ಆ್ಯಪ್ನಗರ

ಮುಂದಿನ ಸಂಪುಟ ಸಭೆಯಲ್ಲೇ ಗ್ಯಾರಂಟಿ ಜಾರಿಗೆ ತೀರ್ಮಾನ: ಸಿದ್ದರಾಮಯ್ಯ ಘೋಷಣೆ

Siddaramaiah clarification on Congress Guarantee - ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಜನರು ನಮ್ಮ ಮೇಲೆ ಭಾರೀ ಭರವಸೆ ಇಟ್ಟಿದ್ದಾರೆ. ಈಗಷ್ಟೇ ನಮ್ಮ ಸಂಪುಟಕ್ಕೆ 24 ಸಚಿವರು ಸೇರ್ಪಡೆಗೊಂಡಿದ್ದಾರೆ. ಅತ್ತ, ಯೋಜನೆಗಳ ಜಾರಿಗಾಗಿ ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಮುಂದಿನ ಸಂಪುಟದಲ್ಲಿ ಎಲ್ಲಾ ಗ್ಯಾರಂಟಿಗಳ ಜಾರಿ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Authored byಚೇತನ್ ಓ.ಆರ್. | Vijaya Karnataka Web 27 May 2023, 3:47 pm

ಹೈಲೈಟ್ಸ್‌:

  • ಗ್ಯಾರಂಟಿ ಯೋಜನೆಗಳ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ.
  • ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ; ಈಗಾಗಲೇ ಗ್ಯಾರಂಟಿಗಳ ಬಗ್ಗೆ ತಯಾರಿಯಾಗ್ತಿದೆ ಎಂದ ಸಿಎಂ.
  • ಮುಂದಿನ ಸಂಪುಟದಲ್ಲಿ ಎಲ್ಲಾ ಗ್ಯಾರಂಟಿಗಳ ಜಾರಿ ಬಗ್ಗೆ ಚರ್ಚಿಸಿ ನಿರ್ಧಾರ ಎಂದು ಹೇಳಿಕೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Siddaramaiah
ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ಜನರು ಕಾತುರದಿಂದ ನಿರೀಕ್ಷಿಸುತ್ತಿರುವ ಕಾಂಗ್ರೆಸ್ ನ ಐದು ಗ್ಯಾರಂಟಿಗಳ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಾಗ್ದಾನ ನೀಡಿದರು.
ನೂತನ ಸಂಪುಟಕ್ಕೆ ಹೊಸ ಸಚಿವರ ಸೇರ್ಪಡೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಂಪುಟಕ್ಕೆ 24 ಸಚಿವರು ಸೇರ್ಪಡೆಯಾಗಿದ್ದು, ಪೂರ್ಣಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಅತ್ತ ಗ್ಯಾರಂಟಿಗಳ ಜಾರಿ ಬಗ್ಗೆಯೂ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು ಅವರೂ ಸಹ ಮುಂದಿನ ಸಂಪುಟ ಸಭೆಯಲ್ಲಿ ಎಲ್ಲಾ ದಾಖಲೆಗಳನ್ನು ತರಲಿದ್ದಾರೆ. ಅವೆಲ್ಲವನ್ನೂ ಪರಾಮರ್ಶಿಸಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರವನ್ನು ಅದೇ ಸಭೆಯಲ್ಲೇ ಕೈಗೊಳ್ಳುತ್ತೇವೆ ಎಂದು ಹೇಳಿದರು.


ಸಚಿವ ಸ್ಥಾನ ಸಿಗದವರಿಗೆ ಸ್ಪಷ್ಟನೆ

ನೂತನ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೇ ನಿರಾಸೆಯಾಗಿರುವ ಕಾಂಗ್ರೆಸ್ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ಕೆಲವರನ್ನು ಏಕೆ ಪರಿಗಣಿಸಿಲ್ಲ, ಏಕೆ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಡಲಾಗಿಲ್ಲ ಎಂಬುದರ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

ಎಲ್ಲವನ್ನೂ ಅಳೆದು ತೂಗಿ ನಾವು ಸಂಪುಟ ರಚಿಸಿದ್ದೇವೆ. ಈವರೆಗೆ ಎರಡು ಬಾರಿ, ಮೂರು ಬಾರಿ, ನಾಲ್ಕು ಅಥವಾ ಐದು ಬಾರಿ ಗೆದ್ದ ಶಾಸಕರಿಗೆ ನಾವು ಮಂತ್ರಿ ಪದವಿ ಕೊಟ್ಟಿದ್ದೇವೆ. ಉದ್ದೇಶಪೂರ್ವಕವಾಗಿ ಯಾರನ್ನೂ ನಾವು ಮಂತ್ರಿಮಂಡಲದಿಂದ ಹೊರಗಿಟ್ಟಿಲ್ಲ ಎಂದು ಅವರು ಹೇಳಿದರು.

ಜೂನ್ ತಿಂಗಳ ಕರೆಂಟ್ ಬಿಲ್ ಜುಲೈನಲ್ಲಿ ಬರುತ್ತೆ ಎಂದ ಡಿಕೆಶಿ! ಏನಿದರ ಅರ್ಥ?
ಈ ಬಾರಿಯ ಮಂತ್ರಿ ಮಂಡಲದಲ್ಲಿ ಹೊಸಬರೂ ಇರಬೇಕು, ಹಳಬರೂ ಇರಬೇಕು ಎಂದು ಹೈಕಮಾಂಡ್ ಮೊದಲೇ ಸೂಚಿಸಿತ್ತು. ಆ ನಿಟ್ಟಿನಲ್ಲಿ ನಾವು ಕೆಲವು ಹೊಸಬರಿಗೆ, ಕೆಲವು ಹಳಬರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಈಗ ಅಸ್ತಿತ್ವಕ್ಕೆ ಬಂದಿರುವ ಮಂತ್ರಿ ಮಂಡಲವು ಹೊಸಬರು ಹಾಗೂ ಹಳಬರ ಸಮ್ಮಿಶ್ರಣವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.


ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿದ್ದಕ್ಕೆ ಸ್ಪಷ್ಟನೆ

ಕೊಡಗು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡದೇ ಇರುವುದಕ್ಕೆ ಅಲ್ಲಿನ ಶಾಸಕ ಪೊನ್ನಣ್ಣ ಅವರು ತೀವ್ರ ಅಸಮಾಧಾನಗೊಂಡಿರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಸಂಪುಟದಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಡಲು ಸಾಧ್ಯವಾಗಿಲ್ಲ. ಹಾವೇರಿಗೂ ಕೊಟ್ಟಿಲ್ಲ, ಚಿಕ್ಕಮಗಳೂರು, ಹಾಸನಕ್ಕೂ ಕೊಟ್ಟಿಲ್ಲ ಎಂದರು.

ಇದು ಒಳ್ಳೆಯ ಸೂಚನೆಯಲ್ಲ; ಶೀಘ್ರವೇ ಉಚಿತ ಪ್ರಯಾಣ ಜಾರಿಗೆ ತನ್ನಿ: ಕೆಎಸ್‌ಆರ್‌ಟಿಸಿ ನೌಕರರ ಒತ್ತಾಯ
ಇನ್ನು, ನಾನೀಗಾಗಲೇ ಹೇಳಿದಂತೆ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಗೆದ್ದವರಿಗೆ ನಾವು ಸಚಿವ ಸ್ಥಾನ ಕೊಟ್ಟಿದ್ದೇವೆ. ಇದೇ ಮೊದಲ ಬಾರಿ ಗೆದ್ದವರಿಗೆ ನಾವು ಸಚಿವ ಸ್ಥಾನ ಕೊಟ್ಟಿಲ್ಲ. ಕೊಡಗಿನಲ್ಲಿ ಗೆದ್ದಿರುವ ಇಬ್ಬರೂ ಇದೇ ಮೊದಲ ಬಾರಿ ಶಾಸಕರಾದವರು. ಹಾಗಾಗಿ, ಅವರಿಗೆ ನಾವು ಸಚಿವ ಸ್ಥಾನ ಕೊಟ್ಟಿಲ್ಲವಷ್ಟೇ ಎಂದು ಹೇಳಿದರು.

ಬಿ.ಕೆ. ಹರಿಪ್ರಸಾದ್ ಬಗ್ಗೆ ಮಾತು

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ವಿಚಾರವನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದರು. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಆ ಬಗ್ಗೆ ಅವರು ನನ್ನ ಬಳಿ ಆ ರೀತಿಯಾಗಿ ಹೇಳಿಲ್ಲ ಎಂದು ಹೇಳಿದರು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ