ಆ್ಯಪ್ನಗರ

ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಮರುಪರಿಶೀಲನೆ: ಸಿಎಂ ಭರವಸೆ

ಹಾಜರಾತಿ ತಗ್ಗಿದ ಸರಕಾರಿ ಶಾಲೆಗಳ ವಿಲೀನ ಹಾಗೂ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ತೀರ್ಮಾನವನ್ನು ಮರುಪರಿಶೀಲಿಸುವ ಭರವಸೆಯನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದಾರೆ.

Vijaya Karnataka 8 Jul 2018, 7:30 am
ಬೆಂಗಳೂರು: ಹಾಜರಾತಿ ತಗ್ಗಿದ ಸರಕಾರಿ ಶಾಲೆಗಳ ವಿಲೀನ ಹಾಗೂ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ತೀರ್ಮಾನವನ್ನು ಮರುಪರಿಶೀಲಿಸುವ ಭರವಸೆಯನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದಾರೆ.
Vijaya Karnataka Web HDK


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ನಾಡಿನ ಹಿರಿಯ ಸಾಹಿತಿಗಳು ಹಾಗೂ ಗಣ್ಯರ ನಿಯೋಗಕ್ಕೆ ಈ ವಿಷಯ ತಿಳಿಸಿದ್ದಾರೆ.

''ನೆಲದ ನೀತಿ ಹಾಗೂ ಕಡ್ಡಾಯ ಶಿಕ್ಷಣ ಕಾಯಿದೆಗೆ ವಿರುದ್ಧವಾದ ಈ ತೀರ್ಮಾನ ಬೇಡ. ಅನ್ಯಭಾಷಾ ಕಲಿಕೆಯನ್ನು ಮಕ್ಕಳ ಮೇಲೆ ಹೇರುವುದರಿಂದ ಕನ್ನಡ ಭಾಷೆಯ ಉಳಿವಿಗೆ ಧಕ್ಕೆಯಾಗುತ್ತದೆ. ಹೀಗಾಗಿ, ಸರಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ತೀರ್ಮಾನ ಕೈಬಿಡಬೇಕು. ಅಗತ್ಯವಾದರೆ, ಎಲ್ಲ ಸರಕಾರಿ ಶಾಲೆಗಳಲ್ಲಿ ಒಂದು ಭಾಷೆಯಾಗಿ ಬೋಧಿಸಲು ಮಾತ್ರ ಕ್ರಮ ಕೈಗೊಳ್ಳಬೇಕು'' ಎಂದು ನಿಯೋಗ ಸಿಎಂಗೆ ಮನವಿ ಪತ್ರ ಸಲ್ಲಿಸಿತು.

ಭಾಷೆಗೆ ಬಾಧಕವಲ್ಲ-ಸಿಎಂ ವಾದ

ನಿಯೋಗದ ಮನವಿ ಆಲಿಸಿದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ''ಯಾವುದೇ ಸಂದರ್ಭದಲ್ಲೂ ಕನ್ನಡ ಭಾಷೆಗೆ ಮಾರಕವಾಗುವಂತಹ ತೀರ್ಮಾನ ಕೈಗೊಳ್ಳುವುದಿಲ್ಲ. ನಾಡಿನ ನೆಲ, ಜಲ ಮತ್ತು ಭಾಷೆ ಕಾಪಾಡಲು ಸರಕಾರ ಬದ್ಧ. ಮಾತೃಭಾಷೆಗೆ ವ್ಯತಿರಿಕ್ತ ತೀರ್ಮಾನ ಮಾಡುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ'' ಎಂದು ಭರವಸೆ ನೀಡಿದರು.

''ಆದರೆ, ಗ್ರಾಮೀಣ ಭಾಗದ ಮಕ್ಕಳ ಅನುಕೂಲ ಹಾಗೂ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಇದರಿಂದ ಕನ್ನಡ ಭಾಷೆಗೆ ಯಾವುದೇ ಬಾಧಕ ಇಲ್ಲ. ಅಧಿವೇಶನ ಮುಗಿದ ಬಳಿಕ ಸರಕಾರಿ ಶಾಲೆಗಳ ಸುಧಾರಣೆ ಬಗ್ಗೆ ಸಭೆ ಕರೆಯುತ್ತೇನೆ'' ಎಂದು ಆಶ್ವಾಸನೆ ನೀಡಿದರು.

'ಅಧಿವೇಶನ ಬಳಿಕ ನಾಡಿನ ಎಲ್ಲ ಸಾಹಿತಿ, ಹಿರಿಯ ಚಿಂತಕರು, ಶಿಕ್ಷಣ ತಜ್ಞರು, ಕನ್ನಡಪರ ಹೋರಾಟಗಾರರ ಸಭೆ ಕರೆದು ಸಾಧಕ -ಬಾಧಕಗಳ ಚರ್ಚಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ,' ಎಂದು ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಸಾಹಿತಿ ಪ್ರೊ.ಚಂದ್ರಶೇಖರ ಪಾಟಿಲ, ಡಾ.ಸಿದ್ದಲಿಂಗಯ್ಯ, ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ಡಾ.ಮಲ್ಲಿಕಾಘಂಟಿ, ಹಿರಿಯ ಚಿಂತಕ ಗೊ.ರು.ಚನ್ನಬಸಪ್ಪ, ಲಕ್ಷ್ಮಿನಾರಾಯಣ ನಾಗವಾರ, ಡಾ.ನಿರಂಜನ ಆರಾಧ್ಯ, ಡಾ.ವಿಜಯಮ್ಮ, ಬಿ.ಟಿ.ಲಲಿತಾ ನಾಯಕ್‌, ವನಮಾಲಾ ಸಂಪನ್ನಕುಮಾರ್‌, ಡಾ.ವಸುಂಧರಾ ಭೂಪತಿ, ನಾ.ಶ್ರೀಧರ್‌ ನಿಯೋಗದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ