ಆ್ಯಪ್ನಗರ

ಆರ್ಥಿಕ ಶಿಸ್ತು ಪಾಲನೆ ಮಾಡಿ - ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

ತೆರಿಗೆ ಕೊರತೆ, ಜೆಎಸ್‌ಟಿ ಪರಿಹಾರ ಸಿಗದಿರುವ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಹಣಕಾಸು ಸಮಸ್ಯೆಗಳು ಎದುರಾಗಲಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಂದಾಜು ಮಾಡಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಶಿಸ್ತು ಪಾಲನೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 23 Sep 2021, 6:40 pm
ಬೆಂಗಳೂರು: ತೆರಿಗೆ ಕೊರತೆ ಹಾಗೂ ಜೆಎಸ್‌ಟಿ ಪರಿಹಾರ ಸಿಗದಿರುವ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಹಣಕಾಸು ಸಮಸ್ಯೆಗಳು ಎದುರಾಗಲಿವೆ. ಈ ನಿಟ್ಟಿನಲ್ಲಿ ಆರ್ಥಿಕ ಶಿಸ್ತು ಪಾಲನೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು. ‌
Vijaya Karnataka Web Siddaramaiah


ಎರಡನೇ ಪೂರಕ ಅಂದಾಜುಗಳ ವೆಚ್ಚದ ಮಂಡನೆ ಬಳಿಕ ಮಾತಾಡಿದ ಮಾಜಿ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ, ಸರ್ಕಾರಕ್ಕೆ ಆರ್ಥಿಕತೆ ನಿರ್ವಹಣೆ ಬಗ್ಗೆ ಕೆಲವೊಂದು ಟಿಪ್ಟ್‌ಗಳನ್ನು ಕೊಟ್ಟರು.

ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತು ಪಾಲನೆ ಅಗತ್ಯವಾಗಿದೆ. ಜಿಎಸ್‌ಟಿ ಪರಿಹಾರ ಕೊಟ್ಟಿಲ್ಲ, ಜಿಎಸ್‌ಟಿ ಸಂಗ್ರಹ ಕೂಡಾ ಕಡಿಮೆ ಆಗಿದೆ. ಉಳಿದ ಯಾವುದೇ ಭಾಗದಿಂದ ತೆರಿಗೆ ಬರುತ್ತಿಲ್ಲ.‌ ಬದ್ಧ ಖರ್ಚು ಶೇ. 102 ಆಗಿದೆ. ಹಾಗಾದರೆ ದುಡ್ಡು ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ: ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಕಿಡಿ
ಆರ್ಥಿಕ ಶಿಸ್ತು ಪಾಲನೆ ಮಾಡುವುದು ಸರ್ಕಾರಕ್ಕೆ ‌ಕಷ್ಟ. ಈ ಕಾರಣದಿಂದ ಎಚ್ಚರಿಕೆಯಿಂದ ಇರಬೇಕು. ಈಗಾಗಲೇ, 4 ಲಕ್ಷದ 57 ಸಾವಿರ ಕೋಟಿ ರೂ. ಸಾಲ ಇದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎಂದಿದ್ದೀರಿ. ಆದರೆ ಇದೀಗ ಸಿಎಂ ಆದ ಬಳಿಕ ಹೊಸ ಯೋಜನೆ ಘೋಷಣೆ ಮಾಡಿದ್ದೀರಿ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಸರಕಾರಕ್ಕೆ ಸಲಹೆ ಇತ್ತರು.

ಜಿಎಸ್‌ಟಿ ಕೌನ್ಸಿಲ್‌ನಲ್ಲಿ 2022ನೇ ಇಸವಿಗೆ ಪರಿಹಾರ ಕೊಡಲು ಆಗಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಹಾಗಾದಲ್ಲಿ ಸಾಕಷ್ಟು ಸಮಸ್ಯೆ ಆಗುತ್ತದೆ. ಎಷ್ಟು ಸಾಲ ಮಾಡಲು ಸಾಧ್ಯ? ಈ ನಿಟ್ಟಿನಲ್ಲಿ ಆರ್ಥಿಕ ಶಿಸ್ತು ಪಾಲನೆ ಮಾಡಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸಲಹೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಆರ್ಥಿಕವಾಗಿ ಕೆಲವು ಕಠಿಣ ನಿರ್ಧಾರ ಕೈಗೊಳ್ಳಲಾಗುವುದು. ಅನುತ್ಪಾದಕ ಮತ್ತು ಅನಗತ್ಯ ವೆಚ್ಚಗಳನ್ನು ಕಡಿತ ಮಾಡಲಿದ್ದೇವೆ.‌ ಅಪ್ರಿಯವಾದರೂ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ನಿರ್ಮಲಾ ಸೀತಾರಾಮನ್ ಭೇಟಿಯಾದ ಬೊಮ್ಮಾಯಿ, 11,800 ಕೋಟಿ ರೂ. ಜಿಎಸ್‌ಟಿ ಪರಿಹಾರ ಬಿಡುಗಡೆಗೆ ಮನವಿ
ಜಿಎಸ್‌ಟಿ ಪರಿಹಾರ ಧನ 2022ಕ್ಕೆ ಮುಕ್ತಾಯವಾಗುತ್ತದೆ. ಅದನ್ನು ಮುಂದೆಯೂ ಮುಂದುವರಿಸಬೇಕು ಎಂದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯ ಮಾಡಿದ್ದೇನೆ. ಕೋವಿಡ್ - 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಜಿಎಸ್‌ಟಿ ಪರಿಹಾರ ಮೊತ್ತ ಮುಖ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಮುಂದುವರಿಸುತ್ತದೆ ಎಂಬ ನಂಬಿಕೆ ಇದೆ ಎಂದು ಹಣಕಾಸು ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಸದನಕ್ಕೆ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಆಗುವ ಮೊದಲು ಜಿಎಸ್‌ಟಿ ಕೌನ್ಸಿಲ್‌ಗೆ ಕರ್ನಾಟಕದ ಪ್ರತಿನಿಧಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಜತೆಗೆ ರಾಜ್ಯದ ಪಾಲಿನ ಜಿಎಸ್‌ಟಿ ಪರಿಹಾರ ಬಾಕಿ 11,800 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ