ಆ್ಯಪ್ನಗರ

ಎಚ್‌ಡಿಕೆಗೆ ಬಂಧನದ ಭೀತಿ

ಐಎಎಸ್‌ ಅಧಿಕಾರಿ ಗಂಗಾರಾಂ ಬಡೇರಿಯಾರ ಅವರನ್ನು ಎಸ್‌ಐಟಿ ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಂತೆ, ಎಚ್‌.ಡಿ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವಿಕ ಸುದ್ದಿಲೋಕ 17 May 2017, 11:29 am

ಬೆಂಗಳೂರು: ಜಂತಕಲ್‌ ಮೈನಿಂಗ್‌ ಕಂಪನಿಯಿಂದ 10 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಹಿರಿಯ ಐಎಎಸ್‌ ಅಧಿಕಾರಿ ಗಂಗಾರಾಂ ಬಡೇರಿಯಾರ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಂತೆ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಜಂತಕಲ್‌ ಮೈನಿಂಗ್‌ ಕಂಪನಿಯಿಂದ ಅದಿರು ಸಾಗಣೆಗೆ ಅನುಮತಿ ನೀಡುವಂತೆ ಅಂದಿನ ಸಿಎಂ ಕುಮಾರಸ್ವಾಮಿ ಒತ್ತಡ ಹೇರಿದ್ದರು ಎಂದು ಗಂಗಾರಾಂ ಬಡೇರಿಯಾ ಆರೋಪ ಮಾಡಿದ್ದರು. ಅದೇ ಕಾರಣಕ್ಕೆ ವಿಚಾರಣೆಗೆ ಹಾಜರಾಗಲು ಎಚ್‌ಡಿಕೆ ಅವರಿಗೂ ಶೀಘ್ರದಲ್ಲೇ ಎಸ್‌ಐಟಿ ನೋಟಿಸ್‌ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು 53ನೇ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಅರ್ಜಿ ವಿಚಾರಣೆಗೆ ಬರಲಿದೆ ಎಂದು ತಿಳಿದು ಬಂದಿದೆ.

ನನಗೆ ಸಂಕಷ್ಟವಿಲ್ಲ
Vijaya Karnataka Web hdk asked bail in janthakal mine scam on gangaram baderiya case
ಎಚ್‌ಡಿಕೆಗೆ ಬಂಧನದ ಭೀತಿ


ಎಸ್‌ಐಟಿ ಅಧಿಕಾರಿಗಳು ಹಿರಿಯ ಐಎಎಸ್‌ ಅಧಿಕಾರಿ ಗಂಗಾರಾಮ್‌ ಬಡೇರಿಯಾ ಅವರನ್ನು ಬಂಧಿಸಿರುವುದರಿಂದ ನನಗೆ ಸಂಕಷ್ಟ ಎದುರಾಗಿದೆ ಎಂಬ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಅಧಿಕಾರಾವಧಿಯಲ್ಲಿ ಕಾನೂನುಬಾಹಿರ ಕಾರ್ಯಕ್ಕೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಹೀಗಾಗಿ ಸಂಕಟವೂ ಇಲ್ಲ, ಸಂಕಷ್ಟವೂ ಇಲ್ಲ. ನನ್ನನ್ನು ಹೆದರಿಸಲು ರಾಜ್ಯ ಸರಕಾರ ಕುತಂತ್ರ ನಡೆಸುತ್ತಿದೆ. ನಾವು ತಪ್ಪೆಸಗಿಲ್ಲ ಎಂದ ಮೇಲೆ ಹೆದರುವ ಮಾತೇ ಇಲ್ಲ. ಹಾಲಿ ಸರಕಾರದ ಎಲ್ಲ ಕಾರ್ಯ ಚಟುವಟಿಕೆಗಳ ಬಗ್ಗೆ ನನಗೆ ಮಾಹಿತಿಯಿದೆ. ಸೂಕ್ತ ಸಮಯದಲ್ಲಿ ಅಕ್ರಮಗಳ ದಾಖಲೆ ಬಿಡುಗಡೆಗೊಳಿಸುವೆ,'' ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ