ಆ್ಯಪ್ನಗರ

ದೆಹಲಿ ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ, ಹಿಂಸಾಚಾರಕ್ಕೆ ಐವರು ಬಲಿ

ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧಿ ಹೋರಾಟಗಾರರ ನಡುವೆ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

Vijaya Karnataka Web 25 Feb 2020, 9:45 am
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿಚಾರವಾಗಿ ಪರ- ವಿರೋಧ ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್ ಸೇರಿ ಐವರು ಮೃತಪಟ್ಟಿದ್ದಾರೆ.
Vijaya Karnataka Web delhi 5 killed in caa clashes over 50 were injured
ದೆಹಲಿ ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ, ಹಿಂಸಾಚಾರಕ್ಕೆ ಐವರು ಬಲಿ


ಈಶಾನ್ಯ ದೆಹಲಿಯ ಜಫ್ರಾಬಾದ್‌ನಲ್ಲಿ ಸೋಮವಾರ ಭುಗಿಲೆದ್ದ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಘರ್ಷಣೆಯಲ್ಲಿ 50 ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಹಲವರ ಸ್ಥಿತಿ ಗಂಭೀರವಾಗಿದೆ.

ಸಿಎಎ ಪರ ಹಾಗೂ ವಿರೋಧಿಗಳ ಗುಂಪು ಪರಸ್ಪರ ಕಲ್ಲುತೂರಾಟ ಹಾಗೂ ಹಲವು ಕಡೆಗಳಲ್ಲಿ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆಯಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲನ್ನು ಹಿಡಿದುಕೊಂಡಿರುವ ಫೋಟೋವೊಂದು ವೈರಲ್ ಆಗುತ್ತಿದೆ.

ಹೊಸದಿಲ್ಲಿ ಸಿಎಎ ವಿರೋಧಿ ಪ್ರತಿಭಟನೆ: ಹಿಂಸಾಚಾರಕ್ಕೆ ಮುಖ್ಯ ಪೊಲೀಸ್‌ ಪೇದೆ ಸಾವು

ಆಸ್ಪತ್ರೆಯ ಮೂಲಗಳು ಮಾಧ್ಯಮಗಳಿಗೆ ನೀಡಿರುವ ಮಾಹಿತಿಗಳ ಪ್ರಕಾರ ಘರ್ಷಣೆಯಲ್ಲಿ ಮೃತಪಟ್ಟವರ ದೇಹದಲ್ಲಿ ಗುಂಡೇಟಿನ ಗಾಯಗಳು ಕಾಣಿಸಿದೆ ಎಂದಿದ್ದಾರೆ.

ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸೋಮವಾರ ತಡ ರಾತ್ರಿ ಸಭೆ ನಡೆಸಿದ್ದಾರೆ. ಘಟನೆಯ ಕುರಿತಾಗಿ ಮಾಹಿತಿ ಪಡೆದುಕೊಂಡಿರುವ ಶಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.


ಈಶಾನ್ಯ ದೆಹಲಿಯ ಗೋಕುಲ್‌ಪುರಿ ಪ್ರದೇಶದಲ್ಲಿ ಕಿಡಿಗೇಡಿಗಳ ಗುಂಪು ಮಾರುಕಟ್ಟೆ ಕಟ್ಟಡವೊಂದಕ್ಕೆ ಬೆಂಕಿ ಇಟ್ಟಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಘಟನೆಯಲ್ಲಿ ಮೂವರು ಅಗ್ನಿಶಾಮಕ ದಳ ಸಿಬ್ಬಂದಿ ಕೂಡಾ ಗಾಯಗೊಂಡಿದ್ದು, ಹಲವು ಪೊಲೀಸರಿಗೂ ಗಾಯವಾಗಿದೆ.

ದೆಹಲಿಯ ಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಂಗಳವಾರ ದೆಹಲಿಗೆ ಆಗಮಿಸಲಿದ್ದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಟ್ರಂಪ್ ದೆಹಲಿ ಭೇಟಿ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ಕೇಂದ್ರ ಸರ್ಕಾರಕ್ಕೂ ಮುಜುಗರ ಉಂಟು ಮಾಡಿದೆ.

ಹಿಂಸಾಚಾರ ನಿಯಂತ್ರಣಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ