ಆ್ಯಪ್ನಗರ

ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಶುಕ್ರವಾರ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಯಲಿದೆ.

Vijaya Karnataka Web 29 Jun 2018, 6:30 am
ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಶುಕ್ರವಾರ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಯಲಿದೆ.
Vijaya Karnataka Web bjp flag


ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ, ಸದಾನಂದ ಗೌಡ, ಅನಂತಕುಮಾರ ಹೆಗಡೆ, ರಮೇಶ್‌ ಜಿಗಜಿಣಗಿ, ಜಗದೀಶ್‌ ಶೆಟ್ಟರ್‌, ಈಶ್ವರಪ್ಪ, ಎಲ್ಲ ಶಾಸಕರು, ಸಂಸದರು, ನಾನಾ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಒಟ್ಟು 800 ಜನರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪಾದಯಾತ್ರೆ
ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಿವಾಸದಲ್ಲಿ ಗುರುವಾರ ಸಿದ್ಧತಾ ಸಭೆ ನಡೆದಿದ್ದು, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಮತ್ತಿತರರಿದ್ದರು. ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಮಂಡ್ಯದಿಂದ ಬೆಂಗಳೂರು ಅಥವಾ, ಮೈಸೂರಿನಿಂದ ಬೆಂಗಳೂರಿನವರೆಗೆ ಪ್ರತ್ಯೇಕ ಪಾದಯಾತ್ರೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ರಾಜ್ಯದಲ್ಲಿ ಜನವಿರೋಧಿ ಸರಕಾರ ಇದೆ. ಅವರ ಕಚ್ಚಾಟ, ಬಜೆಟ್‌ ಗೊಂದಲ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಸಮ್ಮಿಶ್ರ ಸರಕಾರ ತಾನಾಗಿಯೇ ಬಿದ್ದು ಹೋಗಲಿದೆ. ಅವಕಾಶ ಸಿಕ್ಕಾಗ ಬಿಜೆಪಿ ಇದರ ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.

ದ್ವಂದ್ವ ನಿಲುವು?

ಹಿಂದೆ ಸಾಣೆಹಳ್ಳಿ ಶ್ರೀಗಳ ಹೇಳಿಕೆ ವಿರುದ್ಧ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ನಂಜಾವಧೂತ ಸ್ವಾಮಿಜಿಗಳು ರಾಜಕೀಯದ ಬಗ್ಗೆ ಮಾತನಾಡುತ್ತಿದ್ದು ಸಿಎಂ ಮೂಕ ಪ್ರೇಕ್ಷಕರಾಗಿದ್ದಾರೆ. ಇದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ರವಿಕುಮಾರ್‌ ವ್ಯಂಗ್ಯವಾಡಿದರು.

ಮೇಲ್ಮನೆ ನೇಮಕ ಸುಳ್ಳು ಸುದ್ದಿ
ನನ್ನನ್ನು ವಿಧಾನಪರಿಷತ್‌ಗೆ ನೇಮಕ ಮಾಡಲಾಗುತ್ತದೆ ಎಂಬುದು ಸುಳ್ಳು ಸುದ್ದಿ, ಸದ್ಯಕ್ಕೆ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸುವುದು ದೊಡ್ಡವರಿಗೆ ಸಂಬಂಧಪಟ್ಟ ವಿಚಾರ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಉತ್ತಮ ಎಂದರು.

ನಂಜಾವಧೂತ ಸ್ವಾಮೀಜಿ ರಾಜಕೀಯ ಮಾಡಬಾರದು. ಮಠಕ್ಕೆ ಎಲ್ಲ ಸಮುದಾಯದವರೂ ಭಕ್ತರಾಗಿರುತ್ತಾರೆ. ಮೋದಿಯವರೇನು ಈ ಸರಕಾರ ಅಸ್ಥಿರಗೊಳಿಸುವುದಿಲ್ಲ. ಕಾಂಗ್ರೆಸ್‌ -ಜೆಡಿಎಸ್‌ ಪಾಪದ ಭಾರಕ್ಕೆ ಅದಾಗಿಯೇ ಕುಸಿದು ಹೋಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ