ಆ್ಯಪ್ನಗರ

ಆಡಳಿತದತ್ತ ಹರಿದ ಸಿಎಂ ಚಿತ್ತ

ಸಿಎಂ ಚರ್ಚೆಯ ಅಂಶಗಳು -ಆಯಕಟ್ಟಿನ ಹುದ್ದೆಗಳಲ್ಲಿದ್ದವರ ಬದಲಾವಣೆ ಚರ್ಚೆ -ಆಡಳಿತದಲ್ಲಿನ ಕ್ರಿಯಾಶೀಲತೆ ಕ್ಷೀಣಕ್ಕೆ ಬೇಸರ -ಕಾರ‍್ಯಕ್ರಮಗಳ ವಿಳಂಬ ಲೋಪ ಪತ್ತೆಗೆ ಸೂಚನೆ ...

Vijaya Karnataka 2 Jun 2019, 5:00 am
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ನಂತರದ ರಾಜಕೀಯ ಜಂಜಾಟದ ಅಬ್ಬರ ಸ್ವಲ್ಪ ತಗ್ಗಿದ ಹಿನ್ನೆಲೆಯಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಡಳಿತದತ್ತ ಗಮನ ಹರಿಸಿದ್ದು, ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಶನಿವಾರ ಪರಿಶೀಲನಾ ಸಭೆ ನಡೆಸಿದರು.
Vijaya Karnataka Web F7472505-E689-477B-93B6-6C14850344EC


ಬರ ನಿರ್ವಹಣೆ, ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಸಂಬಂಧ ಜಿಲ್ಲಾಡಳಿತಗಳನ್ನು ಚುರುಕುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆ ಕರೆಯಲು ಸಿಎಂ ನಿರ್ಧರಿಸಿದ್ದಾರೆ.

ಗಣ್ಯರು ಮತ್ತು ಸಾರ್ವಜನಿಕರ ಭೇಟಿ ತಪ್ಪಿಸಿಕೊಳ್ಳಲು ಕೆಎಸ್‌ಎಫ್‌ಸಿ ಕಚೇರಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರನ್ನು ಕರೆಸಿಕೊಂಡು ಸಿಎಂ ಚರ್ಚೆ ನಡೆಸಿದರು. ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ವರ್ಷ ತುಂಬಿದರೂ ಆಡಳಿತ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆ ಕಾಣುತ್ತಿಲ್ಲ. ರಾಜಕೀಯ ಅನಿಶ್ಚಿತತೆಯಿಂದಾಗಿ ನೌಕರಶಾಹಿ ನಿರ್ಲಿಪ್ತವಾಗಿ ಉಳಿದಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಆಡಳಿತ ಚುರುಕುಗೊಳಿಸುವ ಕುರಿತು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಿಎಂ ಸಮಾಲೋಚನೆ ನಡೆಸಿದರು. ಅದಕ್ಕಾಗಿ ಆಯಕಟ್ಟಿನ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡುವ ಕುರಿತಂತೆ ಚರ್ಚಿಸಿದರು ಎನ್ನಲಾಗಿದೆ.

ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ಅಥವಾ ಲೋಪವಾಗಿದ್ದರೆ ತಕ್ಷಣ ಕಾರಣಗಳನ್ನು ಪತ್ತೆ ಮಾಡಿ ಸಮಸ್ಯೆ ನಿವಾರಿಸಬೇಕು. ಆಗಿಂದಾಗ್ಗೆ ಪ್ರಗತಿ ಪರಿಶೀಲನೆ ನಡೆಸಬೇಕು. ಶಿಕ್ಷ ಣ,ಆರೋಗ್ಯ ಹಾಗೂ ವಸತಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವಂತೆ ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಆಂಗ್ಲ ಮಾಧ್ಯಮ ಸರಕಾರಿ ಶಾಲೆಗಳ ಆರಂಭ ಕುರಿತಂತೆ ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದರು.

ಸಿಎಂ ಚರ್ಚೆಯ ಅಂಶಗಳು

-ಆಯಕಟ್ಟಿನ ಹುದ್ದೆಗಳಲ್ಲಿದ್ದವರ ಬದಲಾವಣೆ ಚರ್ಚೆ

-ಆಡಳಿತದಲ್ಲಿನ ಕ್ರಿಯಾಶೀಲತೆ ಕ್ಷೀಣಕ್ಕೆ ಬೇಸರ

-ಕಾರ‍್ಯಕ್ರಮಗಳ ವಿಳಂಬ ಲೋಪ ಪತ್ತೆಗೆ ಸೂಚನೆ

ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಉತ್ತಮಗೊಳಿಸಲು ಕ್ರಮ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ