ಆ್ಯಪ್ನಗರ

ಅಯ್ಯಪ್ಪ ದೊರೆಯ ಸುಪಾರಿ ಕೊಲೆ-ರೆಡಿಯಾಗಿತ್ತು ಪ್ಲಾನ್ ಎ,ಪ್ಲಾನ್ ಬಿ!

ಅಲಯೆನ್ಸ್ ವಿವಿಯ ವಿಶ್ರಾಂತ ಉಪಕುಲಪತಿ ಅಯ್ಯಪ್ಪ ದೊರೆ ಹತ್ಯೆ ಪ್ರಕರಣ ಹಲವಾರು ಅಘಾತಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಅಯ್ಯಪ್ಪ ದೊರೆ ಜೊತೆಗೆ ಸಹೋದರ ಮಧುಕರ್‌ ಅಂಗೂರ್‌ ಹತ್ಯೆಗೂ ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.

Vijaya Karnataka Web 17 Oct 2019, 9:43 pm
ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಉಪ ಕುಲಪತಿ ಅಯ್ಯಪ್ಪ ದೊರೆ (53) ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದು ಸುಮಾರು 2 ಸಾವಿರ ಕೋಟಿ ರೂ. ಬೆಲೆಬಾಳುವ ಅಲಯನ್ಸ್‌ ವಿವಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದಕ್ಕಾಗಿ ಎನ್ನುವುದು ಬಯಲಾಗಿದೆ.
Vijaya Karnataka Web bangalore murdar


ಸಹೋದರರಾಗಿರುವ ಸುಧೀರ್‌ ಅಂಗೂರ್‌ ಮತ್ತು ಮಧುಕರ್‌ ಅಂಗೂರ್‌ ಸೇರಿ 2010ರಲ್ಲಿಅಲಯನ್ಸ್‌ ವಿವಿ ಸ್ಥಾಪಿಸಿದ್ದರು. ಅದಕ್ಕೆ ಅಯಪ್ಪ ದೊರೆ ಸಂಸ್ಥಾಪಕ ಉಪ ಕುಲಪತಿಯಾಗಿದ್ದರು. 4 ವರ್ಷಗಳ ಬಳಿಕ ಅಯ್ಯಪ್ಪ ಅವರ ಪತ್ನಿ ಪಾವನಾ ಉಪ ಕುಲಪತಿಯಾಗಿ ಕೆಲಸ ಮಾಡಿದ್ದರು. ವಿವಿಯ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸುವ ವಿಚಾರವಾಗಿ ಅಂಗೂರ್‌ ಸಹೋದರರ ನಡುವೆ ಹಲವು ಬಾರಿ ಜಗಳ ನಡೆದಿದೆ. ಸುಮಾರು 25ಕ್ಕೂ ಹೆಚ್ಚು ಸಿವಿಲ್‌ ಮತ್ತು ಕ್ರಿಮಿನಲ್‌ ಕೇಸ್‌ಗಳು ಪರಸ್ಪರ ದಾಖಲಾಗಿವೆ.

ಮೊದಲು ಸುಧೀರ್‌ ಅಂಗೂರ್‌ ಜೊತೆಗೆ ಆತ್ಮೀಯರಾಗಿದ್ದ ಅಯ್ಯಪ್ಪ ಅವರು ಕೆಲವು ವರ್ಷಗಳಿಂದ ಮಧುಕರ್‌ ಜೊತೆ ಗುರುತಿಸಿಕೊಂಡಿದ್ದರು. ವಿವಿಯಲ್ಲಿ ಹೊಸ ವಿಭಾಗಗಳ ಪ್ರಾರಂಭ, ಕಾಲೇಜಿನ ಕಟ್ಟಡಗಳ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ಕೆಲಸಗಳನ್ನು ಅಯ್ಯಪ್ಪ ನಿಭಾಯಿಸಿದ್ದರು. ವಿವಿಯ ಎಂಬಿಎ ಕೋರ್ಸ್‌ಗೆ ಸೇರಲು ವಿದ್ಯಾರ್ಥಿಗಳು ಪೈಪೋಟಿಗೆ ಇಳಿಯುವಂತಹ ಪರಿಸ್ಥಿತಿ ಇತ್ತು. ವಿವಿಯ ಸಂಪೂರ್ಣ ಆಳ ಅಗಲವನ್ನು ಅಯ್ಯಪ್ಪ ತಿಳಿದಿದ್ದರು. ಅಣ್ಣ ತಮ್ಮಂದಿರು ಆಸ್ತಿ ವಿಚಾರವಾಗಿ ನ್ಯಾಯಾಲಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೊರೆ ಹೋದಾಗ ಸೂಕ್ತ ದಾಖಲೆಗಳನ್ನು ಒದಗಿಸುತ್ತಿದ್ದ ಅಯ್ಯಪ್ಪ, ವ್ಯಾಜ್ಯದಲ್ಲಿ ಮಧುಕರ್‌ ಅಂಗೂರ್‌ ಕೈ ಮೇಲಾಗುವಂತೆ ನೋಡಿಕೊಂಡಿದ್ದರು. ಇತ್ತೀಚೆಗೆ ವ್ಯಾಜ್ಯವೂ ಅಂತಿಮ ಹಂತಕ್ಕೆ ಬಂದಿದ್ದು, ಮಧುಕರ್‌ ಅಂಗೂರ್‌ ಪರವಾಗಿಯೇ ತೀರ್ಪು ಬರುವ ಸಾಧ್ಯತೆ ಇತ್ತು.

ಇಬ್ಬರ ಕೊಲೆ ಸ್ಕೆಚ್‌

ವ್ಯಾಜ್ಯದಲ್ಲಿ ಹಿನ್ನಡೆ ಆಗುತ್ತಿರುವುದರಿಂದ ಸುಧೀರ್‌ ಕುಪಿತಗೊಂಡಿದ್ದರು. ಹೇಗಾದರೂ ಮಾಡಿ ವಿವಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯೋಚಿಸಿ ಅದಕ್ಕಾಗಿ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಸೂರಜ್‌ ಸಿಂಗ್‌ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಲೆ ವಿಚಾರ ಮಾತನಾಡಿದ್ದರು. ಇಬ್ಬರನ್ನು ಮುಗಿಸಿಬಿಟ್ಟರೆ ವಿವಿಯಲ್ಲಿ ನಮ್ಮ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಅವರ ಕೊಲೆಗೆ ಎಷ್ಟು ಖರ್ಚಾದರೂ ಪರವಾಗಿಲ್ಲಎಂದು ಹೇಳಿದ್ದರು. ಮೊದಲು ಅವರ ಚಲನವಲನ ಗಮನಿಸು. ನಂತರ ಸುಪಾರಿ ಹಂತಕರನ್ನು ಬಳಸಿ ಕೊಲೆ ಮಾಡು. ಎಷ್ಟು ಜನರನ್ನು ಬೇಕಾದರೂ ಬಳಸಿಕೋ. ಒಬ್ಬರಿಗೆ 20 ಲಕ್ಷ ರೂ. ಕೊಡುತ್ತೇನೆ ಎಂದು ಸೂರಜ್‌ಗೆ ಹೇಳಿದ್ದರು. ಅದರಂತೆ, ಜೆ.ಸಿ ನಗರ ಸುತ್ತಲಿನ ಪ್ರದೇಶಗಳ ಅಪರಾಧ ಹಿನ್ನೆಲೆ ಇರುವ ನಾಲ್ವರನ್ನು ಸೂರಜ್‌ ತನ್ನ ತಂಡಕ್ಕೆ ಸೇರಿಸಿಕೊಂಡಿದ್ದ.

''ಒಬ್ಬೊಬ್ಬರಿಗೆ 20 ಲಕ್ಷ ರೂ.ಯಂತೆ ಕೊಡುತ್ತೇನೆ. ಕೆಲಸ ಮುಗಿಸಿದ ಬಳಿಕ ನಿಮಗೆಲ್ಲ ವಿವಿಯಲ್ಲಿಕೆಲಸ ಕೊಡಿಸುತ್ತೇನೆ. ಅಯ್ಯಪ್ಪ ಕೊಲೆ ವಿಷಯ ನಮಗೆ ಮಾತ್ರ ಗೊತ್ತಿರುತ್ತದೆ. ಆ ವಿಷಯ ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿ ಮಧುಕರ್‌ನಿಂದ ಆಗಾಗ ಹಣ ಸುಲಿಗೆ ಮಾಡಬಹುದು ಎಂದು ಬಾಡಿಗೆ ಹಂತಕರಿಗೆ ಅಮಿಷ ಒಡ್ಡಿದ್ದ. ಅದಕ್ಕೆ ಹಂತಕರು ಒಪ್ಪಿದ್ದರು,'' ಎಂದು ಪೊಲೀಸರು ತಿಳಿಸಿದರು.

ಬೆಳಗ್ಗೆಯಿಂದ ಕಾಯುತ್ತಿದ್ದರು

ಅಯ್ಯಪ್ಪ ಅವರ ಸಂಪೂರ್ಣ ಚಲನವಲನ ಗಮನಿಸಿದ್ದ ಸೂರಜ್‌, ಅ.15ರಂದು ಮಧ್ಯಾಹ್ನ ಅಯ್ಯಪ್ಪ ಮನೆಯಿಂದ ಹೊರಗೆ ಬಂದ ಕ್ಷಣದಿಂದ ವಿವಿಧ ಸ್ಥಳಗಳಲ್ಲಿ ಕೊಲ್ಲಲು ಯೋಚಿಸಿದ್ದರೂ ಸಾಧ್ಯವಾಗಿರಲಿಲ್ಲ. ಅಯ್ಯಪ್ಪ ರಾತ್ರಿ 8 ಗಂಟೆಗೆ ಮನೆ ಸೇರಿಕೊಂಡಿದ್ದರು. ಹೊರಗೆ ಬಂದೇ ಬರುತ್ತಾರೆ ಎಂದು ಕಾದು ಕುಳಿತ ದುಷ್ಕರ್ಮಿಗಳು, ವಾಕಿಂಗ್‌ಗೆ ಬಂದ ಸಂದರ್ಭದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಆರೋಪಿಗಳ ಬಂಧನವಾಗಿದ್ದು ಹೇಗೆ?

ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗಂಭೀರತೆ ಆಧರಿಸಿ ಪೊಲೀಸರ ಎಂಟು ತಂಡಗಳನ್ನು ರಚಿಸಲಾಯಿತು. ವಿವಿ ಆಸ್ತಿ ವಿಚಾರವಾಗಿ ವ್ಯಾಜ್ಯ ಇರುವುದನ್ನು ತಿಳಿದು, ಅಯ್ಯಪ್ಪ ಅವರೊಂದಿಗೆ ನಂಟು, ಫೋನ್‌ ಸಂಪರ್ಕ ಹೊಂದಿರುವವರು ಮತ್ತು ವ್ಯಾಜ್ಯದಲ್ಲಿಎದುರಾಳಿಗಳು ಯಾರಿದ್ದರು ಎಂದು ಪರಿಶೀಲನೆ ನಡೆಸಲಾಯಿತು. ಅಷ್ಟರಲ್ಲೇ, ವಿವಿಯ ಆವರಣದಲ್ಲಿ ಸುಧೀರ್‌ ಅಂಗೂರ್‌ ಕೊಲೆ ಮಾಡಿಸಿರಬಹುದು ಎಂಬ ಸುದ್ದಿ ಹಬ್ಬಿತ್ತು. ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದಾಗ ಯಾರ ಜೊತೆ ವೈರತ್ವ ಇತ್ತು ಎಂಬ ಕುರಿತು ಮಾಹಿತಿ ನೀಡಿದರು.

ಮೊದಲು ಮಧುಕರ್‌ ಅಂಗೂರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ''ಅಯ್ಯಪ್ಪ ದೊರೆ ನನ್ನ ಆತ್ಮೀಯ ಸ್ನೇಹಿತ. ನಾವಿಬ್ಬರು ಸೇರಿ ಸುಧೀರ್‌ ವಿರುದ್ಧ ಹೋರಾಡುತ್ತಿದ್ದೆವು. ಆತನೇ ಕೊಲೆ ಮಾಡಿಸಿರಬಹುದು ಎಂಬ ಮಾಹಿತಿ ನೀಡಿದರು. ಕೂಡಲೇ ಸುಧೀರ್‌ ಫೋನ್‌ ಸಂಖ್ಯೆ ಪಡೆದ ಪೊಲೀಸರು ಚಲನವಲನ ಪತ್ತೆ ಮಾಡಿ ವಕೀಲರ ಕಚೇರಿಯಲ್ಲೇ ಸುಧೀರ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದರು. ತೀವ್ರ ವಿಚಾರಣೆ ನಡೆಸಿದಾಗ ಸೂರಜ್‌ ಸಿಂಗ್‌ ಮೂಲಕ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ತಿಳಿಸಿದ. ಆತನ ಮಾಹಿತಿ ಆಧರಿಸಿ ಹೊಟೇಲ್‌ವೊಂದರಲ್ಲಿವಿಶ್ರಾಂತಿ ಪಡೆಯುತ್ತಿದ್ದ ಮತ್ತೊಬ್ಬ ಆರೋಪಿ ಸೂರಜ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕೊಲೆಗೆ ರೆಡಿಯಾಗಿತ್ತು ಪ್ಲಾನ್‌ ಎ ಮತ್ತು ಬಿ
ಅಯ್ಯಪ್ಪ ದೊರೆ ಹಾಗೂ ಮಧುಕರ್‌ ಅಂಗೂರ್‌ ಚಲನವಲನದ ಮೇಲೆ ಸೂರಜ್‌ ನಿಗಾ ಇಟ್ಟಿದ್ದ. ಮೊದಲು ಯಾರು ಸಿಗುವರೋ ಅವರನ್ನು ಕೊಲೆ ಮಾಡುವ ಉದ್ದೇಶವಿತ್ತು. ಅಯ್ಯಪ್ಪ ಅವರ ಕೊಲೆಯಿಂದ ಎ ಪ್ಲಾನ್‌ ಸಕ್ಸಸ್‌ ಆಗಿದ್ದು, ಪ್ಲಾನ್‌ ಬಿ ಕಾರ್ಯಗತಗೊಳಿಸಬೇಕು ಎಂದು ಮಾತಾಡಿಕೊಳ್ಳುತ್ತಿದ್ದ ಎಂಬ ಅಘಾತಕಾರಿ ಮಾಹಿತಿಯೂ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.

''ಇದೊಂದು ಆಘಾತಕಾರಿ ಘಟನೆ. ನಾನು ಶಾಕ್‌ನಲ್ಲಿದ್ದೇನೆ. ಡಾ. ಅಯ್ಯಪ್ಪ ಅವರು ವೃತ್ತಿಪರರಾಗಿದ್ದರು. ನನ್ನ ಆತ್ಮೀಯ ಸ್ನೇಹಿತರು. ವಿವಿಯ ಬೆಳವಣಿಗೆಗೆ ತುಂಬಾ ಕಷ್ಟ ಪಟ್ಟಿದ್ದರು,'' ಎಂದು ಮಧುಕರ್‌ ಅಂಗೂರ್‌ ಹೇಳಿದರು.

''ಸುಧೀರ್‌ ಕಡೆಯವರು ನಮ್ಮ ಕಾರುಗಳನ್ನು ಹಿಂಬಾಲಿಸುವುದು ಗೊತ್ತಿತ್ತು. ಆದರೆ, ಕೊಲೆ ಮಾಡುವ ಮಟ್ಟಿಗೆ ಇಳಿಯುತ್ತಾರೆ ಎಂದು ಗೊತ್ತಿರಲಿಲ್ಲ. ವಿವಿಯ ಮಾಲೀಕತ್ವ ವ್ಯಾಜ್ಯ ಸಂಬಂಧಿಸಿದಂತೆ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ನಿಂದ ಆದೇಶ ಬಂದಿದ್ದು, ನಮ್ಮ ಪರವಾಗಿದೆ. ಆದೇಶಕ್ಕೆ 6 ವಾರಗಳ ವೇಟಿಂಗ್‌ ಅವಧಿ ಇರುತ್ತದೆ. 4 ವಾರ ಕಳೆದಿದ್ದು, ಇನ್ನೂ 2 ವಾರ ಬಾಕಿ ಇದೆ. 2 ವಾರ ಕಳೆದಿದ್ದರೆ ಆದೇಶ ಜಾರಿಗೆ ಬರುತ್ತಿತ್ತು. ಸುಧೀರ್‌ ಅಂಗೂರ್‌ ವಿವಿ ಆಸ್ತಿ ಮೇಲೆ ಪ್ರಾಬಲ್ಯ ಸಾಧಿಸಲು ನಕಲಿ ದಾಖಲೆಗಳನ್ನು ತೋರಿಸಿರುವುದು ವಿಚಾರಣೆ ವೇಳೆ ಸಾಬೀತಾಗಿದೆ. ಈ ಸಂದರ್ಭದಲ್ಲಿಅಯ್ಯಪ್ಪ ಅವರ ಕೊಲೆ ಮತ್ತು ನನ್ನ ಸಹೋದರನೇ ನನ್ನ ಕೊಲೆಗೆ ಸಂಚು ರೂಪಿಸಿದ್ದು ಆಘಾತಕಾರಿ,'' ಎಂದು ಮಧುಕರ್‌ ಅಂಗೂರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ