ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌: ಎಐಸಿಸಿಗೆ 50 ಕೋಟಿ ರೂ. ಕಿಕ್‌ಬ್ಯಾಕ್‌

ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, 50 ಕೋಟಿ ರೂ. ಎಐಸಿಸಿಗೆ ಕಿಕ್‌ಬ್ಯಾಕ್‌ ನೀಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ​

Vijaya Karnataka Web 12 Jul 2018, 11:06 am
ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, 50 ಕೋಟಿ ರೂ. ಎಐಸಿಸಿಗೆ ಕಿಕ್‌ಬ್ಯಾಕ್‌ ನೀಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
Vijaya Karnataka Web indira canteen


ಬಜೆಟ್‌ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ರಾಮದಾಸ್‌, ‘‘ಈ ಬಗ್ಗೆ ದಾಖಲೆ ಹಾಗೂ ಸಿಸಿಟಿವಿ ರೆಕಾರ್ಡ್‌ ಸಿಡಿ ಪ್ರದರ್ಶನ ಮಾಡಿದ್ದು, ಇದು 150 ಕೋಟಿ ರೂ.ಗಳ ಭಾರಿ ಹಗರಣ,’’ ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್‌ನಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಸಚಿವ ಡಿ.ಕೆ.ಶಿವಕುಮಾರ್‌, ಪ್ರಿಯಾಂಕ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ರಾಮದಾಸ್‌ ಎಐಸಿಸಿ ಹೆಸರು ಪ್ರಸ್ತಾಪಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಶಿವಕುಮಾರ್‌, ‘‘ನಿಮಗೆ ಕೇಶವಕೃಪ ಗರ್ಭಗುಡಿಯಾದರೆ, ನಮಗೆ ಎಐಸಿಸಿ ಗರ್ಭಗುಡಿ. ಈ ರೀತಿಯ ಆರೋಪ ಸರಿಯಲ್ಲ,’’ ಎಂದರು. ‘‘ನನ್ನ ಬಳಿ ಈ ಅವ್ಯವಹಾರದ ಬಗ್ಗೆ ದಾಖಲೆ ಇದ್ದು, ಅದರ ಆಧಾರದ ಮೇಲೆ ಮಾತನಾಡುತ್ತಿದ್ದೇನೆ. ಚರ್ಚೆಗೆ ಅವಕಾಶ ನೀಡಿ,’’ ಎಂದು ರಾಮದಾಸ್‌ ಹೇಳಿದರು.
‘‘ನಿಯಮಾವಳಿ ಪ್ರಕಾರ ಬಜೆಟ್‌ ಚರ್ಚೆಯಲ್ಲಿ ವ್ಯಕ್ತಿಗತ ಆರೋಪ ಮಾಡುವುದಕ್ಕೆ ಅವಕಾಶವಿಲ್ಲ. ಅವ್ಯವಹಾರವಾಗಿದ್ದರೆ ಆ ಬಗ್ಗೆ ನೋಟಿಸ್‌ ನೀಡಿ ಚರ್ಚೆ ನಡೆಸಬೇಕು,’’ ಎಂದು ಕಾಂಗ್ರೆಸ್‌ ಸದಸ್ಯರು ವಾದಿಸಿದರು. ಉಪಾಧ್ಯಕ್ಷ ಕೃಷ್ಣಾ ರೆಡ್ಡಿ,‘‘ ಮೊದಲು ಪೀಠಕ್ಕೆ ದಾಖಲೆ ಸಲ್ಲಿಸಿ ಆ ಬಳಿಕ ಮಾತನಾಡಿ,’’ ಎಂದು ಹೇಳಿದ್ದರಿಂದ ಕೆರಳಿದ ಬಿಜೆಪಿ ಸದಸ್ಯರು ಧರಣಿ ನಡೆಸುವುದಕ್ಕೆ ಮುಂದಾದರು.

ಉಪಾಧ್ಯಕ್ಷರಿಗೆ ಕೈ ಮುಗಿದು ಮನವಿ ಮಾಡಿದ ರಾಮದಾಸ್‌, ‘‘ಬಜೆಟ್‌ನಲ್ಲಿ ಮೀಸಲಿಟ್ಟ ಹಣವೇ ದುರ್ಬಳಕೆಯಾಗಿದೆ. ಇದಕ್ಕೆ ನಾವೆಲ್ಲರೂ ಉತ್ತರದಾಯಿಗಳಾಗಿದ್ದೇವೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕಿದೆ. ಯಾವ ರೀತಿ ಅಕ್ರಮ ನಡೆದಿದೆ ಎಂಬುದನ್ನು ತಿಳಿದುಕೊಳ್ಳುವ ಅಧಿಕಾರ ರಾಜ್ಯದ ಜನಕ್ಕೆ ಇರುವುದರಿಂದ ಚರ್ಚೆಗೆ ಅವಕಾಶ ಕೊಡಿ,’’ ಎಂದು ಮನವಿ ಮಾಡಿದರು. ಆದರೆ ದಾಖಲೆ ಸಲ್ಲಿಸದೇ ಮಾತನಾಡುವುದಕ್ಕೆ ಅವಕಾಶ ಕೊಡವುದಿಲ್ಲ ಎಂದು ಉಪಾಧ್ಯಕ್ಷರು ಪಟ್ಟು ಹಿಡಿದರು. ನಾನು ದಾಖಲೆ ಕೊಡುವುದಕ್ಕೆ ಸಿದ್ದ. ಆದರೆ ದಾಖಲೆಯಲ್ಲಿ ಏನಿದೆ ಎಂಬುದನ್ನು ಸದನದಕ್ಕೆ ತಿಳಿಸುವುದಕ್ಕೆ ಅವಕಾಶ ಮಾಡಿಕೊಡಿ,’’ ಎಂದು ರಾಮದಾಸ್‌ ಆಗ್ರಹಿಸಿದಾಗ ಸದನದಲ್ಲಿ ತೀವ್ರ ವಾಗ್ವಾದ ಆರಂಭವಾಯಿತು.

ಬಿಜೆಪಿ ಸದಸ್ಯರು ಕಾಂಗ್ರೆಸ್‌ ವಿರುದ್ಧ ಕಿಕ್‌ ಬ್ಯಾಕ್‌ ಸರಕಾರ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಲೋಕೋಪಯೋಗಿ ಸಚಿವ ರೇವಣ್ಣ ಮಧ್ಯ ಪ್ರವೇಶಿಸಿ, ಇಷ್ಟು ದಿನ ಕಲಾಪ ಸುಗಮವಾಗಿ ನಡೆದಿದೆ. ಇನ್ನೊಂದು ದಿನ ಅವಕಾಶ ನೀಡಿ,’’ ಎಂದರೂ ಪ್ರಯೋಜನವಾಗದೇ ಇದ್ದಾಗ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ