ಆ್ಯಪ್ನಗರ

ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ ಪ್ರೀತಂಗೌಡ ನಿವಾಸದ ಮೇಲೆ ದಾಂಧಲೆ

ಹಾಸನ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸದ ಮೇಲೆ ಜೆಡಿಎಸ್‌ ಕಾರ್ಯಕರ್ತರು ದಾಳಿ ನಡೆಸಿರುವ ವಿಚಾರ ವಿಧಾನಸಭೆ- ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿ ತೀವ್ರ ಗದ್ದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಕಲಾಪ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ.

Vijaya Karnataka 14 Feb 2019, 5:00 am
ವಿಧಾನಸಭೆ : ಹಾಸನ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸದ ಮೇಲೆ ಜೆಡಿಎಸ್‌ ಕಾರ್ಯಕರ್ತರು ದಾಳಿ ನಡೆಸಿರುವ ವಿಚಾರ ವಿಧಾನಸಭೆ- ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿ ತೀವ್ರ ಗದ್ದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಕಲಾಪ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ.
Vijaya Karnataka Web 1302-2-2-0VV (51)


ವಿಧಾನಸಭೆಯಲ್ಲಿ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ವಿಚಾರ ಪ್ರಸ್ತಾಪಿಸಿದ ಆರ್‌.ಅಶೋಕ್‌ ಹಾಗೂ ಸಿ.ಟಿ.ರವಿ, ಸಿಎಂ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ವರ್ಗದವರು ಧಮ್ಕಿ ಹಾಕಿ ಆಡಳಿತ ನಡೆಸುತ್ತಿದ್ದಾರೆ. ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸಚಿವರಾದ ಕೃಷ್ಣ ಬೈರೇಗೌಡÜ ಹಾಗೂ ಡಿ.ಕೆ.ಶಿವಕುಮಾರ್‌ ತೀವ್ರ ವಿರೋಧ ವ್ಯಕ್ತಪಡಿಸಿದರು. ನಮ್ಮ ಶಾಸಕರ ಖರೀದಿ ಮಾಡುವ ಸಂಸ್ಕೃತಿಯನ್ನು ನೀವು ಪ್ರದರ್ಶನ ಮಾಡಿದ್ದೀರಿ. ನಿಮಗೆ ಈ ಬಗ್ಗೆ ಆರೋಪಿಸುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದಾಗ ಸದನ ಗದ್ದಲದ ಗೂಡಾಯಿತು. ಪ್ರೀತಂಗೌಡರನ್ನು ಚುನಾವಣೆಯಲ್ಲಿ ಎದುರಿಸುವ ಧೈರ್ಯ ಇಲ್ಲ ಎಂದು ಈ ರೀತಿ ಗೂಂಡಾಗಿರಿ ಮಾಡಿ ಸಾಯಿಸುತ್ತೀರಾ ? ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

''ಎಸ್‌ಐಟಿ ರಚನೆ ಆಗುವುದಕ್ಕೆ ಮುಂಚೆಯೇ ಪ್ರೀತಂಗೌಡರನ್ನು ಮುಗಿಸುವ ಬೆದರಿಕೆ ಹಾಕುತ್ತಿದ್ದಾರೆ. ಇನ್ನು ಎಸ್‌ಐಟಿ ರಚನೆ ಮಾಡಿದರೆ ಅದರ ಪರಿಣಾಮ ಏನಿರುತ್ತದೆ ಎಂದು ಈಗಲೇ ಊಹೆ ಮಾಡಬಹುದು. ಸರಕಾರದ ಈ ಗೂಂಡಾಗಿರಿ ವರ್ತನೆ ಖಂಡನೀಯ,'' ಎಂದು ಆರ್‌.ಅಶೋಕ್‌ ಆರೋಪಿಸಿದರು. ಆರೋಪ -ಪ್ರತ್ಯಾಪದ ಮಧ್ಯೆ ಕಲಾಪ ನಡೆಯುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದಾರೆ.

ಪರಿಷತ್ತಿನಲ್ಲೂ ಪ್ರೀತಂಗೆ ಬೆಂಬಲ

ಪ್ರೀತಂಗೌಡ ಮನೆ ಬಳಿ ಜೆಡಿಎಸ್‌ ಕಾರ‍್ಯಕರ್ತರು ದಾಂಧಲೆ ನಡೆಸಿರುವ ಪ್ರಕರಣ ಪರಿಷತ್‌ನಲ್ಲೂ ಪ್ರತಿಧ್ವನಿಸಿತು. ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ, ''ಬಿಜೆಪಿಯ ಹಾಸನ ಶಾಸಕರ ಮನೆಯ ಮೇಲೆ ದಾಳಿ ಜೆಡಿಎಸ್‌ ಕಾರ‍್ಯಕರ್ತರು ದಾಳಿ ನಡೆಸಿದ್ದಾರೆ. ಇದು ಖಂಡನೀಯ, ಗೂಂಡಾಗಿರಿಯ ಪರಮಾವಧಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು,''ಎಂದು ಆಗ್ರಹಿಸಿದರು.

ಆಗ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಗದ್ದಲ ಆರಂಭವಾಯಿತು, ಜೆಡಿಎಸ್‌ ಸದಸ್ಯರು ಇದರಲ್ಲಿ ಜೆಡಿಎಸ್‌ ಪಾತ್ರವೇನೂ ಇಲ್ಲವೆಂದರು. ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ, ನೋಟಿಸ್‌ ನೀಡದೆ ಚರ್ಚೆಗೆ ಅವಕಾಶ ನೀಡಲಾಗದು, ನೋಟಿಸ್‌ ನೀಡಿದರೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪ್ರತಿಪಕ್ಷಗಳ ಸದಸ್ಯರಿಗೆ ಹೇಳಿದರು. ಬಿಜೆಪಿ ಜಗ್ಗದೆ ಚರ್ಚೆಗೆ ಪಟ್ಟು ಹಿಡಿದು, ಬಾವಿಗಿಳಿದು ಧರಣಿ ನಡೆಸಿದರು. ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸದನವನ್ನು ಅರ್ಧ ಗಂಟೆಗಳ ಕಾಲ ಮುಂದೂಡಲಾಗಿತ್ತು.

ನಂತರ ಮತ್ತೆ ಸದನ ಸಮಾವೇಶಗೊಂಡಾಗ, ಬಾವಿಯಲ್ಲಿದ್ದ ಬಿಜೆಪಿ ಧರಣಿ ಮುಂದುವರಿಸಿದರು. ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹಾಸನ ಜಿಲ್ಲೆ ಗೂಂಡಾ ರಾಜ್ಯವಾಗಿದೆ. ಜನಪ್ರತಿನಿಧಿಗೆ ಇಂತಹ ಸ್ಥಿತಿ ಬಂದರೆ ಹೇಗೆ ? ಶಾಸಕರ ಮನೆಗೆ ಗೂಂಡಾಗಳು ನುಗ್ಗಿ ದಾಂದಲೆ ಮಾಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಚರ್ಚೆಗೆ ಅವಕಾಶ ನೀಡಲೇಬೇಕು,'' ಎಂದು ಆಗ್ರಹಿಸಿದರು. ಧರಣಿ ಮುಂದುವರಿದಿತ್ತು, ಅದರ ನಡುವೆಯೇ ಸಭಾಪತಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಅಂಗೀಕರಿಸಿದರು. ನಂತರ ಸದನದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.


ಪ್ರೀತಂಗೌಡ ಮನೆ ಮೇಲೆ ದಾಳಿಯಾಗಿದೆ. ದುಷ್ಕರ್ಮಿಗಳು ಅವರ ತಾಯಿಯನ್ನು ಎಳೆದಾಡಿದ್ದಾರೆ. ಒಬ್ಬ ವ್ಯಕ್ತಿಯ ಮೇಲೆ ಗಂಭೀರ ದಾಳಿ ನಡೆಸಲಾಗಿದೆ. ಸಿಎಂ ಕುಮಾರಸ್ವಾಮಿ ಪ್ರೇರಣೆಯಿಂದಲೇ ಈ ಘಟನೆ ನಡೆದಿದೆ. ಸದನ ಈ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತದೆಯೇ ?

-ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷ ನಾಯಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ