ಆ್ಯಪ್ನಗರ

ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ : ಪಿಯೂಷ್‌ ಗೋಯಲ್‌

ಒಂದು ವರ್ಷದ ಒಳಗೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ...

Vijaya Karnataka 10 May 2018, 5:00 am
ಬೆಂಗಳೂರು: ಒಂದು ವರ್ಷದ ಒಳಗೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.
Vijaya Karnataka Web piyush


ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆಯಲ್ಲಿ (ಎಫ್‌ಕೆಸಿಸಿಐ) ಬುಧವಾರ ಕೈಗಾರಿಕೋದ್ಯಮಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣ ಸೇರಿದಂತೆ ರಾಜ್ಯ ಮತ್ತು ದೇಶದ ಹಲವು ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಒದಗಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ದೇಶಾದ್ಯಂತ ಏಳು ಸಾವಿರ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುವುದು,'' ಎಂದರು.

''ಇತ್ತೀಚೆಗೆ ಕೇರಳದಲ್ಲಿ ಒಬ್ಬ ಕೂಲಿ ಕಾರ್ಮಿಕನ ಮಗ, ರೈಲ್ವೆ ನಿಲ್ದಾಣದಲ್ಲಿ ಉಚಿತ ವೈಫೈ ಸೇವೆ ಬಳಸಿಕೊಂಡು, ಅಂತರ್ಜಾಲ ತಾಣದಲ್ಲಿ ಸಾಕಷ್ಟು ಮಾಹಿತಿ ಪಡೆದು ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ರೈಲುಗಳಲ್ಲಿ ಪ್ರಯಾಣಿಸುವ ಬಹುತೇಕ ಮಂದಿ ಬಡವರು ಮತ್ತು ಮಧ್ಯಮ ವರ್ಗದವರಾಗಿದ್ದಾರೆ. ಇಂಟರ್‌ನೆಟ್‌ ಸೌಲಭ್ಯ ಎಲ್ಲಾ ವರ್ಗದ ಜನರಿಗೂ ಅಗತ್ಯವಿದೆ. ಆದ್ದರಿಂದ ಸ್ಥಳೀಯ ಉದ್ಯಮಿಗಳು ಹಾಗೂ ವ್ಯವಹಾರಸ್ಥರ ನೆರವಿನೊಂದಿಗೆ ರೈಲ್ವೆ ನಿಲ್ದಾಣಗಳಲ್ಲಿ ಬಡವರಿಗೆ, ಮಹಿಳೆಯರಿಗೆ, ರೈತರಿಗೆ ಹಾಗೂ ಕೂಲಿಕಾರ್ಮಿಕರಿಗೆ ಇಂಟರ್‌ನೆಟ್‌ ಬಳಸುವ ಬಗ್ಗೆ ತರಬೇತಿ ನೀಡಲಾಗುವುದು,'' ಎಂದು ತಿಳಿಸಿದರು.

''ಹಿಂದೆ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಂಪನ್ಮೂಲಗಳ ಕೊರತೆ ಹಾಗೂ ಭೂಮಿ ಕಲ್ಪಿಸದ ಕಾರಣ ಹಲವು ವರ್ಷಗಳ ಹಿಂದೆ ಘೋಷಿಸಿದ ಯೋಜನೆಗಳು ಈಗಲೂ ಕುಂಟುತ್ತಾ ಸಾಗಿವೆ. ಆದ್ದರಿಂದ ನಮ್ಮ ಸರಕಾರ ಹೊಸ ಯೋಜನೆಗಳನ್ನು ಘೋಷಿಸದೆ, ಚಾಲನೆಯಲ್ಲಿರುವ ಕಾಮಗಾರಿಗಳನ್ನು ವೇಗವಾಗಿ ಮುಕ್ತಾಯಗೊಳಿಸಲು ಕ್ರಮ ಕೈಗೊಂಡಿದೆ,''ಎಂದು ಗೋಯಲ್‌ ತಿಳಿಸಿದರು.

''ರೈಲು ನಿಲ್ದಾಣಗಳ ಛಾವಣಿಗೆ ಸೋಲಾರ್‌ ಪ್ಯಾನಲ್‌ ಅಳವಡಿಸುವ ಮೂಲಕ, ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಮುಂದಾಗಿದ್ದೇವೆ. ರೈಲುಗಳಲ್ಲಿನ ಆಹಾರದ ಅವ್ಯವಸ್ಥೆ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ದೂರುಗಳು ಬಂದರೆ, ಸಂಬಂಧಪಟ್ಟ ಗುತ್ತಿಗೆದಾರರನ್ನು ಬದಲಾಯಿಸಲಾಗುವುದು,'' ಎಂದರು. ರಾಜ್ಯಸಭೆ ಸದಸ್ಯ ಮಹೇಶ್‌ ಪೋದ್ದಾರ್‌, ಎಫ್‌ಕೆಸಿಸಿಐ ಅಧ್ಯಕ್ಷ ರವಿ, ಎಚ್‌.ಎ.ಸಿ.ಪ್ರಸಾದ್‌, ಪ್ರಕಾಶ್‌ ಮಂಡೋತ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ