ಆ್ಯಪ್ನಗರ

ಪಕ್ಷಾಂತರಿ ಶಾಸಕರ ಸಂಕಟ ಕಂಡು ಕನಿಕರವಾಗುತ್ತಿದೆ: ಈಶ್ವರ್‌ ಖಂಡ್ರೆ ವ್ಯಂಗ್ಯ

"ಸಚಿವ ಸ್ಥಾನಕ್ಕಾಗಿ ಕಾದುಕುಳಿತಿರುವವರಿಗೆ ನಾಳೆ, ನಾಡಿದ್ದು ಎಂದು ಭರವಸೆ ನೀಡುತ್ತಾ ಯಡಿಯೂರಪ್ಪ ಕಾಲಹರಣ ಮಾಡುತ್ತಿದ್ದಾರೆ. ಈ ರಾಜಕೀಯ ಜಂಜಾಟದಲ್ಲಿ ಮುಖ್ಯಮಂತ್ರಿಗಳು ಆಡಳಿತವನ್ನು ಸಂಪೂರ್ಣ ಮರೆತಿದ್ದಾರೆ,’’ ಎಂದು ಈಶ್ವರ್‌ ಖಂಡ್ರೆ ದೂರಿದ್ದಾರೆ.

Vijaya Karnataka 28 Jan 2020, 7:09 pm
ಬೆಂಗಳೂರು: ರಾಜಕೀಯ ಸ್ವಾರ್ಥ, ಅಧಿಕಾರ ಲಾಲಸೆಯಿಂದ ಬಿಜೆಪಿ ಸೇರಿದ್ದ ಪಕ್ಷಾಂತರಿ ಶಾಸಕರು ಅನುಭವಿಸುತ್ತಿರುವ ಸಂಕಟ ಕಂಡು ಕನಿಕರವಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ವ್ಯಂಗ್ಯವಾಡಿದ್ದಾರೆ.
Vijaya Karnataka Web Eshwar Khandre


ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘‘24 ತಾಸಿನೊಳಗೆ ಸಚಿವ ಸ್ಥಾನ ನೀಡುತ್ತೇವೆ ಎಂಬ ಮಾತು ನಂಬಿ ಪಕ್ಷಾಂತರ ಮಾಡಿದ್ದವರ ಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆ. ಇದು ಪಕ್ಷಾಂತರಿಗಳಿಗೆ ತಕ್ಕ ಪಾಠ,’’ ಎಂದರು.

‘‘ನೈತಿಕತೆ ಗಾಳಿಗೆ ತೂರಿ ಬಿಜೆಪಿ ಸರಕಾರ ರಚನೆ ಮಾಡಿತು. ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಸಮರ್ಥ ಆಡಳಿತ ನೀಡುವ ಭರವಸೆಯನ್ನೇ ಮೂಡಿಸಿಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದ್ದು, ಅಭಿವೃದ್ಧಿ ಶೂನ್ಯ ಸ್ಥಿತಿ ತಲುಪಿದೆ. ಜನಪರ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ ನೆಲಕಚ್ಚಿದೆ,’’ ಎಂದು ಆಪಾದಿಸಿದರು.

‘‘ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲಎಂಬುದು ಗೊತ್ತಿದ್ದೂ ಸಿಎಂ ಯಡಿಯೂರಪ್ಪ ಅವರು ಪಕ್ಷಾಂತರಿಗಳಿಗೆ ಏಕೆ ಭರವಸೆ ಕೊಟ್ಟರು ಎಂಬುದು ತಿಳಿಯುತ್ತಿಲ್ಲ. ಸಚಿವ ಸ್ಥಾನಕ್ಕಾಗಿ ಕಾದುಕುಳಿತಿರುವವರಿಗೆ ನಾಳೆ, ನಾಡಿದ್ದು ಎಂದು ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ರಾಜಕೀಯ ಜಂಜಾಟದಲ್ಲಿ ಮುಖ್ಯಮಂತ್ರಿಗಳು ಆಡಳಿತವನ್ನು ಸಂಪೂರ್ಣ ಮರೆತಿದ್ದಾರೆ,’’ ಎಂದು ದೂರಿದರು.

‘‘ರಾಜ್ಯದಲ್ಲಿಆಡಳಿತ ಯಂತ್ರ ಕುಸಿದುಬಿದ್ದಿದ್ದು, ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೇ ಸಂಪೂರ್ಣ ಹೊಣೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮೊದಲು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರನ್ನು ವಂಚಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ’’ ಎಂದು ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ