ಆ್ಯಪ್ನಗರ

ಪತ್ತೆಯಾದ ಇಬ್ಬರು ಶಾಸಕರು: ಭದ್ರತೆ ನೀಡಿ ಸದನಕ್ಕೆ ಕರೆತಂದ ಡಿಐಜಿ

ನಾಪತ್ತೆಯಾಗಿದ್ದ ಕಾಂಗ್ರೆಸ್‌ ಶಾಸಕರಾದ ಪ್ರತಾಪ್‌ ಗೌಡ ಪಾಟೀಲ್‌ ಹಾಗೂ ಆನಂದ್‌ಸಿಂಗ್‌ ಗೋಲ್ಡ್‌ಫಿಂಚ್‌ ...

Vijaya Karnataka 20 May 2018, 5:00 am
ಬೆಂಗಳೂರು : ನಾಪತ್ತೆಯಾಗಿದ್ದ ಕಾಂಗ್ರೆಸ್‌ ಶಾಸಕರಾದ ಪ್ರತಾಪ್‌ ಗೌಡ ಪಾಟೀಲ್‌ ಹಾಗೂ ಆನಂದ್‌ಸಿಂಗ್‌ ಗೋಲ್ಡ್‌ಫಿಂಚ್‌ ಹೊಟೇಲ್‌ನಲ್ಲಿ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ಜತೆ ಉಳಿದುಕೊಂಡಿದ್ದಾರೆಂಬ ಮಾಹಿತಿ ಸಿಗುತ್ತಿದ್ದಂತೆ ಹೋಟೆಲ್‌ ಒಳಗೆ ಹಾಗೂ ಹೊರಗೆ ಶನಿವಾರ ಹೈಡ್ರಾಮಾ ನಡೆಯಿತು.
Vijaya Karnataka Web 1905-2-2-64


ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶ ಹಿನ್ನೆಲೆಯಲ್ಲಿ ರಾಜಕೀಯ ನಾಯಕರಿಗೆ ಅವಕಾಶ ನೀಡದ ಉನ್ನತ ಪೊಲೀಸ್‌ ಅಧಿಕಾರಿಗಳೇ ಹೋಟೆಲ್‌ಗೆ ತೆರಳಿ ಅವರ ಮನವೋಲಿಸಿ ವಿಧಾನಸಭೆಗೆ ತಮ್ಮದೇ ಕಾರಿನಲ್ಲಿ ಕರೆದೊಯ್ದರು. ವಿಧಾನಸಭೆ ಆವರಣದಲ್ಲಿ ಕಾದು ನಿಂತಿದ್ದ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರತಾಪ್‌ ಗೌಡ ಅವರನ್ನು ಕೈ ಹಿಡಿದು ಸದನಕ್ಕೆ ಕರೆದೊಯ್ದರು.

ಇದಕ್ಕೂ ಮುನ್ನ ಸಂಸದ ಡಿ.ಕೆ ಸುರೇಶ್‌ ಹಾಗೂ ಪರಿಷತ್‌ ಸದಸ್ಯ ಎಚ್‌.ಎಂ ರೇವಣ್ಣ ಅವರು ಹೋಟೆಲ್‌ಗೆ ಬಂದಿದ್ದರು. ಪ್ರತಾಪ್‌ ಗೌಡ ಹಾಗೂ ಆನಂದ್‌ ಸಿಂಗ್‌ ಭೇಟಿಗೆ ಪ್ರಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರು ಕರೆತರುತ್ತಾರೆನ್ನುವ ವಿಶ್ವಾಸವಿದೆ ಎಂದು ಹೇಳಿ ಹೊರಟರು.

ಅಷ್ಟರಲ್ಲೇ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಕೂಡಾ ಹೋಟೆಲ್‌ ಬಂದು ಪಾಟೀಲ್‌ ಇದ್ದ ಕೊಠಡಿಗೆ ತೆರಳಿದರು. ಪ್ರತಿಯೊಬ್ಬ ಶಾಸಕ ಸದನಕ್ಕೆ ಹಾಜರಾಗುವುದನ್ನು ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್‌ ಇಲಾಖೆಗೆ ಸೇರಿದ್ದು ಎಂಬ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಒಂದು ತಾಸಿನ ನಂತರ ಡಿಐಜಿ ತಮ್ಮ ಕಾರಿನಲ್ಲೇ ಪಾಟೀಲ್‌ ಅವರನ್ನು ಕೂರಿಸಿಕೊಂಡು ವಿಧಾನಸೌಧಕ್ಕೆ ತೆರಳಿದರು. ನಂತರ ತಾಜ್‌ ವೆಸ್ಟ್‌ ಎಂಡ್‌ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು ಎನ್ನಲಾದ ಆನಂದ್‌ ಸಿಂಗ್‌ ಅವರನ್ನು ಕೂಡಾ ಪೊಲೀಸರು ತಮ್ಮ ವಾಹನದಲ್ಲೇ ವಿಧಾನಸೌಧಕ್ಕೆ ಕರೆದೊಯ್ದರು.

ಸರಕಾರ ವಿಶ್ವಾಸಮತದ ರಾಜಕೀಯದಲ್ಲಿ ಬಿಜೆಪಿ ಪರ ಇದ್ದರೆನ್ನಲಾದ ಕಾಂಗ್ರೆಸ್‌ ಶಾಸಕರಾದ ಆನಂದ್‌ಸಿಂಗ್‌, ಪ್ರತಾಪ್‌ ಗೌಡ ಪಾಟೀಲ್‌ಗಾಗಿ ಕಾಂಗ್ರೆಸ್‌ ತೀವ್ರ ಶೋಧ ನಡೆಸುತ್ತಿತ್ತು. ಶನಿವಾರ ಬೆಳಗ್ಗೆ ವಿಧಾನಸಭೆಯಲ್ಲಿ ಆನಂದ್‌ಸಿಂಗ್‌ ಹಾಗೂ ಪ್ರತಾಪ್‌ಗೌಡ ಗೈರು ಹಾಜರಿಯು ಕಾಂಗ್ರೆಸ್‌ ಮುಖಂಡರಲ್ಲಿ ಆತಂಕ ಸೃಷ್ಟಿಸಿತ್ತು.

- ಸಂಪರ್ಕದಲ್ಲಿಲ್ಲ ಇರಲಿಲ್ಲ-


ವಿಧಾನಸೌಧದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ, ''ತಾಜ್‌ ವೆಸ್ಟ್‌ ಎಂಡ್‌ ಹೊಟೇಲ್‌ನಲ್ಲಿ ನನ್ನ ಸಹೋದರ ಇದ್ದ ಕಾರಣ ನಾನು ಕೂಡಾ ಅಲ್ಲೇ ಇದ್ದೆ. ಆ ಇಬ್ಬರು ಶಾಸಕರೊಂದಿಗೆ ನಾನು ಸಂಪರ್ಕದಲ್ಲಿ ಇರಲಿಲ್ಲ,'' ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ