ಆ್ಯಪ್ನಗರ

ಹಳೇ ಪಿಂಚಣಿ ಜಾರಿಯಲ್ಲಿ ತಾರತಮ್ಯ: 200 ಮಂದಿ ನೌಕರರಿಗೆ ವಂಚನೆ, 12 ವರ್ಷಗಳಿಂದ ಹೋರಾಟ!

ರಾಜ್ಯದಲ್ಲಿ ಅಂಶದಾಯಿ ಪಿಂಚಣಿ ಯೋಜನೆ(ಸಿಪಿಎಸ್‌) ಜಾರಿ ಬಳಿಕ ಹಳೇ ಪಿಂಚಣಿ ಯೋಜನೆ ಮುಂದುವರಿಸುವಲ್ಲಿ ಸರಕಾರವು ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಬೇರಾವ ರಾಜ್ಯದಲ್ಲೂ ಇಲ್ಲದ ನಿಯಮ ಕರ್ನಾಟಕದಲ್ಲಿ ಮಾತ್ರ ಏಕೆ ಎಂಬುದು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಪ್ರಶ್ನೆಯಾಗಿದೆ.

Vijaya Karnataka Web 29 Sep 2020, 6:32 am
ಬೆಂಗಳೂರು: ರಾಜ್ಯ ಸರಕಾರದ ತಾರತಮ್ಯದಿಂದ 2006ಕ್ಕೂ ಹಿಂದೆ ಸರಕಾರಿ ಸೇವೆಗೆ ಸೇರಿದ ಈಗ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ 200 ನೌಕರರು ಹಳೇ ಪಿಂಚಣಿ ಯೋಜನೆಯಿಂದ ವಂಚಿತರಾಗಿದ್ದಾರೆ. ನೌಕರರ 12 ವರ್ಷಗಳ ಬೇಡಿಕೆ ಅರಣ್ಯರೋದನವಾಗಿದೆ.
Vijaya Karnataka Web pension
ಸಾಂದರ್ಭಿಕ ಚಿತ್ರ


ಏನದು ತಾರತಮ್ಯ

ಕೇಂದ್ರ ಸರಕಾರದ ಮಾದರಿಯಲ್ಲೇ ರಾಜ್ಯ ಸರಕಾರವು 2006ನೇ ಏಪ್ರಿಲ್‌ 1ರಿಂದ ನೌಕರರಿಗೆ ಹೊಸ ಅಂಶದಾಯಿ ಪಿಂಚಣಿ ಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನು ಎಲ್ಲಇಲಾಖೆಗಳಲ್ಲಿ ಅಲ್ಲದೆ ರಾಜ್ಯ ಸರಕಾರದ ಅಧೀನದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಕಡ್ಡಾಯಗೊಳಿಸಲಾಗಿದೆ. ಹಳೇ ಪಿಂಚಣಿ ಯೋಜನೆಯಲ್ಲಿದ್ದ ಬಹಳಷ್ಟು ನೌಕರರು ರಾಜ್ಯದ ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧಕ ಅಥವಾ ಬೋಧಕೇತರ ಹುದ್ದೆಗೆ ಸೂಕ್ತ ಪ್ರಾಧಿಕಾರದ ಮೂಲಕ ಅರ್ಜಿ ಹಾಕಿ ನೇಮಕಗೊಂಡಿದ್ದಾರೆ. ಪ್ರಾಧಿಕಾರದ ಅನುಮತಿ ಪಡೆದು ವಿಶ್ವವಿದ್ಯಾಲಯದ ಹೊಸ ಹುದ್ದೆಗೆ ಬಂದವರನ್ನು ಬಲವಂತವಾಗಿ ಸಿಪಿಎಸ್‌ಗೆ ಸೇರಿಸಲಾಗಿದೆ.

ರಾಜ್ಯ ಸರಕಾರದ (ಆದೇಶ ಸಂಖ್ಯೆ ಎಫ್‌.ಡಿ (ಸ್ಪೆಷಲ್‌) 01 ಪಿಇಎನ್‌ 2007 ದಿನಾಂಕ 12-07-2007) ಆರ್ಥಿಕ ಇಲಾಖೆಯು ನೀಡಿರುವ ವಿವರಣೆಯಂತೆ 2006ನೇ ಏಪ್ರಿಲ್‌ 1ಕ್ಕಿಂತ ಮೊದಲು ಸೇವೆಯಲ್ಲಿದ್ದವರು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯ ಹುದ್ದೆಗೆ ಯುಕ್ತ ರೀತಿಯಲ್ಲಿ ಸೇರಿದವರಿಗೆ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ಆದರೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಇದನ್ನು ನಿರಾಕರಿಸಲಾಗಿದೆ. ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾಗಿರುವುದರಿಂದ ಸರಕಾರದ ನಿಯಮ ಅನ್ವಯವಾಗುವುದಿಲ್ಲ ಎನ್ನುತ್ತಿದ್ದಾರೆ.

ಕರ್ನಾಟಕದಲ್ಲಿ ಮಾತ್ರ

ಕೇಂದ್ರ ಸರಕಾರದ ಸೇವೆಗಳು ಮತ್ತು ಬೇರಾವ ರಾಜ್ಯಗಳಲ್ಲೂ ಇಲ್ಲದ ಸ್ವಾಯತ್ತ ಸಂಸ್ಥೆ ಎಂಬ ಕಾರಣವನ್ನು ಕರ್ನಾಟಕ ಹೇಳುತ್ತಿದೆ. ಕೇಂದ್ರ ಸರಕಾರವು 2009ನೇ ಸಾಲಿನಲ್ಲಿ ಅದರ ಅಧೀನದ ವಿಶ್ವವಿದ್ಯಾಲಯಕ್ಕೆ ತೆರಳಿರುವ ಇದೇ ರೀತಿಯ ನೌಕರರಿಗೂ ಹಳೆಯ ಪಿಂಚಣಿಯನ್ನೇ ಮುಂದುವರಿಸಿದೆ. ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲೂ ಹಳೆ ಪಿಂಚಣಿ ಮುಂದುವರಿಸಲಾಗಿದೆ.

ಇದರ ಬಗ್ಗೆ ಬೀದರ್‌ನ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸರಕಾರದ ಗಮನ ಸೆಳೆದರೂ ಸ್ಪಂದನೆ ಸಿಕ್ಕಿಲ್ಲ. ಈ ವಿಶ್ವವಿದ್ಯಾಲಯದಲ್ಲೇ ಇಂತಹ 47 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ. ಇಲ್ಲಷ್ಟೇ ಅಲ್ಲದೆ ರಾಜ್ಯದಲ್ಲಿ 2006ರಿಂದ ಈಚೆಗೆ ಆರಂಭವಾದ ವಿಶ್ವವಿದ್ಯಾಲಯಗಳಿಗೆ ಇತರೆ ಇಲಾಖೆಗಳಿಂದ ಬಂದು ನೇರ ನೇಮಕಗೊಂಡ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಹ ಹಳೇ ಪಿಂಚಣಿಯಿಂದ ವಂಚಿತರಾಗಿದ್ದಾರೆ.

ಹಳೇ ಪಿಂಚಣಿಯನ್ನು ಮುಂದುವರಿಸುವಂತೆ 12 ವರ್ಷಗಳಿಂದ ಹಲವು ಸರಕಾರಗಳ ಸಿಎಂ, ಹಣಕಾಸು ಸಚಿವರು, ಪಶುಸಂಗೋಪನಾ ಸಚಿವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದರೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಬೇರಾವ ರಾಜ್ಯದಲ್ಲೂ ಇಲ್ಲದ ನಿಯಮ ಕರ್ನಾಟಕದಲ್ಲಿ ಮಾತ್ರ ಏಕೆ ಎಂಬುದು ನಮಗೂ ಅರ್ಥವಾಗುತ್ತಿಲ್ಲ. ದಯವಿಟ್ಟು ಸರಕಾರ ನಮಗೆ ನ್ಯಾಯ ಒದಗಿಸಬೇಕು.
ಡಾ.ಜಿ.ಎಂ.ಕಲ್ಲೇಶ್ವರಪ್ಪ, ನಿವೃತ್ತ ಪ್ರಾಧ್ಯಾಪಕ, ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ