ಆ್ಯಪ್ನಗರ

ಪ್ರವಾಹ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ನೆರವು: ಯಡಿಯೂರಪ್ಪ

ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ನೆರೆ ಸ್ಥಿತಿ ಅರಿಯಲು ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಅಗತ್ಯ ನೆರವು ಒದಗಿಸಲಾಗುವುದು ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

Vijaya Karnataka Web 21 Oct 2020, 4:09 pm
ಕಲಬುರಗಿ: ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ನೆರೆ ಸ್ಥಿತಿ ಅರಿಯಲು ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಅಗತ್ಯ ನೆರವು ಒದಗಿಸಲಾಗುವುದು ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಬುಧವಾರ ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದಾರೆ.
Vijaya Karnataka Web bs yediyurappa


ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಈ ಮೂರೂ ಜಿಲ್ಲೆಗಳ 14 ತಾಲೂಕುಗಳಲ್ಲಿ ಪ್ರವಾಹದಿಂದಾಗಿ ಸುಮಾರು 43 ಸಾವಿರ ಜನರು ತೊಂದರೆಗೆ ಒಳಗಾಗಿದ್ದಾರೆ. ನದಿ ದಂಡೆಯ 247 ಗ್ರಾಮಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ಅದರಲ್ಲೂ 117 ಗ್ರಾಮಗಳಲ್ಲಿ ಹೆಚ್ಚು ಆಸ್ತಿಪಾಸ್ತಿ ಹಾಳಾಗಿದೆ. ಹೀಗಾಗಿ ಮನೆ ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಅಗತ್ಯ ಸಹಾಯ ಒದಗಿಸಲಾಗುವುದು. ಇದುವರೆಗೆ ಒಟ್ಟು 5000 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

233 ಕಾಳಜಿ ಕೇಂದ್ರಗಳಲ್ಲಿ 38 ಸಾವಿರ ನಿರಾಶ್ರಿತರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರಗಳಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಸಹ ಒದಗಿಸಲಾಗುತ್ತಿದೆ‌. ವ್ಯಾಪಕ ಮಳೆ ಮತ್ತು ಪ್ರವಾಹದಿಂದಾಗಿ ಕಲಬುರಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಕೆಲಸವನ್ನು ಈಗಾಗಲೇ ಜಿಲ್ಲಾಡಳಿತ ಮಾಡುತ್ತಿದೆ. ಗ್ರಾಮಗಳಲ್ಲಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಸರಿಪಡಿಸುವ ಕೆಲಸ ಅತ್ಯಂತ ವೇಗವಾಗಿ ನಡೆದಿದೆ ಎಂದರು.

ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ರಾಜ್ಯದ ಇತರೆಡೆಯೂ ಮುಂದುವರೆದ ವರುಣನ ಆರ್ಭಟ!

ಮೂರ್ನಾಲ್ಕು ದಿನಗಳಲ್ಲಿ ವರದಿ ನಿರೀಕ್ಷೆ
ಜಂಟಿ ಸಮೀಕ್ಷೆಯ ಬಳಿಕವೇ ನಿಜವಾಗಿಯೂ ಎಷ್ಟು ನಷ್ಡ ಉಂಟಾಗಿದೆ ಎಂಬುದು ಗೊತ್ತಾಗಲಿದೆ. ಮುಂದಿನ ಮೂರ್ನಾಲ್ಕು ದಿನಗಳ ಬಳಿಕವೇ ಹಾನಿಯ ನೈಜ ವರದಿ ಬರಲಿದೆ. ಇದಾದ ಬಳಿಕವೇ ಹಾನಿಗೆ ಎಷ್ಟು ಪರಿಹಾರ ಘೋಷಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಸಿಎಂ ಬಿ‌ಎಸ್.ಯಡಿಯೂರಪ್ಪ ತಿಳಿಸಿದರು.

ಉ.ಕ. ನೆರೆ ಹಾವಳಿ: ಬುಧವಾರ ಸಿಎಂ ಬಿಎಸ್‌ವೈ ವೈಮಾನಿಕ ಸಮೀಕ್ಷೆ, ಆಲಮಟ್ಟಿಯಲ್ಲಿ ಮೀಟಿಂಗ್

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ್ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ