ಆ್ಯಪ್ನಗರ

ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಮೊದಲ ಬಂಧನ

ಮಹತ್ವದ ಬೆಳವಣಿಗೆಯಲ್ಲಿ ವಿಶೇಷ ತನಿಖಾ ತಂಡ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯನ್ನು ಬಂಧಿಸಿದೆ...

Vijaya Karnataka 10 Mar 2018, 5:00 am

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ವಿಶೇಷ ತನಿಖಾ ತಂಡ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯನ್ನು ಬಂಧಿಸಿದೆ. ಮದ್ದೂರಿನ ಹಿಂದೂ ಜಾಗೃತ ವೇದಿಕೆ ಮುಖಂಡ ನವೀನ್‌ಕುಮಾರ್‌ ಬಂಧಿತನಾಗಿದ್ದು , ಗೌರಿ ಹತ್ಯೆಯಲ್ಲಿ ಈತನ ಪಾತ್ರದ ಬಗ್ಗೆ ಸಂಗ್ರಹಿಸಿರುವ ಮಾಹಿತಿ ಮತ್ತು ಸಾಕ್ಷ್ಯವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿಯನ್ನು ಮತ್ತೆ ಐದು ದಿನಗಳ ಪೊಲೀಸ್‌ ಕಸ್ಟಡಿಗೆ ಪಡೆಯುವಲ್ಲಿ ಎಸ್‌ಐಟಿ ಯಶಸ್ವಿಯಾಗಿದೆ.

ನವೀನ್‌ಕುಮಾರ್‌ ಈ ಹಿಂದೆ ಸನಾತನ ಸಂಸ್ಥೆಯ ಪರವಾಗಿ ಕೆಲಸ ಮಾಡಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಮದ್ದೂರಿನಲ್ಲಿ ಸಂಘಟಿಸಿದ್ದ 'ಧರ್ಮಸಭೆ'ಯ ಪ್ರಮುಖ ಸಂಘಟಕನಾಗಿ ಕೆಲಸ ಮಾಡಿದ್ದೆ ಎನ್ನುವುದನ್ನೂ ಒಪ್ಪಿಕೊಂಡಿರುವ ನವೀನ್‌ಕುಮಾರ್‌ ಆ ಧರ್ಮಸಭೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಸಾಹಿತಿ ಭಗವಾನ್‌ ಸೇರಿ ತಮ್ಮ ಸೈದ್ಧಾಂತಿಕ ವಿರೋಧಿಗಳ ಬಗ್ಗೆ ಚರ್ಚೆ ನಡೆಸಿದ್ದ ಮಾಹಿತಿಯನ್ನೂ ಎಸ್‌ಐಟಿ ಅಧಿಕಾರಿಗಳ ಮುಂದೆ ವಿವರಿಸಿದ್ದಾಗಿ ತಿಳಿದು ಬಂದಿದೆ.

''2017ರ ಸೆ.5 ರಂದು ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ನಡೆದ ಸಂದರ್ಭದ ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ವಿವರ ಸಂಗ್ರಹಿಸಿದ್ದ ಎಸ್‌ಐಟಿ ಅಧಿಕಾರಿಗಳಿಗೆ ತನಿಖೆ ಆರಂಭಿಸಿದ ಒಂದು ತಿಂಗಳ ಒಳಗೇ ನವೀನ್‌ಕುಮಾರ್‌ ಬಗ್ಗೆ ಒಂದು ಮಹತ್ವದ ಸುಳಿವು ಸಿಕ್ಕಿತ್ತು.ಆ ನಂತರ ಈತನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು ಗೌರಿ ಹತ್ಯೆ ಸಂದರ್ಭದಲ್ಲಿ ಈತ ಬಳಸುತ್ತಿದ್ದ ಮೊಬೈಲ್‌ ಸಂಖ್ಯೆಯನ್ನು ಪತ್ತೆಹಚ್ಚಿ ಈತನ ಮೇಲೆ ನಿಗಾ ಇಡಲು ಒಬ್ಬ ಎಸಿಪಿ ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ ಒಳಗೊಂಡ ಐದು ಮಂದಿ ತಂಡಕ್ಕೆ ಜವಾಬ್ದಾರಿ ವಹಿಸಲಾಗಿತ್ತು. ಆಗಿನಿಂದಲೂ ಈ ತಂಡ ನವೀನ್‌ಕುರಿತು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿತ್ತು. ಈ ದಾಖಲೆಗಳು ಎಸ್‌ಐಟಿಯ ಉಳಿದ ತಂಡಗಳು ಸಂಗ್ರಹಿಸಿದ್ದ ಇತರೆ ದಾಖಲೆಗಳಿಗೆ ಪೂರಕವಾಗಿದ್ದ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಈತನ ಸುತ್ತಲೇ ತನಿಖೆ ಕೇಂದ್ರೀಕೃತವಾಗಿತ್ತು,'' ಎಂದು ಮೂಲಗಳು ತಿಳಿಸಿವೆ.

ಸುಳ್ಳು ಪತ್ತೆ ಪರೀಕ್ಷೆಗೆ ಮನವಿ

ಬಂಧಿತ ಆರೋಪಿಯನ್ನು 'ಸುಳ್ಳು ಪತ್ತೆ ಪರೀಕ್ಷೆ' ಗೆ ಒಳಪಡಿಸಲು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೇಳಿದ್ದಾರೆ. ಆದರೆ ನವೀನ್‌ ಪರ ವಕೀಲರು ಯಾವುದೇ ಕಾರಣಕ್ಕೂ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ''ಎಸ್‌ಐಟಿ ತನಿಖೆಯಲ್ಲಿ ಆರಂಭಿಸಿದಾಗ ತಂಡದಲ್ಲಿರುವ ಅಧಿಕಾರಿಗಳಿಗೇ ಆಶ್ಚರ್ಯವಾಗುವ ರೀತಿಯಲ್ಲಿ 'ಮರ್ಡರ್‌ ಎಂಜಿನಿಯರಿಂಗ್‌' ನಡೆದಿರುವುದು ಗೊತ್ತಾಗಿತ್ತು. ವಿಧಿ ವಿಜ್ಞಾನ ತಜ್ಞರು ಸಂಗ್ರಹಿಸುವ ಸಾಕ್ಷ್ಯಗಳ ಬಗ್ಗೆ ತರಬೇತಿ ಹೊಂದಿದ್ದವರೇ ಕೃತ್ಯದ ಹಿಂದಿದ್ದಾರೆ ಎನ್ನುವ ಅನುಮಾನವೂ ಬಂದಿತ್ತು. ಅಲ್ಲದೆ ಹತ್ಯೆಯ ಹಿಂದಿನ ಶಕ್ತಿಗಳು ಎಸ್‌ಐಟಿಯ ಪ್ರತಿ ನಡೆಯನ್ನು ಹಿಂಬಾಲಿಸುತ್ತಿರುವುದೂ ಗಮನಕ್ಕೆ ಬಂದಿತ್ತು. ಈ ಎಲ್ಲಾ ಸವಾಲು ದಾಟಿ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದೇವೆ,'' ಎಂದು ಹೆಸರು ದಾಖಲಿಸಲು ಇಚ್ಚಿಸದ ಅಧಿಕಾರಿಯೊಬ್ಬರು 'ವಿಜಯ ಕರ್ನಾಟಕ' ಕ್ಕೆ ತಿಳಿಸಿದ್ದಾರೆ.

ಆರೋಪಿ ನವೀನ್‌ನನ್ನು ಶುಕ್ರವಾರ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಎಸ್‌ಐಟಿ ಅಧಿಕಾರಿಗಳು,ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅನುಮತಿ ಕೇಳಿದ್ದಾರೆ. ಆದರೆ ಆರೋಪಿ ಪರ ವಕೀಲ ವೇದಮೂರ್ತಿ ಅವರು , 'ಆರೋಪಿಯ ಒಪ್ಪಿಗೆ ಇಲ್ಲದೆ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ'' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಈ ಕುರಿತ ತೀರ್ಪನ್ನು ಮಾ.12ಕ್ಕೆ ನಿಗದಿಗೊಳಿಸಿದೆ.

ನವೀನ್‌ಗೆ ಜಾಮೀನು

ಉಪ್ಪಾರಪೇಟೆ ಠಾಣೆಯಲ್ಲಿ ನವೀನ್‌ಕುಮಾರ್‌ ವಿರುದ್ಧ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಪ್ರಕರಣದಲ್ಲಿ 5ನೇ ಎಸಿಎಂಎಂ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಹಾಗೂ ಅಪರಾಧಿಕ ಸಂಚು ಪ್ರಕರಣ ಸೇರಿಸಿ ಈಗ ಮಂಜೂರಾಗಿರುವ ಜಾಮೀನು ರದ್ದಿಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಇಲಾಖೆ ನಿರ್ಧರಿಸಿದೆ.

ಇದುವರೆಗೂ ಎಸ್‌ಐಟಿ ತಂಡ ಸಂಗ್ರಹಿಸಿರುವ ಸಾಕ್ಷ್ಯದಲ್ಲಿ ಹತ್ಯೆಯಲ್ಲಿ ನವೀನ್‌ ಪಾತ್ರ ಇರುವುದು ದೃಢಪಟ್ಟಿದೆ. ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗ ಪಡಿಸುವುದು ಸಾಧ್ಯವಿಲ್ಲ. ಮುಂದಿನ ತನಿಖೆಗಾಗಿ ಆರೋಪಿಯನ್ನು ಐದು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

-ಅನುಚೇತ್‌, ಎಸ್‌ಐಟಿ ಮುಖ್ಯಸ್ಥರು.

ತನಿಖೆ ವಿವರಗಳು ಗಂಭೀರವಾಗಿವೆ

ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿರುವ ತನಿಖೆಯ ವಿವರಗಳು ಬಹಳ ಗಂಭೀರ ಸ್ವರೂಪದ್ದಾಗಿವೆ. ಆದ್ದರಿಂದ ಆ ವಿವರಗಳನ್ನು ತೆರೆದ ನ್ಯಾಯಾಲಯದಲ್ಲಿ ಹೇಳಲು ಸಾಧ್ಯ ಆಗುವುದಿಲ್ಲ.

ವಿಚಾರಣೆ ವೇಳೆ ನ್ಯಾಯಾಧೀಶರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ