ಆ್ಯಪ್ನಗರ

ಶ್ರುತಿ ಪ್ರಕರಣಕ್ಕೂ ಮೊದಲೇ ಫೈರ್‌ ತ್ಯಜಿಸಿದ್ದೆ: ಪ್ರಿಯಾಂಕಾ ಉಪೇಂದ್ರ

ಶ್ರುತಿ ಪ್ರಕರಣದ ಬಗ್ಗೆ ಫೈರ್‌ ಸಮಿತಿಯಲ್ಲಿದ್ದೂ ಯಾಕೆ ಮಾತನಾಡುತ್ತಿಲ್ಲ ಎಂದು ಅನೇಕರು ಪ್ರಶ್ನಿಸಿದ್ದರಿಂದ ಈಗ ನನ್ನ ರಾಜೀನಾಮೆ ಬಗ್ಗೆ ಹೇಳುತ್ತಿದ್ದೇನೆ.

Vijaya Karnataka 27 Oct 2018, 8:47 am
ಬೆಂಗಳೂರು: ನಟಿ ಶ್ರುತಿ ಹರಿಹರನ್‌ ಪ್ರಕರಣಕ್ಕೂ ಮೊದಲೇ 'ಫೈರ್‌' ಸಮಿತಿಯ ಅಧ್ಯಕ್ಷ ಸ್ಥಾನ ತ್ಯಜಿಸಿದ್ದೆ ಎಂದು ನಟಿ ಪ್ರಿಯಾಂಕಾ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.
Vijaya Karnataka Web priyanka upendra


ವಿಜಯ ಕರ್ನಾಟಕ ಕಚೇರಿಯಲ್ಲಿ ಶುಕ್ರವಾರ ವಿಕ ದೀಪಾವಳಿ ವಿಷೇಶಾಂಕ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ಅಧ್ಯಕ್ಷೆಯ ಸ್ಥಾನ ಬಿಟ್ಟ ನಂತರ ಸದಸ್ಯೆಯಾಗಿ ಮುಂದುವರಿಯಲು ಇಚ್ಛಿಸಿದ್ದೆ ಎಂದೂ ತಿಳಿಸಿದರು.

''ಕೆಲ ತಿಂಗಳ ಹಿಂದೆಯೇ ಫೈರ್‌ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಇಚ್ಛಿಸುತ್ತಿಲ್ಲ ಎಂಬುದನ್ನು ಚೇತನ್‌, ಕವಿತಾ ಲಂಕೇಶ್‌ಗೆ ತಿಳಿಸಿದ್ದೆ. ಅಧ್ಯಕ್ಷೆಯ ಜವಾಬ್ದಾರಿಯನ್ನು ಕವಿತಾಗೆ ಹಸ್ತಾಂತರಿಸಿದ್ದೆ. ಆಗ ಈ ವೇದಿಕೆ ಲಾಂಚ್‌ ಆಗಿರಲಿಲ್ಲ. ಮೊದಲೇ ಹೇಳಿದರೆ ಫೈರ್‌ ಬಗ್ಗೆ ಜನರಿಗೆ ನಂಬಿಕೆ ಹೋಗುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಕಟಿಸಿರಲಿಲ್ಲ. ಶ್ರುತಿ ಪ್ರಕರಣದ ಬಗ್ಗೆ ಫೈರ್‌ ಸಮಿತಿಯಲ್ಲಿದ್ದೂ ಯಾಕೆ ಮಾತನಾಡುತ್ತಿಲ್ಲ ಎಂದು ಅನೇಕರು ಪ್ರಶ್ನಿಸಿದ್ದರಿಂದ ಈಗ ನನ್ನ ರಾಜೀನಾಮೆ ಬಗ್ಗೆ ಹೇಳುತ್ತಿದ್ದೇನೆ. ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿಲ್ಲ,'' ಎಂದರು ಪ್ರಿಯಾಂಕಾ.

''ಫೈರ್‌ ಸಮಿತಿ ಅನುಸರಿಸುತ್ತಿರುವ ವಿಧಾನದ ಬಗ್ಗೆ ನನಗೆ ಸಹಮತ ಇರಲಿಲ್ಲ. ಕೆಲ ವಿಷಯಗಳನ್ನು ನಿರ್ವಹಿಸುವ ಬಗ್ಗೆ ನನ್ನ ತಕರಾರು ಇತ್ತು. ನಾನು ಯೋಚಿಸುವ ರೀತಿಯೇ ಬೇರೆ. ಹಾಗಾಗಿ ದೂರ ಇರಲು ಬಹಳ ಹಿಂದೆಯೇ ನಿರ್ಧರಿಸಿದ್ದೆ. ಹಾಗಂತ ನಮ್ಮ ನಡುವೆ ಜಗಳ, ಭಿನ್ನಾಭಿಪ್ರಾಯ ಬಂದು ದೂರ ಆಗ್ತಿದ್ದೀನಿ ಅಂದುಕೊಳ್ಳಬೇಕಿಲ್ಲ. ಫೈರ್‌ ಸಮಿತಿಯ ಉದ್ದೇಶದ ಬಗ್ಗೆ ನನಗೆ ಭಿನ್ನಾಭಿಪ್ರಾಯವಿಲ್ಲ. ಇಂಥದ್ದೊಂದು ವೇದಿಕೆ ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಅತ್ಯಗತ್ಯವಾಗಿ ಬೇಕಿದೆ. ಹೊರಗೆ ಇದ್ದೂ ನಾನು ಈ ಉದ್ದೇಶಕ್ಕೆ ಖಂಡಿತ ಬೆಂಬಲ ನೀಡುತ್ತೇನೆ,'' ಎಂದು ಅವರು ಹೇಳಿದರು.

''ಮಿ ಟೂ ಅಭಿಯಾನ ಬಹಳ ಗಂಭೀರವಾದದ್ದು. ಇದನ್ನು ಚೀಪ್‌ ಆಗಿ ಪ್ರೊಜೆಕ್ಟ್ ಮಾಡಬಾರದು. ಹೆಣ್ಣುಮಕ್ಕಳಿಗೆ ಸಹಾಯವಾಗುತ್ತದೆ. ಹಗುರವಾಗಿ ಮಾತನಾಡುವುದರಿಂದ ಈ ಚಳವಳಿ ಹಾಳಾಗಿ ಹೋಗುತ್ತೆ. ತುಂಬಾ ಹೆಣ್ಣು ಮಕ್ಕಳಿಗೆ ಮಾತನಾಡಲು ಇದು ಶಕ್ತಿ ನೀಡಬೇಕು,'' ಎಂದು ಅವರು ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಹರಿಹರನ್‌ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದರ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದರು. ''ಇಂಥ ಸಂದರ್ಭಗಳಲ್ಲಿ ನಿಜ ಗೊತ್ತಾಗುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಒಬ್ಬ ಹೆಣ್ಣು ಮಗಳ ಬಗ್ಗೆ ಕೀಳಾಗಿ ಕಾಮೆಂಟ್‌ ಮಾಡಬೇಡಿ,'' ಎಂದು ಅವರು ಮನವಿ ಮಾಡಿದರು.

ಮೀ ಟೂ ನಟಿಯರಿಗೆ ಹರ್ಷಿಕಾ ತರಾಟೆ

ಬೆಂಗಳೂರು: ಅರ್ಜುನ್‌ ಸರ್ಜಾ ಮತ್ತು ಶ್ರುತಿ ಹರಿಹರನ್‌ ನಡುವಿನ ಮೀ ಟೂ ಪ್ರಕರಣ ಕೋರ್ಟ್‌ ಮೆಟ್ಟಿಲು ಏರಿದ ನಂತರವೂ ಸ್ಯಾಂಡಲ್‌ವುಡ್‌ನಲ್ಲಿ ಬೆಳವಣಿಗೆಗಳು ನಿಂತಿಲ್ಲ. ಮೀ ಟೂ ಆರೋಪ ಮಾಡುತ್ತಿರುವ ನಟಿಯರ ಸಾಚಾತನವನ್ನು ಈ ಹಿಂದೆ ಪ್ರಶ್ನೆ ಮಾಡಿದ್ದು ಹರ್ಷಿಕಾ ಪೂಣಚ್ಚ ಮತ್ತೆ ಆ ನಟಿಯರ ಬಗ್ಗೆ ಗುಡುಗಿದ್ದಾರೆ.

''ಮೀ ಟೂ ಆಂದೋಲನ ನೊಂದ ಮಹಿಳೆಯರಿಗೆ ಒಂದು ಉತ್ತಮ ವೇದಿಕೆ. ಕೆಲ ನಟಿಯರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತಿಗೆ ಈಗಲೂ ಬದ್ಧಳಾಗಿದ್ದೇನೆ,'' ಎಂದು ಹರ್ಷಿಕಾ ಹೇಳಿದ್ದಾರೆ.

''ಎರಡು ದಿನಗಳಿಂದ ಸತತವಾಗಿ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹೆಸರಾಂತ ವ್ಯಕ್ತಿಗಳೇ ನನಗೆ ಬೆದರಿಕೆಯ ಕರೆ ಮಾಡುತ್ತಿದ್ದಾರೆ. ಮೆಸೇಜ್‌ ಕೂಡ ಕಳುಹಿಸುತ್ತಿದ್ದಾರೆ. ನನ್ನ ಬಾಯಿ ಮುಚ್ಚಿಸಲು ಕೆಲವರು ಹಣದ ಆಮಿಷವನ್ನೂ ಒಡ್ಡಿದ್ದಾರೆ,'' ಎಂದು ಹರ್ಷಿಕ ಹೇಳಿದ್ದಾರೆ.

''ಮೀ ಟೂ ಎನ್ನುವ ನಟಿಯರು ಗಾಂಜಾ ಸೇವನೆ ಮಾಡಿ ಕಲಾವಿದರ ಮರ್ಯಾದೆ ಹಾಳು ಮಾಡಲು ಸಂಚು ರೂಪಿಸಿದ್ದನ್ನು, ನಿರ್ಮಾಪಕರ ಬಳಿ ಆ ನಟಿಯರೆಲ್ಲ ಅಸಭ್ಯವಾಗಿ ವರ್ತಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದರಿಂದಲೇ ಆ ರೀತಿಯ ಮಾತುಗಳನ್ನು ಆಡಬೇಕಾಯಿತು. ಈ ವಿಷಯಗಳನ್ನು ಬಹಿರಂಗಪಡಿಸಿದ್ದರಿಂದ ನನಗೆ ಬೆದರಿಕೆಯ ಕರೆಗಳು ಬರುತ್ತಿವೆ,'' ಎಂದು ಇವರು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ