ಆ್ಯಪ್ನಗರ

ಅನರ್ಹರಿಗೆ ಸುಪ್ರೀಂನಲ್ಲಿ ಮತ್ತೆ ನಿರಾಸೆ, ಬುಧವಾರಕ್ಕೆ ವಿಚಾರಣೆ ಮುಂದೂಡಿಕೆ

ನ್ಯಾಯಮೂರ್ತಿ ರಮಣ ನೇತೃತ್ವದ ಪೀಠ ಬುಧವಾರಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡುತ್ತಿದ್ದಂತೆ ಅನರ್ಹ ಶಾಸಕರ ಆತಂಕ ಮತ್ತಷ್ಟು ಹೆಚ್ಚಾಗಿದೆ. 17ರಲ್ಲಿ 15 ಅನರ್ಹರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಇದೇ ಅಕ್ಟೋಬರ್‌ 21ರಂದು ಚುನಾವಣೆ ಘೋಷಿಸಿದೆ.

Vijaya Karnataka 23 Sep 2019, 1:52 pm
ಹೊಸದಿಲ್ಲಿ: ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನರ್ಹ ಶಾಸಕರ ಆತಂಕ ಸೋಮವಾರವೂ ಮುಂದುವರಿದಿದೆ. ಘೋಷಣೆಯಾಗಿರುವ ಉಪಚುನಾವಣೆಗೆ ಸೋಮವಾರ ಸರ್ವೋಚ್ಛ ನ್ಯಾಯಾಲಯದಿಂದ ತಡೆ ಸಿಗಬಹುದು ಎಂದು ಕಾದಿದ್ದ ಅನರ್ಹ ಶಾಸಕರಿಗೆ ನಿರಾಸೆಯಾಗಿದ್ದು, ಕೋರ್ಟ್‌ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
Vijaya Karnataka Web ktaka-disqualified mla


ಅಕ್ಟೋಬರ್‌ 21ರಂದು 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಘೋಷಿಸಿರುವ ಉಪಚುನಾವಣೆಗೆ ತಡೆ ನೀಡಬೇಕು ಎಂದು ಕೋರಿ ಶಾಸಕರು ಸೋಮವಾರ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ಆದರೆ ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡುತ್ತಿದ್ದಂತೆ ಅನರ್ಹ ಶಾಸಕರ ಆತಂಕ ಮತ್ತಷ್ಟು ಹೆಚ್ಚಾಗಿದೆ.

17 ಶಾಸಕರು ಈ ಹಿಂದೆ ತಮ್ಮ ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ತೀರ್ಪು ಇನ್ನೂ ಹೊರ ಬಿದ್ದಿಲ್ಲ. ಇದರ ನಡುವೆ ಉಪಚುನಾವಣೆಯೂ ಘೋಷಣೆಯಾಗಿದ್ದು ಶಾಸಕರು ಆಘಾತಕ್ಕೆ ಕಾರಣವಾಗಿತ್ತು. ಹೇಗಾದರೂ ಮಾಡಿ ತಮ್ಮನ್ನು ಬಚಾವ್‌ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಮತ್ತು ಡಾ. ಅಶ್ವಥ್‌ ನಾರಾಯಣ್‌ಗೆ ಶನಿವಾರ ಹಾಗೂ ಭಾನುವಾರವಿಡೀ ದುಂಬಾಲು ಬಿದ್ದಿದ್ದರು. ಮತ್ತೊಂದು ಪ್ರಯತ್ನದಲ್ಲಿ ಚುನಾವಣಾ ಆಯೋಗದ ಅಧಿಸೂಚನೆಗೆ ತಡೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಈ ಅರ್ಜಿ ಕೂಡ ಇತ್ಯರ್ಥವಾಗದೆ ಬಂಡಾಯವೆದ್ದಿದ್ದ ಶಾಸಕರೀಗ ಅಕ್ಷರಶಃ ದಿಕ್ಕು ತೋಚದಾಗಿದೆ.

ಇದೇ ವೇಳೆ ಸುಪ್ರೀಂ ಕೋರ್ಟ್‌ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿಗೆ ನೋಟಿಸ್‌ ಜಾರಿ ಮಾಡಿದೆ. ಇವರ ಪ್ರತಿಕ್ರಿಯೆ ಅಧರಿಸಿ ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ. ಅಂದಿನವರೆಗೆ ಅನರ್ಹ ಶಾಸಕರು ಕಾಯಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ