ಆ್ಯಪ್ನಗರ

ಪದ್ಮಾಗೆ ಹಿಮಾಚಲ ಸಿಎಂ ಬೀಳ್ಕೊಡುಗೆ: ವಿಕ ಪ್ರಯತ್ನಕ್ಕೆ ಶ್ಲಾಘನೆ

ಹಿಮಾಚಲ ಮುಖ್ಯಮಂತ್ರಿ ಮತ್ತು ಅವರ ಪತ್ನಿ ಸಾಧನಾ ಅವರಿಂದ ಶುಭ ಹಾರೈಕೆ

Vijaya Karnataka Web 1 Aug 2018, 7:10 pm
ಮೈಸೂರು: ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಜ್ಞಾತವಾಸದಲ್ಲಿದ್ದ ಪಿರಿಯಾಪಟ್ಟಣ ಮೂಲದ ಪದ್ಮಾ ಅಲಿಯಾಸ್ ಸರಸ್ವತಿ ಅವರ ಪ್ರಕರಣ ಸುಖಾಂತ್ಯ ಕಂಡಿದ್ದು, ಅವರನ್ನು ಖುದ್ದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಂ ಠಾಕೂರ್ ಮತ್ತವರ ಕನ್ನಡತಿ ಪತ್ನಿ ಸಾಧನಾ ಠಾಕೂರ್ ಅವರೇ ಖುದ್ದು ಬೀಳ್ಕೊಟ್ಟಿದ್ದಾರೆ.
Vijaya Karnataka Web ಪದ್ಮಾಗೆ ಬೀಳ್ಕೊಡುಗೆ
ಪದ್ಮಾಗೆ ಬೀಳ್ಕೊಡುಗೆ


ಬುಧವಾರ ತಮ್ಮ ನಿವಾಸದಲ್ಲಿ ಪದ್ಮಾರನ್ನು ಭೇಟಿ ಮಾಡಿದ ಠಾಕೂರ್, ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಶಾಲು ಹೊದಿಸಿ, ಟೋಪಿ ತೊಡಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಠಾಕೂರ್ ಅವರ ಪತ್ನಿ ಬೆಂಗಳೂರಿನ ಚಾಮರಾಜಪೇಟೆ ಮೂಲದ ಸಾಧನಾ ಠಾಕೂರ್ ಅವರು ಪದ್ಮಾ ಹಾಗೂ ಅವರನ್ನು ಕರೆದೊಯ್ಯಲು ಮೈಸೂರಿನಿಂದ ಬಂದಿದ್ದ ತಂಡವನ್ನು ಕನ್ನಡದಲ್ಲೇ ಮಾತನಾಡಿಸಿ ಶುಭ ಹಾರೈಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಠಾಕೂರ್, ವಿಷಯ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ತಂಡವೊಂದನ್ನು ರಚಿಸಿ ಶಿಮ್ಲಾಗೆ ಕಳುಹಿಸಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರಾಜ್ಯ ಸರಕಾರ, ಇದಕ್ಕೆ ಕಾರಣೀಭೂತವಾದ ವಿಜಯ ಕರ್ನಾಟಕ ಪತ್ರಿಕೆ ಹಾಗೂ ಮೈಸೂರು ಜಿಲ್ಲಾಡಳಿತದ ಕರ್ತವ್ಯ ಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘‘ಇದು ಒಂದು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಕರಣವಾಗಿದೆ. ಕರ್ನಾಟಕದಿಂದ ಬಂದ ಪದ್ಮಾ ಅವರು ಭಾಷೆ ಗೊತ್ತಿಲ್ಲದೆ ಎರಡು ವರ್ಷಗಳಿಂದ ಇಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅವರ ತವರಿನಲ್ಲಿ ಪದ್ಮಾಗೆ ಒಳ್ಳೆಯ ನೆಲೆ ಸಿಗಲಿ,’’ ಎಂದು ಮುಖ್ಯಮಂತ್ರಿ ಹಾರೈಸಿದರು.

ಪತಿಯಿಂದ ಪರಿತ್ಯಕ್ತಳಾದ ಪಿರಿಯಾಪಟ್ಟಣದ ಮಾಕನಹಳ್ಳಿ ಪಾಳ್ಯದ ಪದ್ಮಾ ಅವರು ಚನ್ನರಾಯಪಟ್ಟಣದ ರೈಲು ಹತ್ತಿ ತನ್ನ ಪತಿಯನ್ನು ಭೇಟಿಯಾಗಲು ಹೊರಟರು. ಹೀಗೆ ಹೋದ ಪದ್ಮಾ ಶಿಮ್ಲಾ ಹೇಗೆ ತಲುಪಿದರು ಎಂಬುದು ಖುದ್ದು ಅವರಿಗೇ ಗೊತ್ತಿರಲಿಲ್ಲ. ಕ

ಕಳೆದ ಎರಡು ವರ್ಷಗಳಿಂದ ಆಕೆ ಶಿಮ್ಲಾದ ಆಸ್ಪತ್ರೆಯಲ್ಲಿರುವುದಾಗಿ ಟ್ವಿಟರ್‌ನಲ್ಲಿ ಕಂಡುಬಂದ ಮಾಹಿತಿಯೊಂದನ್ನು ಬೆನ್ನುಹತ್ತಿದ ವಿಕ, ಈ ಕುರಿತು ಸಮಗ್ರ ವರದಿ ಪ್ರಕಟಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮೈಸೂರು ಮಾನಸಿಕ ಆರೋಗ್ಯ ಇಲಾಖೆ, ಶಿಮ್ಲಾ ಆಸ್ಪತ್ರೆ ವೈದ್ಯ ಸಂಜಯ್ ಪಾಠಕ್ ಹಾಗೂ ಅಲ್ಲಿನ ಸಾಮಾಜಿಕ ಹೋರಾಟಗಾರ್ತಿ ಸುನೀಲ ಶರ್ಮಾ ಅವರ ನಡುವೆ ನಂಟು ಬೆಸೆಯುವಲ್ಲಿ ಸೂತ್ರಧಾರಿಯಾಗಿ ಕಾರ್ಯ ನಿರ್ವಹಿಸಿತು.

ಈ ವಿಷಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೂ ತಲುಪಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಸೂಚನೆ ನೀಡಿದ್ದರು.
ಇದರ ಪರಿಣಾಮವಾಗಿ ಕೇವಲ ಹದಿನೈದು ದಿನಗಳಲ್ಲಿ ಸಿದ್ಧವಾದ ಮೈಸೂರಿನ ಮಾನಸಿಕ ಆರೋಗ್ಯ ಯೋಜನಾಧಿಕಾರಿ ಮಂಜುಪ್ರಸಾದ್ ನೇತೃತ್ವದ ತಂಡವೊಂದು ಶಿಮ್ಲಾ ತಲುಪಿ ಆಕೆಯನ್ನು ತವರಿಗೆ ವಾಪಸ್ ಕರೆತರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ