ಆ್ಯಪ್ನಗರ

ಮೈಷುಗರ್ ಖಾಸಗೀಕರಣ ಬೇಡ - ಸಿದ್ದರಾಮಯ್ಯ ಆಗ್ರಹ; ರಕ್ತಪಾತದ ಎಚ್ಚರಿಕೆ ನೀಡಿದ ಸುರೇಶ್ ಗೌಡ

ಮೈಷುಗರ್ ಕಾರ್ಖಾನೆ ಜತೆ ಮಂಡ್ಯ ಜಿಲ್ಲೆಯ ಜನತೆಗೆ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 22 Sep 2021, 9:03 pm

ಹೈಲೈಟ್ಸ್‌:

  • 'ಮೈಷುಗರ್ ಕಾರ್ಖಾನೆ ಜತೆ ಮಂಡ್ಯ ಜಿಲ್ಲೆಯ ಜನತೆಗೆ ಭಾವನಾತ್ಮಕ ಸಂಬಂಧ ಇದೆ'
  • ಹೀಗಾಗಿ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
  • ಮೈಷುಗರ್‌ ಖಾಸಗೀಕರಣವಾದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ಕೊಟ್ಟ ಸುರೇಶ್ ಗೌಡ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Siddaramaiah
ಬೆಂಗಳೂರು: ಮೈಷುಗರ್ ಕಾರ್ಖಾನೆ ಜತೆ ಮಂಡ್ಯ ಜಿಲ್ಲೆಯ ಜನರಿಗೆ ಭಾವನಾತ್ಮಕ ಸಂಬಂಧ ಇದೆ. ಈ ನಿಟ್ಟಿನಲ್ಲಿ ಮೈಷುಗರ್‌ ಖಾಸಗೀಕರಣ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮೈಷುಗರ್‌ ಕಾರ್ಖಾನೆ ವಿಚಾರವಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಖಾನೆ ಖಾಸಗೀಕರಣ ಮಾಡಬಾರದು ಎಂಬುದು ಮಂಡ್ಯದ ಜನರ ಒತ್ತಾಯವಾಗಿದೆ. ಇದಕ್ಕಾಗಿ ಮಂಡ್ಯ ಜಿಲ್ಲೆಯ ರೈತರು ಹೋರಾಟ ನಡೆಸುತ್ತಿದ್ದಾರೆ. ನಾನು‌ ಸಿಎಂ ಆಗಿದ್ದಾಗ ಈ ಸಕ್ಕರೆ ಕಾರ್ಖಾನೆಗೆ 145 ಕೋಟಿ ರೂ. ಕೊಟ್ಟಿದ್ದೆ ಎಂದರು.

ಕಾರ್ಖಾನೆಯಲ್ಲಿ 235 ಎಕರೆ ಆಸ್ತಿ ಇದೆ. ಅದನ್ನು ಅಭಿವೃದ್ಧಿಪಡಿಸಿ ಆದಾಯ ಬರುವಂತೆ ಮಾಡಿದರೆ ಸಕ್ಕರೆ ಕಾರ್ಖಾನೆಗೆ ಅನುಕೂಲವಾಗುತ್ತದೆ. ಜೊತೆಗೆ ಕೋ ಜನರೇಷನ್ ಮಾಡುವ ಪ್ರಸ್ತಾಪ ಇದೆ.‌ ಜೊತೆಗೆ ಡಿಸ್ಟಿಲರಿ ಮಾಡಬೇಕು ಎಂಬ ಅಭಿಪ್ರಾಯ ಇದೆ.
ಇದರಿಂದ ಕಾರ್ಖಾನೆ ಲಾಭದಾಯಕ ಮಾಡಲು ಸಾಧ್ಯ. ಅಷ್ಟೇ ಅಲ್ಲದೆ ಹೊಸತಾಗಿ ಯಂತ್ರೋಪಕರಣಗಳು ಬೇಕಿವೆ. ಹೆಚ್ಚು ಇಳುವರಿ ಬರುವ ಕಬ್ಬು ಬೆಳೆಯಬೇಕು ಎಂದರು.

ಮೈಷುಗರ್‌ ಅಧ್ಯಕ್ಷರಾಗಿ ನಿರಾಣಿ ನೇಮಕಕ್ಕೆ ಅಧಿವೇಶನದಲ್ಲಿ ಆಗ್ರಹ, ವಿರೋಧ ಪಕ್ಷಗಳಿಂದಲೂ ಒತ್ತಾಯ
ಮೈಷುಗರ್‌ ಬಗ್ಗೆ ಭಾವನಾತ್ಮಕ ಸಂಬಂಧ ಇರುವುದಿಂದ ಖಾಸಗೀಕರಣ ಮಾಡಬಾರದು.‌ ಹಾಗಾದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಇರುವ ಕಾರ್ಖಾನೆಗೆ ಸಂಬಂಧಿಸಿದ ಜಮೀನಿನಲ್ಲಿ ಮಾಲ್ ಅಥವಾ ಕಾಂಪ್ಲೆಕ್ಸ್ ಮಾಡಿ, ಈ ಮೂಲಕ ಆದಾಯ ಬರುವಂತೆ ಮಾಡಿದರೆ ಲಾಭದಾಯಕ ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಅಭಿಪ್ರಾಯಪಟ್ಟರು.

ಮೈಷುಗರ್‌ ಕಾರ್ಖಾನೆಯ ನಿರ್ಲಕ್ಷ್ಯದ ಬಗ್ಗೆ ಡಾ. ಕೆ ಅನ್ನದಾನಿ ಮಾತನಾಡಿ, ಮೈಷುಗರ್‌ ಕಾರ್ಖಾನೆ 1933ರಲ್ಲಿ ಆರಂಭವಾಗಿದೆ. ಏಷ್ಯಾದಲ್ಲಿ ಮೊದಲ ಬಾರಿ ಆರಂಭಗೊಂಡ ಈ ಕಾರ್ಖಾನೆ ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಸರ್ಕಾರದ ಸಾಮ್ಯದಲ್ಲಿ ಕಾರ್ಖಾನೆ ಮುನ್ನಡೆಸಲು ಹೋರಾಟ ಮಾಡುತ್ತಿದ್ದೇವೆ. 65 ಸಕ್ಕರೆ ಕಾರ್ಖಾನೆಗಳು ಇವೆ, ಈ ಪೈಕಿ ಮೈಷುಗರ್‌ ಮಾತ್ರ ಸರ್ಕಾರದ ಸಾಮ್ಯದಲ್ಲಿ ಇದೆ.‌ ಇದನ್ನು ಯಾಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಸರಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಪ್ರಾರಂಭಿಸಿ - ಮರಿತಿಬ್ಬೇಗೌಡ ಆಗ್ರಹ
2,000 ಕೋಟಿ ಬೆಲೆಬಾಳುವ ಆಸ್ತಿಯನ್ನು ಮೈಷುಗರ್‌ ಕಾರ್ಖಾನೆ ಹೊಂದಿದೆ. ಕಾರ್ಖಾನೆ ಯಾಕೆ ನಷ್ಟದಲ್ಲಿ ಇದೆ? ಇದಕ್ಕೆ ಕಾರಣ ಏನು? ಯಾರಿಗೂ ಲಾಭದಲ್ಲಿ ನಡೆಸಲು ಸಾಧ್ಯವಾಗಿಲ್ವಾ? ಎಂದ ಅವರು ಮೈಷುಗರ್‌ ಕಾರ್ಖಾನೆ ಮಂಡ್ಯದ ಜನರ ಸ್ವಾಭಿಮಾನದ ಪ್ರತೀಕ ಎಂದು ಹೇಳಿದರು.

ರಕ್ತಪಾತದ ಎಚ್ಚರಿಕೆ ಕೊಟ್ಟ ಸುರೇಶ್ ಗೌಡ

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ಮೈಷುಗರ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು. ಬದಲಾಗಿ ‌ಸರ್ಕಾರದ ಸಾಮ್ಯದಲ್ಲಿ ನಡೆಯಬೇಕು. ಒಂದು ವೇಳೆ ಖಾಸಗೀಕರಣ ಮಾಡಿದರೆ ರಕ್ತಪಾತವಾಗುತ್ತದೆ ಎಂದು ಸರ್ಕಾರಕ್ಕೆ ಕಟು ಎಚ್ಚರಿಕೆ ನೀಡಿದರು.

ಇದಕ್ಕೆ ಉತ್ತರ ನೀಡಿದ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಈ ಸಂಬಂಧ ಒಂದು ತಿಂಗಳಲ್ಲಿ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರನ್ನು ಭೇಟಿ ಮಾಡಿ ಬಂದಿದ್ದೇನೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಾರ್ಖಾನೆ ಮತ್ತೆ ಪ್ರಾರಂಭ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ