ಆ್ಯಪ್ನಗರ

ರಕ್ಷಣೆಗಾಗಿ ಅಖಾಡಕ್ಕಿಳಿದ ಗುಲಾಂ, ಕಪಿಲ್‌ ಸಿಬಾಲ್‌

ದೋಸ್ತಿ ಸರಕಾರ ರಕ್ಷಿಸಲು ಇದೀಗ ಕಾಂಗ್ರೆಸ್‌ನ ವರಿಷ್ಠ ನಾಯಕ ಗುಲಾಂ ನಬಿ ಆಜಾದ್‌ ...

Vijaya Karnataka 10 Jul 2019, 5:00 am
ಬೆಂಗಳೂರು : ದೋಸ್ತಿ ಸರಕಾರ ರಕ್ಷಿಸಲು ಇದೀಗ ಕಾಂಗ್ರೆಸ್‌ನ ವರಿಷ್ಠ ನಾಯಕ ಗುಲಾಂ ನಬಿ ಆಜಾದ್‌ ಅಖಾಡಕ್ಕೆ ಧುಮುಕಿದ್ದಾರೆ. ಅತೃಪ್ತರ ಮನವೊಲಿಸುವ ಕಾರ್ಯದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಹಿತ ಪ್ರದೇಶ ಕಾಂಗ್ರೆಸ್‌ ಪ್ರಮುಖರು ವಿಫಲವಾಗಿರುವುದರಿಂದ ಆಜಾದ್‌ ಆಗಮಿಸಿದ್ದಾರೆ.
Vijaya Karnataka Web g


ಮಂಗಳವಾರ ಸಂಜೆ ಬೆಂಗಳೂರಿಗೆ ಬಂದಿಳಿದ ಆಜಾದ್‌ ಅವರು ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ವೇಣುಗೋಪಾಲ್‌ ಮತ್ತಿತರರೊಂದಿಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಮಾಲೋಚಿಸಿದರು.

ನಂತರ ಈ ನಾಯಕರು ಖಾಸಗಿ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕಾಂಗ್ರೆಸ್‌ ಪಕ್ಷದ ಕಾನೂನು ತಜ್ಞ ಕಪಿಲ್‌ ಸಿಬಲ್‌ ಅವರು ರಾತ್ರಿ ಬೆಂಗಳೂರಿಗೆ ಆಗಮಿಸಿದ್ದು ಅವರೊಂದಿಗೆ ಸಮಾಲೋಚನೆ ನಡೆಸಿದರು ಎನ್ನಲಾಗುತ್ತಿದೆ. ಸರಕಾರ ಉಳಿಸಿಕೊಳ್ಳುವ ಬಗ್ಗೆ ಪರ್ಯಾಯ ಮಾರ್ಗ ಕಂಡು ಹಿಡಿಯಲಿದ್ದಾರೆ. ಈ ಮಾತುಕತೆಯಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೂ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದು ಮೇಲೆ ಒತ್ತಡ

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದವರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ಬೆಂಬಲಿಗರು. ಸಿದ್ದು ಗಟ್ಟಿ ಮನಸ್ಸು ಮಾಡಿದರೆ ಇವರೆಲ್ಲ ವಾಪಸ್‌ ಬರುತ್ತಾರೆ. ರಾಜೀನಾಮೆ ಹಿಂಪಡೆಯುತ್ತಾರೆಂದು ಹೈಕಮಾಂಡ್‌ ಬಲವಾಗಿ ನಂಬಿಕೊಂಡಿದೆ. ಈ ಸಂಬಂಧ ಸಿದ್ದು ಮೇಲೆ ಒತ್ತಡ ಹೇರುವ ಉದ್ದೇಶದಿಂದ ಆಜಾದ್‌ ಆಗಮಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನವೊಲಿಸುವ ಹೊಣೆಯನ್ನೂ ಆಜಾದ್‌ ಅವರಿಗೆ ವಹಿಸಲಾಗಿದೆ.

ಸಿಎಂ ಕನಸಿನೊಂದಿಗೆ ಫೀಲ್ಡಿಗಿಳಿದ ಡಿಕೆಶಿ

ಅಚ್ಚರಿಯ ಬೆಳವಣಿಗೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಭಾರಿ ಮಹತ್ವಾಕಾಂಕ್ಷೆಯೊಂದಿಗೆ ಫೀಲ್ಡಿಗಿಳಿದಿದ್ದಾರೆ. ಜತೆಗೆ ಅತೃಪ್ತರನ್ನು ವಾಪಸ್‌ ಕರೆತರುವ ಉದ್ದೇಶದಿಂದ ಅವರು ಬುಧವಾರ ಮುಂಬಯಿಗೆ ತೆರಳಲಿದ್ದಾರೆ.

ದಿಲ್ಲಿಗೆ ಭೇಟಿ ನೀಡಿದ್ದ ಅವರು, ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನೂ ಸಂಪರ್ಕಿಸಿದ್ದಾರೆ. ತಮಗೆ ನಾಯಕತ್ವ ವಹಿಸುವುದಾದರೆ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯುವಂತೆ ನೋಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಜೆಡಿಎಸ್‌ ವರಿಷ್ಠರನ್ನು ಒಪ್ಪಿಸುವ ಜವಾಬ್ದಾರಿಯನ್ನು ತಮಗೇ ಬಿಡಿ ಎಂದು ಕೇಳಿಕೊಂಡಿದ್ದಾರೆ. ಯಾವುದಕ್ಕೂ ಮೊದಲು ಅತೃಪ್ತರನ್ನು ಪಕ್ಷಕ್ಕೆ ವಾಪಸ್‌ ಕರೆದುಕೊಂಡು ಬರುವಂತೆ ವರಿಷ್ಠರು ಡಿಕೆಶಿ ಅವರಿಗೆ ಟಾಸ್ಕ್‌ ನೀಡಿದ್ದಾರೆ. ಅದರಂತೆ ಅವರು ಮುಂಬಯಿಗೆ ಹೋಗುತ್ತಿದ್ದು ಮುಂದಿನ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ