ಆ್ಯಪ್ನಗರ

ವೇತನ ಆಯೋಗದ 2ನೇ ವರದಿ ಜಾರಿ: ಡಿಕೆಶಿ

ರಾಜ್ಯ ಸರಕಾರಿ ನೌಕರರ ಆರನೇ ವೇತನ ಆಯೋಗದ ಎರಡನೇ ವರದಿಯನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Vijaya Karnataka 24 Aug 2018, 9:44 am
ಬೆಂಗಳೂರು: ರಾಜ್ಯ ಸರಕಾರಿ ನೌಕರರ ಆರನೇ ವೇತನ ಆಯೋಗದ ಎರಡನೇ ವರದಿಯನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.
Vijaya Karnataka Web 5


ಸರಕಾರಿ ನೌಕರರ ಸಂಘ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.

''ಹಿಂದಿನ ಸರಕಾರದ ಅವಧಿಯಲ್ಲಿ ವೇತನ ಆಯೋಗದ ಮೊದಲ ವರದಿಯ ಶಿಫಾರಸುಗಳನ್ನು ಜಾರಿಗೆ ತರಲಾಗಿದೆ. ಈಗ ಇನ್ನಿತರ ಬೇಡಿಕೆ ಒಳಗೊಂಡ ಎರಡನೇ ವರದಿ ಅನುಷ್ಠಾನಕ್ಕೆ ಸಿಎಂ ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನು ಆರ್ಥಿಕ ಇಲಾಖೆಯೊಂದಿಗೆ ಕೂಲಂಕಷವಾಗಿ ಚರ್ಚಿಸಿದ ಬಳಿಕ ಸ್ವತ: ಸಿಎಂ ಕುಮಾರಸ್ವಾಮಿ ನಿಲುವು ಪ್ರಕಟಿಸಲಿದ್ದಾರೆ,'' ಎಂದರು.

''ಎನ್‌ಪಿಎಸ್‌ ಪಿಂಚಣಿ ಸೌಲಭ್ಯವಿರುವ ನೌಕರರಿಗೆ ತೊಂದರೆ ಉಂಟಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಸಮಸ್ಯೆ ನಿವಾರಣೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಿಎಂ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದ್ದಾರೆ. ಹೀಗಾಗಿ ನೌಕರರ ವರ್ಗ ವೃಥಾ ಆತಂಕಕ್ಕೆ ಒಳಗಾಗುವುದು ಬೇಡ,'' ಎಂದರು.

ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸಿ

''ಸರಕಾರಿ ನೌಕರರು ಆತ್ಮಸಾಕ್ಷಿಯಾಗಿ ಕಾರ್ಯ ನಿರ್ವಹಿಸಬೇಕು. ಸಮಸ್ಯೆ ಹೊತ್ತುತರುವ ಜನರಿಗೆ ಪರಿಹಾರ ಒದಗಿಸುವ ವಿಶಾಲ ಮನೋಭಾವ ಹೊಂದಿರಬೇಕು. ಸಂಕಷ್ಟ ಎದುರಾದಾಗ ದೇವರ ಬಳಿ ಭಕ್ತರು ಹೋದಾಗ ಪೂಜಾರಿ ಸಾಂತ್ವನ ನೀಡುತ್ತಾನೆ. ಅದೇ ರೀತಿ ಸಮಸ್ಯೆಗಳೊಂದಿಗೆ ಬರುವ ಜನರಿಗೆ ನೌಕರರ ವರ್ಗ ಪರಿಹಾರ ಸೂಚಿಸಬೇಕು,'' ಎಂದು ಮನವಿ ಮಾಡಿದರು.

''ನೌಕರರ ಸಂಘಕ್ಕೆ ಬೆಂಗಳೂರಿನ ಹೊಸಕೆರೆ ಬಳಿ 1.2 ಎಕರೆ ಮಂಜೂರು ಮಾಡಲಾಗುವುದು. ಅಲ್ಲಿ ಭವನ ಹಾಗೂ ವಸತಿ ಸಮುಚ್ಛಯ ನಿರ್ಮಿಸಿಕೊಳ್ಳಲು ಸರಕಾರ ನೆರವು ನೀಡಲಿದೆ,'' ಎಂದು ಸಚಿವರು ಭರವಸೆ ನೀಡಿದರು.

ಎನ್‌ಪಿಎಸ್‌ ರದ್ದತಿಗೆ ಜೆಡಿಎಸ್‌ ಬದ್ಧ

ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ''ಸರಕಾರ ಸರಿದಾರಿಯಲ್ಲಿ ಮುನ್ನಡೆಯಲು ನೌಕರರ ವರ್ಗದ ಸಹಕಾರ ಅಗತ್ಯ. ಜನಸ್ನೇಹಿ ಆಡಳಿತ ನೀಡಲು ಉತ್ತಮ ಸಲಹೆಗಳನ್ನು ನೀಡಿದರೆ ಅವುಗಳನ್ನು ಜಾರಿಗೊಳಿಸಲಾಗುವುದು. ಇತ್ತೀಚಿನ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಎನ್‌ಪಿಎಸ್‌ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲು ಪಕ್ಷ ಸಿದ್ಧವಿದೆ,'' ಎಂದರು.

ಸಚಿವ ಜಿ.ಟಿ.ದೇವೇಗೌಡ, ಮೇಲ್ಮನೆ ಸದಸ್ಯ ಅ.ದೇವೇಗೌಡ, ನೌಕರರ ಸಂಘದ ಅಧ್ಯಕ್ಷ ಎಚ್‌.ಕೆ.ರಾಮು, ನಿಕಟಪೂರ್ವ ಅಧ್ಯಕ್ಷ ಬಿ.ಪಿ.ಮಂಜೇಗೌಡಮತ್ತಿತರರು

ಕೊಡಗು ಸಂತ್ರಸ್ತರಿಗೆ 102 ಕೋಟಿ ರೂ. ದೇಣಿಗೆ

ಕೊಡಗಿನಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವವರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸರಕಾರಿ ನೌಕರರ ಸಂಘ 102 ಕೋಟಿ ರೂ. ದೇಣಿಗೆ ನೀಡುವ ಪತ್ರವನ್ನು ಸಚಿವರಿಗೆ ಹಸ್ತಾಂತರಿಸಿತು. ಒಟ್ಟು 5.25 ಲಕ್ಷ ನೌಕರರು ತಮ್ಮ ಒಂದು ದಿನದ ವೇತನವನ್ನು ಸಿಎಂ ಪರಿಹಾರ ನಿಧಿ ಮೂಲಕ ಸಂತ್ರಸ್ತರಿಗೆ ತಲುಪಿಸಬೇಕು ಎಂದು ಸಂಘದ ಅಧ್ಯಕ್ಷರು ಪ್ರಕಟಿಸಿದರು. ಸಂಘದ ನಿಲುವಿಗೆ ಸಚಿವ ಶಿವಕುಮಾರ್‌ ಶ್ಲಾಘಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ