ಆ್ಯಪ್ನಗರ

ಅನರ್ಹತೆ: ಏಕಪಕ್ಷೀಯ ನಿರ್ಧಾರ ಕೈಕೊಂಡ ಸ್ಪೀಕರ್ ವಿರುದ್ಧ ಸುಪ್ರೀಂ ಮೊರೆ ಎಂದ ಎಚ್ ವಿಶ್ವನಾಥ್

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿದ್ದ 14 ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ.

Vijaya Karnataka Web 28 Jul 2019, 12:49 pm
ಬೆಂಗಳೂರು: ಅತೃಪ್ತ ಶಾಸಕರ ಅನರ್ಹತೆ ಕುರಿತು ಏಕಪಕ್ಷೀಯ ತೀರ್ಮಾನ ಕೈಗೊಂಡಿರುವ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟೆಲೇರುವುದಾಗಿ ಅನರ್ಹ ಶಾಸಕ ಎಚ್ ವಿಶ್ವನಾಥ್ ತಿಳಿಸಿದ್ದಾರೆ.
Vijaya Karnataka Web h v


ಮುಂಬಯಿನಿಂದ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರದ ಅತೃಪ್ತ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವಸರದ ತೀರ್ಮಾನ ಕೈಗೊಂಡಿದ್ದಾರೆ. ಸ್ಪೀಕರ್ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅತೃಪ್ತ ಶಾಸಕರೆಲ್ಲ ನಿರ್ಧರಿಸಿದ್ದೇವೆ ಎಂದವರು ಹೇಳಿದರು.

ಯಾವ ಯಾವ ಸಂದರ್ಭದಲ್ಲಿ ಏನಾಯಿತು. ಮೈತ್ರಿ ಸರಕಾರ ಹೇಗೆ ನಡೆದುಕೊಂಡಿತ್ತು ಎನ್ನುವುದನ್ನು ಜನ ಗಮನಿಸಿದ್ದಾರೆ. ನಮ್ಮ‌ ರಾಜೀನಾಮೆ ವಿಚಾರವನ್ನು ‌ಸ್ಪೀಕರ್ ಗಮನಿಸಿಲ್ಲ.‌ ಕೇವಲ ಸಿದ್ದರಾಮಯ್ಯ, ಕುಮಾರಸ್ವಾಮಿ ದೂರನ್ನು ಮಾತ್ರ ಪರಿಗಣಿಸಿದ್ದಾರೆ ಹೊರತು ದೂರುದಾರರ ಮನವಿಯನ್ನು ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ನಮ್ಮ‌ ರಾಜೀನಾಮೆ ಕುರಿತು ಯಾವ ಚರ್ಚೆಯನ್ನು ಮಾಡಿಲ್ಲ ಎಂದು ದೂರಿರುವ ವಿಶ್ವನಾಥ, ರಾಜ್ಯದಲ್ಲಿ ನಡೆಯುತ್ತಿರುವ ಸಂಸಾರ ಸರಕಾರ ನೋಡಿ ರಾಜೀನಾಮೆ ನೀಡಿದ್ದೆವು.‌ ಮೂವರು ಸಚಿವರು ರಾಜೀನಾಮೆ ನೀಡಿರುವುದು ಹುಡುಗಾಟದ‌ ವಿಷಯವಲ್ಲ ಎಂದಿದ್ದಾರೆ.

ಸರಕಾರಿ ರಜಾದಿನವನ್ನೂ ಲೆಕ್ಕಿಸದೇ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರ ಅನರ್ಹತೆ ಆದೇಶ ಹೊರಡಿಸಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧವಾಗಿದ್ದು, ಇಂತಹ ತುರ್ತ ನಿರ್ಧಾರದ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

'ನಾವೆಲ್ಲ ಕಾನೂನು ಹೋರಾಟ ಮಾಡಿ ಗೆಲ್ಲುತ್ತೇವೆ. ಕ್ಷೇತ್ರದ ಜನರಲ್ಲಿ ಕ್ಷಮೆಯಾಚಿಸುತ್ತೇವೆ. ನಾವು‌ ಹಣ ಅಧಿಕಾರಕ್ಕಾಗಿ ರಾಜೀನಾಮೆ ನೀಡಿಲ್ಲ. ಹೇಸಿಗೆ ಸರಕಾರದ ದುರಾಡಳಿತದ ವಿರುದ್ದ ‌ರಾಜೀನಾಮೆ‌ ನೀಡಿದ್ದೇವೆ. ಜನ ಇದನ್ನು ‌ಅರ್ಥ ಮಾಡಿಕೊಳ್ಳಬೇಕು ಎಂದು ಅನರ್ಹ ಶಾಸಕ ಎಚ್ ವಿಶ್ವನಾಥ್ ಮನವಿ ಮಾಡಿದ್ದಾರೆ.

ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಬಿ ಸಿ ಪಾಟೀಲ್, ಶಿವರಾಮ ಹೆಬ್ಬಾರ್, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು, ಆನಂದ್ ಸಿಂಗ್ ರೋಷನ್ ಬೇಗ್, ಮುನಿರತ್ನ, ಸುಧಾಕರ್, ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ, ಶ್ರೀಮಂತ ಪಾಟೀಲ್‌ರನ್ನು ಅನರ್ಹಗೊಳಿಸಿ ಸ್ಪೀಕರ್ ತೀರ್ಪು ಪ್ರಕಟಿಸಿದ್ದಾರೆ.

ಮೊನ್ನೆಯಷ್ಟೇ ಮೂರು ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಅವರು, ಉಳಿದ ಶಾಸಕರ ರಾಜೀನಾಮೆ ಕುರಿತು ತೀರ್ಮಾನ ಪ್ರಕಟಿಸಲಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಆರ್. ಶಂಕರ್ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ