ಆ್ಯಪ್ನಗರ

ಯಡಿಯೂರಪ್ಪ ಭೇಟಿಯಾದ ಅನರ್ಹ ಶಾಸಕ ಆನಂದ್‌ ಸಿಂಗ್‌, ಟಿಕೆಟ್‌ಗಾಗಿ ಬಿಸಿ ಬಿಸಿ ಚರ್ಚೆ

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಘೋಷಣೆಯಾಗಿರುವ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೋರಿ ಅನರ್ಹ ಶಾಸಕರು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಯಡಿಯೂರಪ್ಪ ಮನೆಯಲ್ಲಿ ಉಪಚುನಾವಣೆ ಟಿಕೆಟ್‌ ಹಂಚಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ.

Vijaya Karnataka 25 Sep 2019, 1:34 pm
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಅನರ್ಹ ಶಾಸಕರ ಅರ್ಜಿ ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ. ಇದರ ನಡುವೆ ಅನರ್ಹಗೊಂಡಿರುವ ಶಾಸಕ, ವಿಜಯನಗರದ ಆನಂದ್‌ ಸಿಂಗ್ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.
Vijaya Karnataka Web Anand Singh


ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೋರಿ ಅನರ್ಹ ಶಾಸಕರು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ ನ್ಯಾಯಾಲಯ ತಮ್ಮ ಪರವಾಗಿ ತೀರ್ಪು ನೀಡಿದರೂ ಬಿಜೆಪಿಯಲ್ಲೇ ಅನರ್ಹರ ಸ್ಪರ್ಧೆಗೆ ಅಪಸ್ವರ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆನಂದ್‌ ಸಿಂಗ್‌ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

ಅನರ್ಹರು ವರ್ಸಸ್‌ ಬಿಜೆಪಿ: ಅನರ್ಹ ಶಾಸಕರ ಸ್ಪರ್ಧೆಗೆ ಮೂಲ ಬಿಜೆಪಿಗರ ಕಡುವಿರೋಧ

ಆಗಾಗ ಪಕ್ಷ ಬದಲಿಸುವ ಆನಂದ್‌ ಸಿಂಗ್‌ಗೆ ಅವರಿಗೆ ಟಿಕೆಟ್‌ ನೀಡಬಾರದು ಎಂಬುದಾಗಿ ವಿಜಯನಗರದಲ್ಲಿ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್‌ ಸ್ಪರ್ಧೆಗೆ ಅನುಮತಿ ನೀಡಿದರೂ ಸ್ಪರ್ಧೆ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡಿಸಿದರು. ಯಡಿಯೂರಪ್ಪ ನಿವಾಸದಲ್ಲಿ ನಡೆದ ಬಿಸಿ ಬಿಸಿ ಚರ್ಚೆಯಲ್ಲಿ ಗೃಹ ಸಚಿವ ಹಾಗೂ ಸಿಎಂ ಆಪ್ತ ಬಸವರಾಜ ಬೊಮ್ಮಾಯಿ ಕೂಡ ಭಾಗವಹಿಸಿದ್ದರು.

ಶಾಸಕರ ಅನರ್ಹತೆಗೇ ತಡೆ ನೀಡಿ: ಸುಪ್ರೀಂ ಕೋರ್ಟ್‌ನಲ್ಲಿ ಮುಕುಲ್ ರೋಹ್ಟಗಿ ವಾದ

ಆನಂದ್‌ ಸಿಂಗ್‌ ಮಾತ್ರವಲ್ಲದೆ ಹಲವು ಅನರ್ಹ ಶಾಸಕರ ಸ್ಪರ್ಧೆಗೆ ಅವರವರ ಕ್ಷೇತ್ರದಲ್ಲಿ ವಿರೋಧ ಕೇಳಿ ಬರುತ್ತಿದೆ. ಹಿರೆಕೆರೂರಿನಲ್ಲಿ ಯು.ಬಿ. ಬಣಕಾರ್‌ ಮತ್ತು ಬಿ.ಸಿ. ಪಾಟೀಲ್‌ ಇಬ್ಬರೂ ಟಿಕೆಟ್‌ಗೆ ಯತ್ನಿಸುತ್ತಿದ್ದು, ಬಿ. ಫಾರಂ ಹಂಚಿಕೆ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಯಡಿಯೂರಪ್ಪ ಇಬ್ಬರನ್ನೂ ಕರೆಸಿ ಸಂಧಾನಕ್ಕೆ ಯತ್ನಿಸಿದ್ದರು. ಆದರೆ ಈ ಸಂಧಾನ ವಿಫಲವಾಗಿದೆ.

ಇನ್ನೊಂದು ಕಡೆ ಹೊಸಕೋಟೆಯಲ್ಲಿ ಎಂಟಿವಿ ನಾಗರಾಜುಗೆ ಟಿಕೆಟ್‌ ನೀಡಬಾರದು ಎಂಬುದಾಗಿ ಸಂಸದ ಬಿ.ಎನ್‌. ಬಚ್ಚೇಗೌಡ ಬಣ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುತ್ತಿದೆ. ಬಚ್ಚೇಗೌಡ ತಮ್ಮ ಪುತ್ರ ಶರತ್‌ ಬಚ್ಚೇಗೌಡ ಅವರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಆನಂದ್‌ ಸಿಂಗ್‌ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ