ಆ್ಯಪ್ನಗರ

ನೀರಾವರಿಗೆ ಅನುದಾನ ಕೋರಲು ದಿಲ್ಲಿಗೆ ನಿಯೋಗ

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಕೋರಿ ಪ್ರಧಾನಿ ಬಳಿಗೆ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.

Vijaya Karnataka Web 30 Jul 2019, 5:00 am
ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಕೋರಿ ಪ್ರಧಾನಿ ಬಳಿಗೆ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.
Vijaya Karnataka Web 9C605ED3-2A9A-43EE-AB3D-D82E84F04579


ಸೋಮವಾರ ಮೇಲ್ಮನೆ ಕಲಾಪದಲ್ಲಿ ಧನವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ಮುನ್ನ ಮಾತನಾಡಿ''ಕೃಷ್ಣಾ ಕೊಳ್ಳದ ಯೋಜನೆಗಳು ಮಂದಗತಿಯಲ್ಲಿ ಸಾಗುತ್ತಿವೆ. ರಾಜ್ಯದ ಪಾಲಿನ 130 ಟಿಎಂಸಿ ನೀರಿನ ಸದ್ಬಳಕೆ, ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರೂ. ಬೇಕಿದೆ. ನಾಲ್ಕೈದು ದಿನಗಳಲ್ಲಿ ದಿನಾಂಕ ಗೊತ್ತುಪಡಿಸಿ ಪ್ರಧಾನಿ ಬಳಿಗೆ ನಿಯೋಗ ತೆರಳಲಾಗುವುದು,'' ಎಂದರು.

''ಮೇಕೆದಾಟು ಯೋಜನೆ ಮುಂದುವರಿಸಲು ಸರಕಾರ ಸಿದ್ಧವಿದೆ. ರೈಲ್ವೆ ಯೋಜನೆ ಸೇರಿದಂತೆ ಕೇಂದ್ರದ ಬಳಿ ಅನುಮತಿಗೆ ಬಾಕಿಯಿರುವ ರಾಜ್ಯದ ಇನ್ನಿತರ ಯೋಜನೆಗಳಿಗೆ ಒಪ್ಪಿಗೆ ಪಡೆಯಲಾಗುವುದು. ಕೇಂದ್ರ, ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇರುವುದರಿಂದ ಈ ಬಾರಿ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲ ಆಗಲಿದೆ,'' ಎಂದು ಸಿಎಂ ಪ್ರತಿಪಾದಿಸಿದರು.

ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕಾಂಗ್ರೆಸ್‌ ಸದಸ್ಯ ಐವನ್‌ ಡಿ'ಸೋಜಾ ಮನವಿಗೆ ಸ್ಪಂದಿಸಿದ ಸಿಎಂ ''ನನ್ನ ಅವಧಿಯಲ್ಲಿ ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಎಚ್ಚರ ವಹಿಸುತ್ತೇನೆ. ಹೆಚ್ಚಿನ ಅನುದಾನ ನೀಡಲು ಯಾವುದೇ ಹಿಂಜರಿಕೆ ಇಲ್ಲ,'' ಎಂದು ಸ್ಪಷ್ಟಪಡಿಸಿದರು.

ಹುಷಾರಾಗಿ ಹೆಜ್ಜೆ ಇಡಿ

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್‌ ಮುಖಂಡ ಎಸ್‌.ಆರ್‌.ಪಾಟೀಲ್‌ ''ಸಿಎಂ ಗಾದಿ ಹಿಡಿಯುವಲ್ಲಿ ಗುರಿ ಸಾಧಿಸಿ ಛಲದಂಕಮಲ್ಲರಾಗಿ ಹೊರಹೊಮ್ಮಿದ್ದೀರಿ. ಹಿಂದಿನ ಬಾರಿಯ ಕಹಿ ಅನುಭವವನ್ನು ಮರೆತು ಈಗ ಹುಷಾರಾಗಿ ಹೆಜ್ಜೆ ಇಡಿ. ಅಕ್ಕಪಕ್ಕದವರ ಕುರಿತು ಎಚ್ಚರ ವಹಿಸಲು ಮರೆಯದಿರಿ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಶೋಷಿತರ ಪರ ನಿಲ್ಲಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲು ನಿಮ್ಮ ಅವಧಿಯಲ್ಲೇ ಯುಕೆಪಿ ಯೋಜನೆಯನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರೂ. ಹಣ ಹೂಡುವ ನಿರ್ಧಾರ ಪ್ರಕಟಿಸಿ,'' ಎಂದು ಮನವಿ ಮಾಡಿದರು.


''ಹೊಸ ಸಿಎಂಗೆ ಪ್ರತಿಪಕ್ಷದವರೆಲ್ಲರ ಬೆಂಬಲ ಇದೆ. ಯಡಿಯೂರಪ್ಪನವರು ಪಕ್ಷಪಾತ ಮಾಡದೆ ಕೆಲಸ ನಿರ್ವಹಿಸಲಿ''.

- ಬಸವರಾಜ ಹೊರಟ್ಟಿ , ಜೆಡಿಎಸ್‌ ಹಿರಿಯ ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ