ಕರೆದೊಯ್ಯಲಾಗುವುದು. ಈ ಮೂಲಕ ಮುನಿಯಪ್ಪ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು,'' ಎಂದರು.

''ಮುನಿಯಪ್ಪ ಅವರು ಕುಟುಂಬ ಸದಸ್ಯರಿಗೆ ಪೆಟ್ರೋಲ್‌ ಬಂಕ್‌, ಗ್ಯಾಸ್‌ ಏಜೆನ್ಸಿಗಳನ್ನು ಕೊಡಿಸಿದ್ದಾರೆ. ಆದರೆ, ಯಾವೊಬ್ಬ ಕಾರ್ಯಕರ್ತನನ್ನೂ ಕ್ಷೇತ್ರದಲ್ಲಿ ಗುರುತಿಸಿಲ್ಲ. ಮೀಸಲು ಲಾಭವನ್ನು ಕುಟುಂಬಕ್ಕೆ ಸೀಮಿತವಾಗುವಂತೆ ನಡೆದುಕೊಂಡಿದ್ದಾರೆ,'' ಎಂದೂ ದಲಿತ ಮುಖಂಡರು ಆಪಾದಿಸಿದ್ದಾರೆ.

ಮಂತ್ರಿ ಸ್ಥಾನ ಕೊಡಬೇಡಿ

ಮುನಿಯಪ್ಪ ಪುತ್ರಿ ರೂಪ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರನ್ನು ವಿಧಾನಸಭೆ ಚುನಾವಣೆ ಕಣಕ್ಕಿಳಿಸುವುದಕ್ಕೇ ವಿರೋಧವಿತ್ತು. ಇದೀಗ ಪುನಃ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಸಿ ಪುತ್ರಿಯನ್ನು ಮಂತ್ರಿ ಮಾಡಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಮುನಿಯಪ್ಪ ಪುತ್ರಿಗೆ ಮಂತ್ರಿ ಸ್ಥಾನ ನೀಡಬಾರದೆಂದು ಒತ್ತಾಯಿಸುವ ನಿರ್ಣಯಕ್ಕೂ ಬರಲಾಯಿತು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ