ಆ್ಯಪ್ನಗರ

ಗೋಕರ್ಣ ದೇಗುಲ ಸೇವೆಯ ಸಾಧನ: ಶ್ರೀಮಠ ಸ್ಪಷ್ಟನೆ

ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿರುವ ಆದೇಶ ರದ್ದುಗೊಳಿಸಿರುವ ಹೈಕೋರ್ಟ್‌ ತೀರ್ಪಿನಿಂದ ಆಘಾತವಾಗಲಿ, ಹಿನ್ನೆಡೆಯಾಗಲಿ ಆಗಿಲ್ಲ.

Vijaya Karnataka 12 Aug 2018, 7:52 am
ಬೆಂಗಳೂರು: ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿರುವ ಆದೇಶ ರದ್ದುಗೊಳಿಸಿರುವ ಹೈಕೋರ್ಟ್‌ ತೀರ್ಪಿನಿಂದ ಆಘಾತವಾಗಲಿ, ಹಿನ್ನೆಡೆಯಾಗಲಿ ಆಗಿಲ್ಲ. ಮಠಕ್ಕೆ ಮಹಾಬಲೇಶ್ವರ ದೇವಾಲಯ ಸೇವೆಯ ಸಾಧನವಾಗಿದೆಯೇ ಹೊರತು ಸಂಪಾದನೆಯ ಮೂಲವಾಗಿರಲಿಲ್ಲ ಎಂದು ರಾಮಚಂದ್ರಾಪುರ ಮಠ ಸ್ಪಷ್ಟಪಡಿಸಿದೆ.
Vijaya Karnataka Web Raghaweshwara Bharati


''ಶ್ರೀಶಂಕರಾಚಾರ್ಯರ ಕಾಲದಿಂದಲೂ ಮಠ ಮತ್ತು ದೇವಾಲಯದ ನಡುವೆ ಪಾರಂಪರಿಕ ಸಂಬಂಧವಿದೆ. ಆದರೆ ಕಣ್ತಪ್ಪಿನಿಂದಾಗಿ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿತ್ತು. ಆ ತಪ್ಪನ್ನು 2008ರಲ್ಲಿ ಸರಕಾರ ಸರಿಪಡಿಸಿ ಅವ್ಯವಸ್ಥೆಯ ಆಗರವಾಗಿದ್ದ ದೇವಾಲಯವನ್ನು ಸುವ್ಯವಸ್ಥೆಯೆಡೆಗೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿತ್ತು,'' ಎಂದು ಮಠದ ಮಾಧ್ಯಮ ಕಾರ‍್ಯದರ್ಶಿ ರಾಮಚಂದ್ರ ಅಜ್ಜಕಾನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'' 2 ವರ್ಷಗಳ ಹಿಂದೆ ದೇವಾಲಯದ ವ್ಯವಸ್ಥಿತ ಆಡಳಿತ, ಸಮರ್ಥ ನಿರ್ವಹಣೆ ಹಾಗೂ ಪಾರದರ್ಶಕತೆಯನ್ನು ಪ್ರಮಾಣೀಕರಿಸುವ ಐಎಸ್‌ಒ ಪ್ರಮಾಣಪತ್ರವೂ ಲಭಿಸಿದೆ. ಹಸ್ತಾಂತರಕ್ಕೂ ಮುನ್ನ ಅಲ್ಲಿ ಲೆಕ್ಕಪತ್ರಗಳೇ ಇರಲಿಲ್ಲ.ಆದರೆ ಆನಂತರ ಪ್ರತಿ ರೂಪಾಯಿಗೂ ಲೆಕ್ಕೆ ಇಡುವ ವ್ಯವಸ್ಥೆ ತರಲಾಗಿದೆ. ಜೊತೆಗೆ ಭಕ್ತರಿಗೆ ಕುಡಿಯುವ ನೀರು, ಎರಡು ಹೊತ್ತು ಪ್ರಸಾದ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆಗೆ ಒತ್ತು ನೀಡಲಾಗಿದೆ. ದೇವಹಿತ-ಭಕ್ತಹಿತ-ಸೇವಕಹಿತ ಎಂಬ ಅಂಶಗಳ ಆಧಾರದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ,'' ಎಂದು ಅವರು ಹೇಳಿದ್ದಾರೆ.

''ಹೈಕೋರ್ಟ್‌ ನೀಡಿರುವ ಆದೇಶ ಸೆ.10 ರಿಂದ ಜಾರಿಯಾಗಲಿದೆ. ಅಲ್ಲಿಯವರೆಗೆ ದೇವಸ್ಥಾನದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಇತಿಹಾಸ ಅಲೋಕಿಸಿದಾಗ ಮಠ ಮತ್ತು ದೇವಾಲಯದ ಸಂಬಂಧ ಸ್ಪಷ್ಟವಾಗಿದೆ. ದೇವಾಲಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು,'' ಎಂದು ತಿಳಿಸಿದ್ದಾರೆ.

''ನಾವು ಗೋಕರ್ಣದ ಮಹಾಬಲೇಶ್ವರ ದೇವಾಲಯದಿಂದ ಹಣ-ಅಧಿಕಾರ-ಪ್ರತಿಷ್ಠೆ ಯಾವುದನ್ನೂ ಬಯಸದೆ, ಕೇವಲ ಸೇವೆಯ ಸಾಧನವಾಗಿ ಕಂಡಿದ್ದೇವೆ. ಪರಂಪರೆಯ ಸಂಬಂಧ ಇರುವುದರಿಂದ ದೇವಾಲಯದ ಸಂರಕ್ಷಣೆಯ ದೃಷ್ಟಿಯನ್ನಿಟ್ಟುಕೊಂಡು ಕಾನೂನಿನ ಅವಕಾಶ ಬಳಸಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸುತ್ತೇವೆ'' -ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಶ್ರೀರಾಮಚಂದ್ರಾಪುರ ಮಠ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ