ಆ್ಯಪ್ನಗರ

ರಾಜ್ಯದಲ್ಲಿ ವಿಷ ಕುಡಿಯುವ, ಕುಡಿಸುವ ಕೆಲಸ: ಪ್ರತಾಪ್‌ ಸಿಂಹ

''ರಾಜ್ಯದಲ್ಲಿ ಮಳೆಯಿಂದಾಗಿ 130 ಜನ ಪ್ರಾಣ ಕಳೆದುಕೊಂಡಿದ್ದಾರೆ...

Vijaya Karnataka 26 Jul 2018, 5:00 am
ಹೊಸದಿಲ್ಲಿ: ''ರಾಜ್ಯದಲ್ಲಿ ಮಳೆಯಿಂದಾಗಿ 130 ಜನ ಪ್ರಾಣ ಕಳೆದುಕೊಂಡಿದ್ದಾರೆ. 9 ಸಾವಿರಕ್ಕೂ ಅಧಿಕ ಮನೆಗಳು ಕುಸಿದಿವೆ. ಆದರೆ, ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳು ಈ ಸಮಸ್ಯೆಗೆ ಸ್ಪಂದಿಸುವ ಬದಲು ಅಧಿಕಾರಕ್ಕಾಗಿ ವಿಷ ಕುಡಿಯುವ ಮತ್ತು ವಿಷ ಕುಡಿಸುವ ಕೆಲಸದಲ್ಲಿ ನಿರತವಾಗಿವೆ,'' ಎಂದು ಸಂಸದ ಪ್ರತಾಪ್‌ ಸಿಂಹ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದರು.
Vijaya Karnataka Web prathap-simha


ಈ ವೇಳೆ ಕಾಂಗ್ರೆಸ್‌ ಸದಸ್ಯರಾದ ಮುದ್ದುಹನುಮೇಗೌಡ, ಧ್ರುವನಾರಾಯಣ್‌ ಮತ್ತಿತರರು ''ಬರ ಮತ್ತು ಪ್ರವಾಹದ ಚರ್ಚೆಯಲ್ಲಿ ರಾಜಕೀಯ ಮಾತನಾಡಬೇಡಿ,'' ಎಂದು ಆಕ್ಷೇಪಿಸಿದರು. ಆಗ ಪ್ರತಾಪ್‌ ಸಿಂಹ ಅವರ ನೆರವಿಗೆ ಬಂದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌, ಯುವ ಸದಸ್ಯರು ತಮ್ಮ ಕ್ಷೇತ್ರದ ಬಗ್ಗೆ ಕಾಳಜಿಯಿಂದ ಮಾತನಾಡುತ್ತಿದ್ದಾರೆ, ಅವರಿಗೆ ಆಕ್ಷೇಪ ಮಾಡಬೇಡಿ ಎಂದು ವಿನಂತಿಸಿದರು. ಅವರಿಗೆ ಮಾತನಾಡಲು ಹೆಚ್ಚು ಸಮಯ ನೀಡುವಂತೆ ಸ್ಪೀಕರ್‌ ಪೀಠದಲ್ಲಿದ್ದ ಡೆಪೂಟಿ ಸ್ಪೀಕರ್‌ ತಂಬಿದೊರೈ ಅವರನ್ನು ಕೋರಿದರು.

''ಕೇಂದ್ರದ ಮೋದಿ ನೇತೃತ್ವದ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕಕ್ಕೆ ಗರಿಷ್ಠ ನೆರವು ನೀಡಿದೆ. ಈಗಲೂ ಈ ಮಳೆಯಿಂದಾದ ಹಾನಿಯ ಪರಿಹಾರಕ್ಕೆ ನೆರವು ನೀಡಲು ಸಿದ್ಧವಿದೆ. ಆದರೆ, ರಾಜ್ಯ ಸರಕಾರ ನಿಯೋಗದಲ್ಲಿ ಬಂದು ಪ್ರಧಾನಿಯನ್ನು ಭೇಟಿಯಾಗಲು ಸಿದ್ಧವಿಲ್ಲ. ರಾಜ್ಯದ ಅರ್ಧದಷ್ಟು ಜನಸಂಖ್ಯೆ ಕಾವೇರಿ ಮೇಲೆ ಅವಲಂಬಿತವಾಗಿದೆ. ಆದರೆ, ಕಾವೇರಿಯ ಜನ್ಮಸ್ಥಳವಾದ ಕೊಡಗು ಜಿಲ್ಲೆಯ ಸಮಸ್ಯೆಗಳ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಮತ್ತು ಕುಮಾರಸ್ವಾಮಿ ನೇತೃತ್ವದ ಹಾಲಿ ಸಮ್ಮಿಶ್ರ ಸರಕಾರ ದಿವ್ಯ ನಿರ್ಲಕ್ಷ್ಯ ತಾಳಿವೆ,'' ಎಂದು ಆರೋಪಿಸಿದರು.

ದೇಶದಲ್ಲಿ ಪ್ರವಾಹ ಮತ್ತು ಬರ ಪರಿಸ್ಥಿತಿಯ ಕುರಿತಂತೆ ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಮಾತನಾಡಿದ ಅವರು ''ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಪ್ರತಿವರ್ಷ ಭಾರಿ ಮಳೆ ಸುರಿಯುತ್ತದೆ. ಈ ವರ್ಷವೂ ಈ ಪ್ರದೇಶವೂ ಸೇರಿದಂತೆ ಇಡೀ ರಾಜ್ಯದಲ್ಲಿ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ರಸ್ತೆಗಳು ಹಾಳಾಗಿದ್ದು, ದ್ವಿಚಕ್ರ ವಾಹನದಲ್ಲೂ ಓಡಾಡದಂಥ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಮನೆಗಳು ಕುಸಿದಿದ್ದು, ಜನ-ಜಾನುವಾರುಗಳ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಂಥ ಸ್ಥಿತಿ ಇದ್ದರೂ ರಾಜ್ಯ ಸರಕಾರ ಕೊಡಗು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ,'' ಎಂದು ಆರೋಪಿಸಿದರು.

''ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯಾಗಿ ಆಗಿರುವ ವೇಣುಗೋಪಾಲ್‌ ಮತ್ತು ಅವರ ಪಕ್ಷದ ಸಂಸದರು ಕೇಂದ್ರ ಸರಕಾರದ ವಿರುದ್ಧ ತಾರತಮ್ಯದ ಆರೋಪ ಮಾಡುತ್ತಾರೆ. ಆದರೆ, ವಾಸ್ತವವಾಗಿ ರಾಜ್ಯ ಸರಕಾರ ಕೊಡಗು ಜಿಲ್ಲೆಯ ಬಗ್ಗೆ ತಾರತಮ್ಯ ಮಾಡುತ್ತಿದೆ. ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ನಾನು ಕಳೆದ ನಾಲ್ಕು ವರ್ಷಗಳಿಂದ ಕೇಳುತ್ತಿದ್ದರೂ ಸರಕಾರ ಕ್ಯಾರೆ ಅನ್ನುತ್ತಿಲ್ಲ. ಇನ್ನೊಂದೆಡೆ ಕೇಂದ್ರ ಸರಕಾರ ರಾಜ್ಯಕ್ಕೆ ಹಿಂದೆಂದಿಗಿಂತಲೂ ಅಧಿಕ ಅನುದಾನ ನೀಡುತ್ತಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ