ಆ್ಯಪ್ನಗರ

ಜೆಡಿಎಸ್‌ ತೊರೆಯಲ್ಲ, ಮಾಧ್ಯಮಗಳ ವರದಿ ಸುಳ್ಳು! ವೈಎಸ್‌ವಿ ದತ್ತ ಸ್ಪಷ್ಟನೆ

ನಾನು ಜೆಡಿಎಸ್ ಪಕ್ಷವನ್ನು ತೊರೆಯುವುದಿಲ್ಲ ಈ ಕುರಿತಾಗಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಈ ಕುರಿತಾಗಿ ಅವರು ಏನು ಹೇಳಿದ್ದಾರೆ?

Vijaya Karnataka Web 1 Dec 2020, 9:21 am
ಬೆಂಗಳೂರು: ಮಾಜಿ ಶಾಸಕ ವೈಎಸ್‌ವಿ ದತ್ತ ಜೆಡಿಎಸ್‌ ತೊರೆಯುತ್ತಾರೆ ಎಂಬ ಊಹಾಪೋಹಕ್ಕೆ ಸ್ವತಃ ಅವರೇ ಬ್ರೇಕ್ ಹಾಕಿದ್ದಾರೆ. ಕೆಲವು ದಿನಗಳಿಂದ ರಾಜಕೀಯವಾಗಿ ಅಷ್ಟೇನು ಸಕ್ರಿಯವಾಗಿಲ್ಲದ ದತ್ತ ಜೆಡಿಎಸ್‌ ಪಕ್ಷವನ್ನು ತೊರೆಯುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಕೆಲವು ಮಾಧ್ಯಮಗಳಲ್ಲೂ ಈ ವರದಿ ಪ್ರಸಾರ ಆಗಿತ್ತು. ಆದರೆ ಸ್ವತಃ ದತ್ತಾ ಅವರೇ ಇದನ್ನು ನಿರಾಕರಣೆ ಮಾಡಿದ್ದಾರೆ.
Vijaya Karnataka Web ysv datta


ಈ ಕುರಿತಾಗಿ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಸ್ಪಷ್ಟೀಕರಣ ನೀಡಿರುವ ಅವರು, ಸೋಮವಾರ ರಾತ್ರಿ ಎಚ್‌ಡಿ ದೇವೇಗೌಡರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ.ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಟಿವಿ ಅವರು ಸುದ್ದಿ ಅಂತ ಪ್ರಸಾರ ಮಾಡಿದ್ದಾರೆ.ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರಿಗಾಗಿ ಶುಕ್ರವಾರ ಉಪವಾಸಕ್ಕೆ ಕರೆ ಕೊಟ್ಟ ಪ್ರಸನ್ನ ಹೆಗ್ಗೊಡು, ದತ್ತ

ಅಲ್ಲದೆ, ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ. ಜೆಡಿಎಸ್ ಪಕ್ಷ ಸಂಘಟನೆ ಕಡೆ ಗಮನ ಕೊಡೋಣ.ಮೊನ್ನೆ ಪಕ್ಷ ಸಂಘಟನೆ ಬಗ್ಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದೇನೆ ಅದರ ಕಡೆ ಗಮನ ಕೊಡೋಣ ಎಂದು ಕಾರ್ಯಕರ್ತರಲ್ಲಿ ವಿನಂತಿ ಮಾಡಿದ್ದಾರೆ.

ಆಮ್‌ ಆದ್ಮಿ ಪಕ್ಷದಿಂದ ಬಂದಿದ್ದ ಆಫರ್

ವೈಎಸ್‌ವಿ ದತ್ತ ಅವರಿಗೆ ಕರ್ನಾಟಕ ಆಮ್‌ ಆದ್ಮಿ ಪಕ್ಷದಿಂದ ಆಫರ್‌ ಬಂದಿತ್ತು. ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಮ್‌ ಆದ್ಮಿ ಪಕ್ಷದ ಉಸ್ತುವಾರಿಯಾಗಿರುವ ರೋಮಿ ಭಾಟಿ ಹಾಗೂ ರಾಜ್ಯ ಸಂಚಾಲಯ ಪೃಥ್ವಿ ರೆಡ್ಡಿ ದತ್ತಾ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನ ನೀಡಿದ್ದರು.ಭೇಟಿ ವಿಚಾರವನ್ನು ದತ್ತ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಆದರೆ ಆಮ್‌ ಆದ್ಮಿ ಪಕ್ಷದ ಆಹ್ವಾನವನ್ನು ದತ್ತಾ ನಿರಾಕರಿಸಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಇರುವರೆಗೂ ಪಕ್ಷ ನಿಷ್ಠೆ ಜೆಡಿಎಸ್‌ಗೆ ಎಂದು ಸ್ಪಷ್ಟಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಪಕ್ಷ ಸಂಘಟನೆಗಿಂತ ಆನ್‌ಲೈನ್‌ ಟ್ಯೂಷನ್‌ನಲ್ಲೇ ಬ್ಯುಸಿ

ತಮ್ಮ ವಿಭಿನ್ನ ರಾಜಕೀಯ ನಡೆಯಿಂದ ಗಮನ ಸೆಳೆಯುವ ವೈಎಸ್‌ವಿ ದತ್ತ ಇತ್ತೀಚೆಗೆ ಜೆಡಿಎಸ್‌ ಪಕ್ಷದಲ್ಲಿ ಅಷ್ಟೊಂದು ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಪಕ್ಷದ ಕೆಲವೊಂದು ನಡೆಯಿಂದ ಅವರು ಅಸಮಾಧಾನಿತರಾಗಿದ್ದಾರೆ ಎಂಬ ಮಾಹಿತಿಯೂ ಇದೆ. ಸಕ್ರಿಯ ಚಟುವಟಿಕೆಯಿಂದ ದೂರವಾಗಿದ್ದ ಅವರು ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಆನ್‌ಲೈನ್‌ನಲ್ಲಿ ಗಣಿತ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮತ್ತೆ ಜೆಡಿಎಸ್‌ ಪಕ್ಷದ ಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ