ಆ್ಯಪ್ನಗರ

ಡಿಕೆ ಶಿವಕುಮಾರ್‌ ಸ್ವಾಗತಕ್ಕೆ ಕಾಂಗ್ರೆಸ್‌ ನಾಯಕರಿಗಿಂತ ಮುನ್ನವೇ ಬಂದಿದ್ದರು ಎಚ್‌ಡಿಕೆ

ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ 'ಪವರ್‌' ಏನೆಂದು ಎಲ್ಲರಿಗೂ ಗೊತ್ತಿದೆ. ಈಗ ಮತ್ತೊಮ್ಮೆ ಅದರ ಪ್ರದರ್ಶನವಾಗಿದೆ. ಬೆಂಗಳೂರಿಗೆ ಬಂದ ಡಿಕೆ ಶಿವಕುಮಾರ್‌ಗೆ ಸಿಕ್ಕ ಅಭೂತಪೂರ್ವ ಸ್ವಾಗತವೇ ಇದಕ್ಕೆ ಸಾಕ್ಷಿ.

Vijaya Karnataka Web 26 Oct 2019, 6:20 pm
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 50 ದಿನಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್‌ ಈಗ ಬೆಂಗಳೂರಿಗೆ ಆಗಮಿಸಿದ್ದಾರೆ.
Vijaya Karnataka Web ಡಿಕೆ-ಎಚ್‌ಡಿಕೆ
ಡಿಕೆ-ಎಚ್‌ಡಿಕೆ


ಯುದ್ಧ ಗೆದ್ದುಬಂದ ವೀರರಿಗೆ ಅಥವಾ ವಿಶ್ವಕಪ್‌ ಗೆದ್ದುಬಂದ ಆಟಗಾರರಿಗೆ ನೀಡುವುದಕ್ಕೂ ಒಂದು ಕೈ ಮೇಲೇ ಎನ್ನುವಂತೆ ಡಿಕೆ ಶಿವಕುಮಾರ್‌ಗೆ ಸ್ವಾಗತ ಕೋರಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಇಡೀ ವಿಮಾನ ನಿಲ್ದಾಣದುದ್ದಕ್ಕೂ ಡಿಕೆಶಿ ಭಾವಚಿತ್ರ, ಕಾಂಗ್ರೆಸ್‌ ಬಾವುಟಗಳೇ ರಾರಾಜಿಸುತ್ತಿದ್ದವು.

ಡಿಕೆ ಶಿವಕುಮಾರ್‌ಗೆ ಅಭೂತಪೂರ್ವ ಸ್ವಾಗತ ಕೋರಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ - ವಿರೋಧ ಚರ್ಚೆ ಕೂಡ ಜೋರಾಗಿ ಸಾಗಿದೆ.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಕೂಡ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಲಿಗೆ ಹೋಗಿ ಬಂದವರನ್ನು ಅದ್ದೂರಿಯಾಗಿ ಸ್ವಾಗತಿಸುವ ಸಮಾಜದಲ್ಲಿ ನಾವಿದ್ದೇವೆ ಎಂದು ಬೇಸರದಿಂದ ನುಡಿದಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಚರ್ಚೆ ಕೂಡ ಸಾಗಿದೆ.

ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್‌ಗೆ ಅಭಿಮಾನಿಗಳು, ಕಾರ್ಯಕರ್ತರು, ಈ ರೇಂಜಿಗೆ ಸ್ವಾಗತ ಕೋರಿದ್ದಾರೆ. ಆದರೆ ಕೃಷ್ಣ ಭೈರೇಗೌಡ ಬಿಟ್ಟರೆ ಒಬ್ಬೇ ಒಬ್ಬ ಕಾಂಗ್ರೆಸ್‌ ಹಿರಿಯ ನಾಯಕ ವಿಮಾನ ನಿಲ್ದಾಣದ ಕಡೆ ತಲೆ ಹಾಕಲಿಲ್ಲ.

ಆದರೆ ಜೋಡೆತ್ತು ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿಮಾನ ನಿಲ್ದಾಣಕ್ಕೆ ತೆರಳಿ ಡಿಕೆ ಶಿವಕುಮಾರ್‌ಗೆ ಆತ್ಮೀಯವಾಗಿ ಸ್ವಾಗತ ಕೋರಿದರು.

ಎಚ್‌ಡಿಕೆ-ಡಿಕೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಪ್ರಚಾರ ನಡೆಸಿದರು. ಕಾಂಗ್ರೆಸ್‌, ಜೆಡಿಎಸ್‌ ಸರಕಾರದಲ್ಲಿ ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ಇದ್ದವರು ಇವರಿಬ್ಬರೇ ಎನ್ನುವುದು ಜಗಜ್ಜಾಹೀರಾಗಿದೆ.

ಮಂಡ್ಯದಲ್ಲಂತೂ ಇಬ್ಬರೂ ಜೋಡೆತ್ತುಗಳಂತೆ ಇಡೀ ಜಿಲ್ಲೆ ಸುತ್ತಾಡಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಿದ್ದರು.

ಕುಮಾರಸ್ವಾಮಿಯ ಈ ನಡೆಯ ಬಗ್ಗೆಯೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕರಿಗೇ ಇಲ್ಲದ ಉಸಾಬರಿ ಎಚ್‌ಡಿಕೆಗೆ ಏಕೆ ಎಂಬ ಪ್ರಶ್ನೆಗಳ ಸುರಿಮಳೆಯಾಗಿದೆ.

ಮಾಜಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದವರು ಈ ರೀತಿ ಸ್ವಾಗತಕ್ಕೆ ಹೋಗುವ ಅಗತ್ಯವಿರಲ್ಲ. ಬೇಕಿದ್ದರೆ ನಿವಾಸಕ್ಕೆ ತೆರಳಿ ಔಪಚಾರಿಕವಾಗಿ ಮಾತನಾಡಲಿ ಆದರೆ ಈ ರೀತಿ ಸ್ವಾಗತ ಕೋರುವ ಅಗತ್ಯವಿತ್ತೇ?

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಪರ-ವಿರೋಧ, ವಾದ-ಪ್ರತಿವಾದ ಕೂಡ ನಡೆದಿದೆ. ಒಟ್ಟಾರೆಯಾಗಿ ಇದಕ್ಕೆ ಉತ್ತರ ಕೂಡ: ?

ಸಾದಹಳ್ಳಿ ಗೇಟ್‌ ಬಳಿ 500 ಕೆಜಿ ತೂಕದ ಸೇಬು ಹಾರ. ಡಿಕೆಶಿ ವಾಹನಕ್ಕೂ ಸೇಬಿನ ಹಾರ ಹಾಕಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದರು. ಕೆಲವು ಮೂಲಗಳ ಪ್ರಕಾರ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರೇ ಭಾರಿ ಮಟ್ಟದ ಸ್ವಾಗತ ಕೋರಿ ಎಂದು ಸೂಚಿಸಿದ್ದರು ಎಂಬ ಮಾಹಿತಿ ಇದೆ.

ಪ್ರತಿಪಕ್ಷ ಬಿಜೆಪಿಗೆ ಕೂಡ ಸಂದೇಶ ಮುಟ್ಟಿಸಲು ಕಾಂಗ್ರೆಸ್‌ ಈ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿತ್ತೇ ಎಂಬ ಊಹಾಪೋಹ ಕೂಡ ಕೇಳಿಬಂದಿದೆ

ಡಿಕೆ ಶಿವಕುಮಾರ್‌ ತಮ್ಮ ಬಲ ಪ್ರದರ್ಶನ ಮಾಡಲು, ಪಕ್ಷದಲ್ಲಿಯೇ ಇರುವ ತಮ್ಮ ವಿರೋಧಿ ಬಣಕ್ಕೆ ಸಂದೇಶ ಮುಟ್ಟಿಸಲು ಅದ್ದೂರಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತೇ? ಅಥವಾ ನ್ಯಾ. ಸಂತೋಷ್‌ ಹೆಗ್ಡೆ ಹೇಳಿರುವಂತೆ ಏಕ ವ್ಯಕ್ತಿ ಪೂಜೆ ಮಾಡಿಕೊಳ್ಳಲಿ ಆದರೆ ಈ ಮಟ್ಟ ಮಟ್ಟದ ಸಂಭ್ರಮ ಬೇಕಾಗಿತ್ತಾ? ಇದು ಚರ್ಚೆಗೆ ಬಿಟ್ಟ ವಿಚಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ