ಆ್ಯಪ್ನಗರ

ಸಿಡಿದೆದ್ದ ಹೈಕ ಶಾಸಕರು ಇಂದು ಸಿಎಂ ಜತೆ ಸಭೆ

ಹೈದರಾಬಾದ್‌ ಕರ್ನಾಟಕ ...

Vijaya Karnataka 12 Dec 2018, 5:00 am
ಸುವರ್ಣಸೌಧ : ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಜೆಟ್‌ ಘೋಷಣೆಯ ಹಣ ಬಿಡುಗಡೆಗೂ ಹಣಕಾಸು ಇಲಾಖೆ ಕೊಕ್ಕೆ ಹಾಕಿರುವುದು ಈ ಭಾಗದ ಶಾಸಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸುಮಾರು 500 ಕೋಟಿ ರೂ.ನ್ನು ಸರಕಾರ ಬಾಕಿ ಉಳಿಸಿಕೊಂಡಿದೆ.
Vijaya Karnataka Web 5905A30C-9238-439B-A363-88EC5B85D18D


2017-18ನೇ ಸಾಲಿನ ಬಜೆಟ್‌ನಲ್ಲಿ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಗೆ ರಾಜ್ಯ ಸರಕಾರ 1500 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿ ಮಾಡಿದ ಹಣವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿಲ್ಲ ಎಂಬ ಕಾರಣ ನೀಡಿ 500 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆ ತಡೆ ನೀಡಿದ್ದು, 1000 ಕೋಟಿ ರೂ.ನ್ನು ಮಾತ್ರ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಬೀದರ್‌, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಗುಲ್ಬರ್ಗ ಜಿಲ್ಲೆಯ ಶಾಸಕರು ಪಕ್ಷ ಭೇದ ಮರೆತು ಒಂದಾಗಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಜತೆಗೆ ಒಂದೇ ದಿನ ಮೂರು ಶಾಸಕರು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಸಂಜೆ ಹೈದರಾಬಾದ್‌ ಕರ್ನಾಟಕ ಭಾಗದ ಶಾಸಕರ ಸಭೆ ಕರೆದಿದ್ದು, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸಲಿದ್ದಾರೆ.

ವಿಕ ಸುದ್ದಿಲೋಕ ಸುವರ್ಣಸೌಧ
ರಾಜ್ಯವನ್ನು ಕಾಡುವ ತೀವ್ರ ಬರಗಾಲ ಪರಿಸ್ಥಿತಿ ಕುರಿತು ಪ್ರಶ್ನೋತ್ತರ ಅವಧಿಗಿಂತ ಮೊದಲೇ ಬರಗಾಲ ಕುರಿತಾಗಿ ಚರ್ಚಿಸಲು ನಿಯಮ 59ರಡಿ ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಲು ಅನುಮತಿ ಕೊಡಬೇಕೆಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸಪೂಜಾರಿ ಪಟ್ಟುಹಿಡಿದಾಗ ಆಡಳಿತ-ಪ್ರತಿಪಕ್ಷ ದ ಹಗ್ಗಜಗ್ಗಾಟಕ್ಕೆ ವಿಧಾನ ಪರಿಷತ್‌ ಸಾಕ್ಷಿಯಾಯಿತು.

ಸದನ ಆರಂಭವಾಗುತ್ತಿದ್ದಂತೆ ವಿಷಯ ಮಂಡನೆಗೆ ಅನುಮತಿ ಕೊಡಬೇಕೆಂದು ಪಟ್ಟು ಹಿಡಿದಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರದ ನಂತರ ಅವಕಾಶ ನೀಡಲಾಗುವುದು. ಇದು ಸದನದ ಸಂಪ್ರದಾಯ ಹಾಗೂ ನಿಯಮಾವಳಿ ಎಂದು ಪ್ರತಿಪಾದಿಸಿದರು. ಆದರೆ ಇದಕ್ಕೆ ಒಪ್ಪದ ಪೂಜಾರಿ ಅವರು ಇದು ಬಹಳ ಗಂಭೀರ ವಿಷಯ, ತುರ್ತಾಗಿ ಚರ್ಚೆ ನಡೆಸುವ ಅಗತ್ಯವಿದೆ ಎಂದು ತಮ್ಮ ನಿಲುವು ಪುನರುಚ್ಚರಿಸಿದರು. ಆದರೆ ಇದಕ್ಕೆ ಸಭಾಪತಿ ಅವರು ಸುತಾರಂ ಒಪ್ಪಲಿಲ್ಲ.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಎರಡು ವರ್ಷದ ಹಿಂದೆ ನಿಯಮದ ಹೊರತಾಗಿ ಸಂಪ್ರದಾಯ ನಡೆದುಕೊಂಡು ಬಂದಿದೆ, ನಮ್ಮಂತರು ನಿಯಮ ಉಲ್ಲಂಘನೆ ಮಾಡಿದ್ದೇವೆ, ಆದರೆ ನಿಯಮ 59ರ ಪ್ರಕಾರ ಒಪ್ಪಿಗೆ ಕೊಡುವ ವಿಷಯ ಸಭಾಪತಿಗೆ ಬಿಟ್ಟಿದ್ದು, ಚರ್ಚಿಸಲು ಯೋಗ್ಯವಾದ ವಿಷಯ ಎಂದು ಮನವರಿಕೆ ಮಾಡಿಕೊಟ್ಟರೆ ಅನುಮತಿ ನೀಡಬಹುದು ಎಂದರು. ಬಿಜೆಪಿಯವರಿಗೆ ವಿಷಯ ಗಂಭೀರಕ್ಕಿಂತ ತಾವು ಹೇಳಿದ್ದು ಆಗಬೇಕೆಂಬಂತಿದೆ ಎಂದರು. ಆದರೂ ಪೂಜಾರಿ ಅವರು ಪಟ್ಟು ಹಿಡಿದಾಗ ಪೀಠದ ವಿರುದ್ಧ ಪದೇ ಪದೇ ಮಾತನಾಡುವುದು ಸರಿಯಲ್ಲ, ಸಮಯ ವ್ಯರ್ಥ ಮಾಡಬೇಡಿ ಎಂದು ಸಭಾಪತಿಗಳು ಗರಂ ಆದರು. ಈ ಹಂತದಲ್ಲಿ ಸಭಾಪತಿ ಹಾಗೂ ಪೂಜಾರಿ ನಡುವೆ ಮಾತಿನ ಸಮರ ನಡೆದು ಅಂತಿಮವಾಗಿ ಸರಕಾರ ಪ್ರತಿಪಕ್ಷ ದ ಹಕ್ಕು ಮೊಟಕುಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕುಳಿತುಕೊಂಡಾಗ ಸಭಾಪತಿಯವರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ