ಆ್ಯಪ್ನಗರ

ನಟ ಯಶ್‌ ಮನೆ ಬಾಡಿಗೆ ವಿವಾದ: ಮನೆ ಮಾಲೀಕರಿಗೆ 25ಲಕ್ಷ ಠೇವಣಿ ನೀಡಲು ರಿಜಿಸ್ಟ್ರಿಗೆ ಆದೇಶ

ಚಿತ್ರ ನಟ ಯಶ್‌ ಮತ್ತವರ ಕುಟುಂಬ ವಾಸವಿದ್ದ ಕತ್ರಿಗುಪ್ಪೆಯ ಮನೆಯ ಬಾಡಿಗೆ ಬಾಕಿ ಹಣ 25 ಲಕ್ಷ ರೂಗಳನ್ನು ಮನೆಯ ಮಾಲೀಕ ಎಂ...

Vijaya Karnataka 23 Mar 2019, 5:00 am
ಬೆಂಗಳೂರು: ಚಿತ್ರ ನಟ ಯಶ್‌ ಮತ್ತವರ ಕುಟುಂಬ ವಾಸವಿದ್ದ ಕತ್ರಿಗುಪ್ಪೆಯ ಮನೆಯ ಬಾಡಿಗೆ ಬಾಕಿ ಹಣ 25 ಲಕ್ಷ ರೂ.ಗಳನ್ನು ಮನೆಯ ಮಾಲೀಕ ಎಂ. ಮುನಿಪ್ರಸಾದ್‌ಗೆ ಬಿಡುಗಡೆ ಮಾಡಲು ರಿಜಿಸ್ಟ್ರಿಗೆ ಹೈಕೋರ್ಟ್‌ ಶುಕ್ರವಾರ ಆದೇಶ ನೀಡಿದೆ.
Vijaya Karnataka Web {b847afb1-27fb-4522-a25e-41973e158858}


ಮನೆಯ ಮಾಲೀಕ ಮುನಿಪ್ರಸಾದ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯಪೀಠ, ಬಾಡಿಗೆ ಬಾಕಿ ಹಣವನ್ನು ಮನೆ ಮಾಲೀಕರಿಗೆ ಬಿಡುಗಡೆ ಮಾಡುವಂತೆ ರಿಜಿಸ್ಟ್ರಿಗೆ ಸೂಚಿಸಿ ಮಧ್ಯಾಂತರ ಅರ್ಜಿ ವಿಲೇವಾರಿ ಮಾಡಿತು.

ಕೋರ್ಟ್‌ ಆದೇಶದಂತೆ ಮನೆ ಬಾಡಿಗೆ ಬಾಕಿ ಮೊತ್ತ 25 ಲಕ್ಷ ರೂ. ಗಳನ್ನು ಯಶ್‌ ತಾಯಿ ಪುಷ್ಪಾ ಹೈಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸಿದ್ದು, ಅದನ್ನು ಮನೆ ಮಾಲೀಕನಾದ ತನಗೆ ಬಿಡುಗಡೆ ಮಾಡುವಂತೆ ಕೋರಿ ಮುನಿಪ್ರಸಾದ್‌ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಮನೆ ಖಾಲಿ ಮಾಡಲು ಕಾಲಾವಕಾಶ ಕೋರಿ ಅರ್ಜಿ :

ಈ ಮಧ್ಯೆ,ಹಾಸನದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದು, ಅದು ಪೂರ್ಣಗೊಳ್ಳಲು ಸಮಯ ಹಿಡಿಯುತ್ತಿದೆ. ಹಾಗಾಗಿ ಬಾಡಿಗೆ ಮನೆ ಖಾಲಿ ಮಾಡಲು ಇನ್ನೂ ಆರು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡುವಂತೆ ಕೋರಿ ಯಶ್‌ ತಾಯಿ ಹೈಕೋರ್ಟ್‌ಗೆ ಮತ್ತೊಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅರ್ಜಿಯು ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ.

ಹೈಕೋರ್ಟ್‌ ಕಳೆದ 2018ರ ಸೆ.5ರಂದು, ಮನೆ ಮಾಲೀಕರಿಗೆ ಕೂಡಲೇ ಬಾಡಿಗೆ ಬಾಕಿ ಹಣವನ್ನು ಬಡ್ಡಿಸಹಿತ ಪಾವತಿಸಿದರೆ 2019ರ ಮಾ. 31ರವರೆಗೆ ಮನೆಯಲ್ಲಿ ವಾಸ ಮುಂದುವರಿಸಬಹುದು. ಒಂದೊಮ್ಮೆ ಬಾಡಿಗೆ ಹಣ ಪಾವತಿಸುವುದು ವಿಳಂಬವಾದರೆ, 2018ರ ಡಿ. 31ರೊಳಗೆ ಮನೆ ಖಾಲಿ ಮಾಡಿಕೊಡಬೇಕೆಂದು ಆದೇಶ ನೀಡಿತ್ತು. ಅದರಂತೆ ಪುಷ್ಪಾ, ಬಾಡಿಗೆ ಬಾಕಿ 25 ಲಕ್ಷ ರೂ. ಹೈಕೋರ್ಟ್‌ನಲ್ಲಿ ಠೇವಣಿ ಇರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ