ಆ್ಯಪ್ನಗರ

ಮೂರು ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಎಐಸಿಟಿಇಗೆ ಪ್ರಸ್ತಾವನೆ

ಎಂಜಿನಿಯರ್‌ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿ ಪ್ರತಿ ವರ್ಷ ಸರಕಾರಿ ಕೋಟಾದಡಿಯೇ ಸಾವಿರಾರು ...

Vijaya Karnataka Web 27 Mar 2019, 5:00 am
ಬೆಂಗಳೂರು: ಎಂಜಿನಿಯರ್‌ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿ ಪ್ರತಿ ವರ್ಷ ಸರಕಾರಿ ಕೋಟಾದಡಿಯೇ ಸಾವಿರಾರು ಸೀಟುಗಳು ಉಳಿಯುತ್ತಿದ್ದರೂ ರಾಜ್ಯದಲ್ಲಿ ಇನ್ನೂ ಮೂರು ಹೊಸ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಲು ಸರಕಾರ ಪ್ರಕ್ರಿಯೆ ಆರಂಭಿಸಿದೆ.
Vijaya Karnataka Web engineer college setup
ಮೂರು ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಎಐಸಿಟಿಇಗೆ ಪ್ರಸ್ತಾವನೆ


ಮೂರು ಹೊಸ ಎಂಜಿನಿಯರಿಂಗ್‌ ಕಾಲೇಜುಗಳ ಪ್ರಾರಂಭಕ್ಕೆ ಅನುಮತಿ ನೀಡುವಂತೆ ಕೋರಿ ರಾಜ್ಯ ಸರಕಾರ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ)ಗೆ ಪತ್ರ ಬರೆದಿದ್ದು, ಸದ್ಯದಲ್ಲಿಯೇ ಪರಿಷತ್‌ನ ತಜ್ಞರ ಸಮಿತಿ ಸ್ಥಳ ಪರಿಶೀಲನೆಗೆ ಆಗಮಿಸುವ ಸಾಧ್ಯತೆಯಿದೆ. ಅಲ್ಲದೆ, ಪ್ರತಿ ಕಾಲೇಜಿಗೆ ತಲಾ ನಾಲ್ಕು ಕೋರ್ಸ್‌ ಮಂಜೂರು ಮಾಡುವುದರ ಜತೆಗೆ ಒಂದೊಂದು ಕೋರ್ಸ್‌ಗೆ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವಂತೆ ಎಐಸಿಟಿಇಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕೋರಲಾಗಿದೆ.

ಕೊಪ್ಪಳ ಜಿಲ್ಲೆಯ ತಳಕಲ್‌, ಗಂಗಾವತಿ ಹಾಗೂ ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಹೊಸ ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದೆ. 2019-20ರ ಶೈಕ್ಷಣಿಕ ವರ್ಷದಿಂದಲೇ ಈ ಮೂರು ಹೊಸ ಕಾಲೇಜುಗಳು ಪ್ರಾರಂಭವಾಗಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕವೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಈ ಮೂರು ಹೊಸ ಕಾಲೇಜುಗಳ ಸ್ಥಾಪನೆಯಿಂದ ಸಿಇಟಿ ಮೂಲಕ ಪ್ರವೇಶ ಕಲ್ಪಿಸುವ ಸರಕಾರಿ ಕೋಟಾದ ಎಂಜಿನಿಯರಿಂಗ್‌ ಸೀಟುಗಳ ಸಂಖ್ಯೆ ಸುಮಾರು 720ರಷ್ಟು ಹೆಚ್ಚಿಗೆಯಾಗಲಿವೆ. ಕಳೆದ ವರ್ಷ ಸುಮಾರು 20 ಸಾವಿರ ಎಂಜಿನಿಯರಿಂಗ್‌ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು.

ಕೊಪ್ಪಳ ಜಿಲ್ಲೆಯ ತಳಕಲ್‌ ಹಾಗೂ ಗಂಗಾವತಿಯಲ್ಲಿ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಕೊರತೆಯಿಲ್ಲ. ಆದರೆ, ಮೊಸಳೆ ಹೊಸಹಳ್ಳಿಯಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಕಾಲೇಜು ಪ್ರಾರಂಭಿಸಲಾಗುತ್ತಿದ್ದು, 2020-21ರ ವೇಳೆಗೆ ಕಾಲೇಜನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಈ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಪ್ರಸ್ತುತ 11 ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿದ್ದು, ಈ ಪೈಕಿ ಹಲವು ಕಾಲೇಜುಗಳಿಗೆ ಇನ್ನೂ 2019-20ನೇ ಸಾಲಿನ ಮಾನ್ಯತೆ ನವೀಕರಣ ಪತ್ರ ತಲುಪಿಲ್ಲ. ಅಲ್ಲದೆ, ಕೆಲ ಕಾಲೇಜುಗಳಲ್ಲಿ ಮೂಲಭೂತ ಸೌಕರ‍್ಯ ಕೊರತೆ ಹಾಗೂ ಅರ್ಹ ಪ್ರಾಧ್ಯಾಪಕರಿಲ್ಲ ಎಂಬ ಕಾರಣಕ್ಕೆ ಪ್ರವೇಶ ಮಿತಿಯನ್ನು ಕಡಿತಗೊಳಿಸಲಾಗಿದೆ.

* ಪ್ರಸ್ತುತ ರಾಜ್ಯದಲ್ಲಿರುವ ಸರಕಾರಿ ಎಂಜಿನಿಯರಿಂಗ್‌ ಕಾಲೇಜು: 11

* ಒಟ್ಟು ಎಂಜಿನಿಯರಿಂಗ್‌ ಸೀಟುಗಳ ಸಂಖ್ಯೆ: 1 ಲಕ್ಷ

* ಸರಕಾರಿ ಕಾಲೇಜು-ಖಾಸಗಿ ಕಾಲೇಜುಗಳ ಸರಕಾರಿ ಕೋಟಾದ ಸೀಟು: 65,000

* 2018-19ರಲ್ಲಿ ಸರಕಾರಿ ಕೋಟಾದಡಿ ಭರ್ತಿಯಾಗದೆ ಉಳಿದ ಸೀಟುಗಳು: 20,000

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ