ಆ್ಯಪ್ನಗರ

ಇದು 'ನಾಳೆ ಬಾ' ಸರಕಾರ: ಈಶ್ವರಪ್ಪ ವ್ಯಂಗ್ಯ

ಸುಳ್ಳು ಹೇಳುವುದಕ್ಕಾಗಿ ಈ ಸರಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು

Vijaya Karnataka 13 Dec 2018, 7:47 am
ಬೆಳಗಾವಿ: ರೈತರ ಸಾಲ ಮನ್ನಾ, ಕಬ್ಬು ಬೆಳೆಗಾರರ ಬಾಕಿ ಕೊಡಿಸುವ ವಿಚಾರದಲ್ಲಿ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರಕಾರವು 'ನಾಳೆ ಬಾ' ಸರಕಾರವಾಗಿದೆ ಎಂದು ಬಿಜೆಪಿ ಹಿರಿಯ ಸದಸ್ಯ ಕೆ.ಎಸ್‌.ಈಶ್ವರಪ್ಪ ವಿಧಾನಸಭೆಯಲ್ಲಿ ಬುಧವಾರ ವಾಗ್ದಾಳಿ ನಡೆಸಿದರು.
Vijaya Karnataka Web kse


ಬರ ಪರಿಸ್ಥಿತಿ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು ''ಸುಳ್ಳು ಹೇಳುವುದಕ್ಕಾಗಿ ಈ ಸರಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು. ಹಿಂದಿನ ಸಿದ್ದರಾಮಯ್ಯ ಸರಕಾರ ಮಾಡಿದ್ದ ರೈತರ ಸಾಲ ಮನ್ನಾವನ್ನೂ ತನ್ನದೇ ಲೆಕ್ಕದಲ್ಲಿ ಮೈತ್ರಿ ಸರಕಾರ ತೋರಿಸುತ್ತಿದೆ. ''ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿದರೆ, ಅದು ನನ್ನದೇ ಮಗು ಎನ್ನುವಂತೆ ಸರಕಾರದ ಧೋರಣೆ ಇದೆ,'' ಎಂದು ವ್ಯಂಗ್ಯವಾಡಿದರು.

''ಸಾಲ ಮನ್ನಾ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಸರಕಾರ ರೈತರನ್ನು ಮುಗಿಸುತ್ತಿದೆ. ನಾವು (ಬಿಜೆಪಿ) ನಿಮ್ಮನ್ನು ಮುಗಿಸುತ್ತೇವೆ'' ಎಂದು ಗುಡುಗಿದರು. ''ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ ರೈತರಿಗೆ ಬಾಕಿ ಕೊಡಿಸಲು ಸರಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಡಿಸಿಗಳೊಂದಿಗೆ ಮಾತನಾಡಿ ಬರ ನಿರ್ವಹಣೆ ಮಾಡಲು ಸಾಧ್ಯವೇ?,'' ಎಂದು ಪ್ರಶ್ನಿಸಿದರು.

ಹಣದ ಕೊರತೆ ಇಲ್ಲ

ಬರ ನಿರ್ವಹಣೆಗೆ ಸಂಬಂಧಿಸಿದಂತೆ ಈಶ್ವರಪ್ಪ ಅವರ ಪ್ರಸ್ತಾಪಕ್ಕೆ ಮಧ್ಯಪ್ರವೇಶಿಸಿ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ''ಕುಡಿಯುವ ನೀರು ಪೂರೈಕೆ ಮತ್ತಿತರ ತುರ್ತು ಪರಿಹಾರ ಕಾರ್ಯಗಳಿಗಾಗಿ ಡಿಸಿಗಳ ಪಿಡಿ ಖಾತೆಗಳಲ್ಲಿ 226 ಕೋಟಿ ರೂ. ಹಣ ಇದೆ. ಬರಪೀಡಿತ 100 ತಾಲೂಕುಗಳಿಗೆ ಹೆಚ್ಚುವರಿಯಾಗಿ ತಲಾ 50 ಲಕ್ಷ ರೂ. ಮಂಜೂರು ಮಾಡಲಾಗಿದೆ. ಈ ಪೈಕಿ ತಕ್ಷ ಣ ಪರಿಹಾರ ಕೈಗೆತ್ತಿಕೊಳ್ಳಲು 25 ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ,'' ಎಂದರು.

ರೈತರ ಸಾಲ ಮನ್ನಾ ಕುರಿತು ಗುರುವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು
-ರಮೇಶ್‌ ಕುಮಾರ್‌, ಸ್ಪೀಕರ್‌
*************************
ರೇವಣ್ಣರ ಹಾಸನ ಪ್ರೀತಿ ಕಾಲೆಳೆದ ಬಿಎಸ್‌ವೈ

ಸುವರ್ಣಸೌಧ: ಸಮ್ಮಿಶ್ರ ಸರಕಾರದಲ್ಲಿ ಹಾಸನ, ರಾಮನಗರಕ್ಕೆ ಯಾವುದೇ ಕೆಲಸಕ್ಕೆ 24 ತಾಸುಗಳಲ್ಲಿ ಅನುಮತಿ ನೀಡಲಾಗುತ್ತದೆ. ಈ ಬದ್ಧತೆ ರಾಜ್ಯದ ಬೇರೆ ಭಾಗಗಳಿಗೆ ಏಕಿಲ್ಲ? ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ಬುಧವಾರ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್‌ ಅವರು ''ಖಾನಾಪುರ ಪಟ್ಟಣದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಲಕ್ಷ್ಮಿದೇವಿ ಜಾತ್ರೆ ಮುಂದಿನ ಫೆಬ್ರವರಿಯಲ್ಲಿ ನಡೆಯಲಿದೆ. ಲಕ್ಷಾಂತರ ಭಕ್ತರು ಆಗಮಿಸುವ ಕಾರಣ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು,'' ಎಂದು ಮನವಿ ಮಾಡಿದರು.

ಉತ್ತರ ನೀಡಿದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ''ಖಾನಾಪುರ ಪಟ್ಟಣದ ಲಕ್ಷ್ಮಿದೇವಿ ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸಂಪರ್ಕ ರಸ್ತೆಗಳನ್ನು 3.40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ವಾರದೊಳಗೆ ಈ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸುತ್ತೇವೆ,'' ಎಂದು ಭರವಸೆ ನೀಡಿದರು. ಈ ಹಂತದಲ್ಲಿ ಎದ್ದುನಿಂತ ಪ್ರತಿಪಕ್ಷ ನಾಯಕ ಯಡಿಯೂರಪ್ಪ ''ಹಾಸನಕ್ಕೆ ಕೇವಲ 24 ತಾಸುಗಳಲ್ಲಿ ಮಂಜೂರಾತಿ ನೀಡುವ ಸರಕಾರ ಬೇರೆ ಭಾಗಗಳ ವಿಚಾರದಲ್ಲಿ ಏಕೆ ಬದ್ಧತೆ ತೋರುತ್ತಿಲ್ಲ,'' ಎಂದು ಪ್ರಶ್ನಿಸಿದರು. ಇದಕ್ಕೆ ಅಷ್ಟೇ ತೀಕ್ಷ ್ಣ ಪ್ರತಿಕ್ರಿಯೆ ನೀಡಿದ ರೇವಣ್ಣ ''ವಾರದೊಳಗೆ ಕೆಲಸ ಆರಂಭಿಸಿ ಉತ್ಸವದ ವೇಳೆಗೆ ಖಾನಾಪುರ ಸಂಪರ್ಕ ರಸ್ತೆಗಳನ್ನು ಮಾಡಿಸುತ್ತೇನೆ. ಬೇಡ ಎಂದಾದರೆ ಹೇಳಿಬಿಡಿ,'' ಎಂದರು. ''ಸಚಿವರು ನನ್ನ ಬೇಡಿಕೆಗೆ ಸ್ಪಂದಿಸಿದ್ದಾರೆ,'' ಎಂದು ಅಂಜಲಿ ನಿಂಬಾಳ್ಕರ್‌ ಹೇಳಿದ ಬಳಿಕ ಚರ್ಚೆಗೆ ತೆರೆಬಿತ್ತು.

ರಾಜಧಾನಿ ತ್ಯಾಜ್ಯವನ್ನು ರಾಜ್ಯಕ್ಕೆ ಹಂಚಿಕೆ

ಬೆಂಗಳೂರು ನಗರದ ಕಸದ ಸಮಸ್ಯೆ ನಿವಾರಣೆಗೆ ಸುಲಭ ಸೂತ್ರವೊಂದನ್ನು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಸರಕಾರದ ಮುಂದಿಟ್ಟಿದ್ದಾರೆ. ರಾಜಧಾನಿಯಲ್ಲಿ ವ್ಯಾಪಕವಾಗಿರುವ ತ್ಯಾಜ್ಯವನ್ನು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೂ ಸಮಾನವಾಗಿ ಹಂಚಿಬಿಡುವುದು.

ಪ್ರಶ್ನೋತ್ತರ ವೇಳೆಯಲ್ಲಿ ಎಸ್‌.ಟಿ.ಸೋಮಶೇಖರ್‌ ಪ್ರಶ್ನೆಗೆ ಡಿಸಿಎಂ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರೂ ಕಸದ ಸಮಸ್ಯೆ ಪ್ರಸ್ತಾಪಿಸಲು ಮುಂದಾದರು. ಇದು ಬೆಂಗಳೂರಿನ ವಿಚಾರ ಬಿಡಮ್ಮಾ..., ಎಂದು ಸ್ಪೀಕರ್‌ ಮನವಿ ಮಾಡಿದರೂ ಲಕ್ಷ್ಮಿ ಹೆಬ್ಬಾಳ್ಕರ್‌ ಕಿವಿಗೊಡದೆ ವಿಚಾರ ಪ್ರಸ್ತಾಪಿಸಲು ಮುಂದಾದರು. ಇದರಿಂದ ಕೆರಳಿದ ಸ್ಪೀಕರ್‌ ರಾಜಧಾನಿಯಲ್ಲಿ ಕಸದ ಸಮಸ್ಯೆ ವ್ಯಾಪಕವಾಗಿದೆ. ಬೇಕಾದಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಎಲ್ಲ ಶಾಸಕರ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿ ಕಳಿಸಿಕೊಟ್ಟುಬಿಡಿ ಎಂದು ಸಲಹೆ ಮಾಡಿದರು. ಸ್ಪೀಕರ್‌ ಸಿಟ್ಟಿನಿಂದ ಈ ಸಲಹೆ ಮಾಡಿದರೂ, ಸದನ ನಗೆಗಡಲಲ್ಲಿ ಮುಳುಗಿದರೆ, ಮುಜುಗರಕ್ಕೆ ಒಳಗಾದ ಲಕ್ಷ್ಮಿ ಹೆಬ್ಬಾಳ್ಕರ್‌ ಸುಮ್ಮನಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ