ಆ್ಯಪ್ನಗರ

ಡಿಕೆಶಿ ಬಂಧನಕ್ಕೆ ಜಾತಿ ಬಣ್ಣ ಬಳಿಯೋದು ನಾಚಿಕೆಗೇಡು- ಆರ್ ಅಶೋಕ್

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧನ ಮಾಡಿರುವುದಕ್ಕೆ ಜಾತಿ ಬಣ್ಣ ಬಳಿಯುವುದು ನಾಚಿಕೆಗೇಡು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಟ್ವಿಟರ್ ನಲ್ಲಿ ಈ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿರುವ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Vijaya Karnataka Web 10 Sep 2019, 6:31 pm
ಬೆಂಗಳೂರು: ಅಕ್ರಮ ಹಣಕಾಸು ವರ್ಗಾವಣೆ ಆರೋಪಡಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ)ಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಪ್ರಕರಣಕ್ಕೆ ಜಾತಿ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ ಎಂದು ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web R ashok


ಟ್ವಿಟರ್ ನಲ್ಲಿ ಈ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಡಿಕೆಶಿ ಅವರನ್ನು ಇಡಿಯು ಅಕ್ರಮ ಹಣ ವಹಿವಾಟು ಹಾಗೂ ಸಾಗಣಿಕೆಯ ವಿಚಾರವಾಗಿ ಬಂಧಿಸಿದೆ. ಕಾಂಗ್ರೆಸ್ ಪಕ್ಷ ಇದಕ್ಕೆ ಜಾತಿಯ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಡಿಕೆ ಶಿಕುಮಾರ್ ಬಂಧನದ ಹಿಂದೆ ಬಿಜೆಪಿ ಹಾಗೂ ಕೇಂದ್ರ ಸರಕಾರದ ಯಾವುದೇ ಪಾತ್ರವಿಲ್ಲ. ತನಿಖಾ ಸಂಸ್ಥೆಗಳು ಸಾಂವಿಧಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.


ಡಿಕೆಶಿ ಬಂಧನ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದ್ದು ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದಕ್ಕಾಗಿ ಬಂಧಿಸಲಾಗಿದೆ ಎಂದಿದೆ. ಕೇಂದ್ರ ಸರಕಾರ ಇಡಿ, ಸಿಬಿಐ ನಂತಹಾ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷದ ಮುಖಂಡರ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ.

ಈ ನಡುವೆ ಡಿಕೆಶಿ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳು ಸೆ.11 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯಲ್ಲಿ ಒಕ್ಕಲಿಗ ಸಮುದಾಯದ ಧಾರ್ಮಿಕ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ.

ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಬಂಧನಕ್ಕೆ ಒಳಪಡಿಸಿದ್ದು ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಪುತ್ರಿ ಐಶ್ವರ್ಯಗೂ ಸಮನ್ಸ್ ನೀಡಿರುವ ಇಡಿ ಅಧಿಕಾರಿಗಳು ಸೆಪ್ಟಂಬರ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ