ಆ್ಯಪ್ನಗರ

ಡ್ರಗ್ಸ್‌ ಕೇಸ್: ‘ಮಾಜಿ ಸಿಎಂ’ ಯಾರೆಂದು ತನಿಖೆ ನಡೆಸಿ‌ - ಸರಕಾರಕ್ಕೆ ಕುಮಾರಸ್ವಾಮಿ ಆಗ್ರಹ

ಟಿವಿ ಆ್ಯಂಕರ್‌ ಜೊತೆ ಸಂಪರ್ಕದಲ್ಲಿದ್ದ 'ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದು ಮೊದಲು ಗೊತ್ತಾಗಬೇಕು. ಇಲ್ಲವಾದರೆ ಯಾವ ಅಧಿಕಾರಿ ಇದನ್ನು ಬಹಿರಂಗಗೊಳಿಸಿದ ಎಂಬುದು ಅನಾವರಣವಾಗಬೇಕು' ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

Vijaya Karnataka 3 Oct 2020, 7:39 pm
ಬೆಂಗಳೂರು: ಡ್ರಗ್ಸ್‌ ಹಗರಣದಲ್ಲಿ ಟಿವಿ ಆ್ಯಂಕರ್‌ ಜತೆಗೆ ಮಾಜಿ ಮುಖ್ಯಮಂತ್ರಿ ಸಂಪರ್ಕವಿತ್ತು ಎಂದು ಮಾಧ್ಯಮಗಳ ವರದಿಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗರಂ ಆಗಿದ್ದು, "ಆ ಮಾಜಿ ಮುಖ್ಯಮಂತ್ರಿ ಯಾರೆಂದು ಸರಕಾರ ತನಿಖೆ ನಡೆಸಬೇಕು," ಎಂದು ಒತ್ತಾಯಿಸಿದ್ದಾರೆ.
Vijaya Karnataka Web HD kumaraswamy


ಸುದ್ದಿಗಾರರ ಜೊತೆ ಮಾತನಾಡಿ,‘‘ಡ್ರಗ್ಸ್‌ ಪ್ರಕರಣದ ತನಿಖೆ ಹಳ್ಳ ಹಿಡಿಯುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಜನರ ಸಮಸ್ಯೆಗಳನ್ನು ಬೇರೆಡೆ ಸೆಳೆಯುವುದಕ್ಕೆ ಸರಕಾರ ಈ ರೀತಿ ಮಾಡುತ್ತಿದೆಯಾ? ಟಿವಿ ನಿರೂಪಕಿಗೆ ನೋಟಿಸ್‌ ಬಂದ ತಕ್ಷಣ ಮೂರು ಪಕ್ಷ ಗಳ ರಾಜಕೀಯ ನಾಯಕರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂಬ ಸುದ್ದಿಯನ್ನು ನಾನು ನಿನ್ನೆ ನೋಡಿದೆ. ಎರಡು ಬಾರಿ ಸಿಎಂ ಆಗಿದ್ದರು, ಮಾಜಿ ಮುಖ್ಯಮಂತ್ರಿ ಮಗ ಎಂದು ಸುದ್ದಿ ಬಿತ್ತರವಾಗುತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ, ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ, ಸದಾನಂದ ಗೌಡ, ಶೆಟ್ಟರ್‌, ಮೊಯ್ಲಿ ಎಲ್ಲರೂ ಮಾಜಿ ಮುಖ್ಯಮಂತ್ರಿಗಳೇ ಆಗಿದ್ದಾರೆ. ಈ ಪೈಕಿ ಯಾರಿಗೆ ಕರೆ ಮಾಡಿದ್ದರೂ ಎಂಬ ಬಗ್ಗೆ ತನಿಖೆ ನಡೆಸಿ,’’ ಎಂದು ಆಗ್ರಹಿಸಿದರು.

"ಈ ರೀತಿ ಕಪೋಲ ಕಲ್ಪಿತ ಸುದ್ದಿ ಬಿತ್ತರಿಸಿದರೆ ರಾಜಕಾರಣಿಗಳ ಮರ್ಯಾದೆ ಏನಾಗಬೇಕು? ಜನರ ಮನಸ್ಸಿನಲ್ಲಿಇಂಥ ವಿಚಾರಗಳು ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಅರಿವಿದೆಯೇ? ತನಿಖಾ ಹಂತದಲ್ಲಿರುವ ಪ್ರಕರಣದ ಅಂಶಗಳು ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವೇ ಇದೆ. ಹಾಗಾದರೆ ಸರಕಾರ ಈ ಪ್ರಕರಣದಲ್ಲಿ ಬೇಕೆಂದೇ ಸೋರಿಕೆ ಮಾಡುತ್ತಿದೆಯೇ? ಇದಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದು ಮೊದಲು ಗೊತ್ತಾಗಬೇಕು. ಇಲ್ಲವಾದರೆ ಯಾವ ಅಧಿಕಾರಿ ಇದನ್ನು ಬಹಿರಂಗಗೊಳಿಸಿದ ಎಂಬುದು ಅನಾವರಣವಾಗಬೇಕು," ಎಂದು ಒತ್ತಾಯಿಸಿದರು.

"ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಂಗಳೂರು ವರದಿಗಾರ ಕೊಟ್ಟ ವರದಿ ನೋಡಿದ ಬಳಿಕ ಅಲ್ಲಿನ ಪೊಲೀಸ್‌ ಆಯುಕ್ತರಿಗೆ ಕರೆ ಮಾಡಿ ನಾನು ಮಾತನಾಡಿದ್ದೇನೆ. ವರದಿಗಾರ ನೀಡಿದ ಮಾಹಿತಿ ಪ್ರಕಾರ, ಸಂದೇಶ ಕೊಟ್ಟ ಮೊಬೈಲ್‌ ನಂಬರ್‌ನ್ನು ಶಿವಪ್ರಸಾದ್‌ ಎಂಬುವರು ಬಳಸುತ್ತಿದ್ದಾರೆ. ಅವರೊಬ್ಬ ಸರಕಾರಿ ಅಧಿಕಾರಿ. ಈ ಬಗ್ಗೆ ತನಿಖೆ ನಡೆಸಬೇಕು,’’ ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ