ಆ್ಯಪ್ನಗರ

ಎಸ್‌ಸಿಪಿ - ಟಿಎಸ್‌ಪಿ ಕಾಯ್ದೆ ದುರ್ಬಲಗೊಳಿಸೋ ಪ್ರಶ್ನೆಯೇ ಇಲ್ಲ - ಸಿಎಂ ಬಿಎಸ್‌ವೈ

ಎಸ್‌ಸಿಪಿ - ಟಿಎಸ್‌ಪಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸುವ ಪ್ರಶ್ನೆ ಇಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕಾಯ್ದೆ ತಿದ್ದುಪಡಿಯ ಮಾಡಿದರೆ ದಲಿತ ಸಮುದಾಯ ದಂಗೆ ಎದ್ದೀತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು.

Vijaya Karnataka Web 18 Sep 2019, 3:46 pm
ಬೆಂಗಳೂರು: ಎಸ್‌ಸಿಪಿ - ಟಿಎಸ್‌ಪಿ ಯೋಜನೆಗೆ ಮೀಸಲಾಗಿರಿಸಿರುವ ಅನುದಾನವನ್ನು ಬೇರೆಡೆ ವರ್ಗಾಯಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
Vijaya Karnataka Web cm bsy


ಸರಕಾರದ ಎಲ್ಲಾ 39 ಇಲಾಖೆಗಳಿಗೆ ಹಂಚಿಕೆಯಾಗುವ ವಾರ್ಷಿಕ ಅನುದಾನದಲ್ಲಿ ಶೇ. 24.1 ಮೊತ್ತವನ್ನು ಪರಿಶಿಷ್ಟ ಫಲಾನುಭವಿಗಳಿಗೆ ಮೀಸಲಿಡುವ ಹಾಗೂ ವೆಚ್ಚ ಮಾಡುವುದನ್ನು ಕಡ್ಡಾಯಗೊಳಿಸಿರುವ 'ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ ಅಧಿನಿಯಮ- 2013' ತಿದ್ದುಪಡಿಗೆ ರಾಜ್ಯ ಸರಕಾರ ಮುಂದಾಗಿತ್ತು.

ಸೋಮವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ 'ಕರ್ನಾಟಕ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಅಭಿವೃದ್ದಿ ಪರಿಷತ್' ಸಭೆಯಲ್ಲಿ ಕಾನೂನು ತಿದ್ದುಪಡಿ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿತ್ತು.

ಸರಕಾರದ ಈ ನಿರ್ಧಾರಕ್ಕೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಎಸ್‌ಸಿಪಿ - ಟಿಎಸ್‌ಪಿ ಕಾಯ್ದೆಯನ್ನು ದುರ್ಬಲಗೊಳಿಸಲು ರಾಜ್ಯ ಸರಕಾರ ಹೊರಟರೆ ದಲಿತ ಸಮುದಾಯ ದಂಗೆ ಎದ್ದೀತು ಹಾಗೂ ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.


ಮುಂದುವರಿದು, ಸರಕಾರದ ಬಣ್ಣ ಬಹಳ ಬೇಗ ಬದಲಾಗುತ್ತಿದೆ. ಎಸ್‌ಸಿಪಿ/ ಟಿಎಸ್‌ಪಿ ಯೋಜನೆಗೆ ತಿದ್ದುಪಡಿ ತಂದು ಅನುದಾನ ಕಡಿತಗೊಳಿಸುವ ಸರಕಾರದ ಚಿಂತನೆ ದುಷ್ಟ ಆಲೋಚನೆ, ಬಿಜೆಪಿ ಶಾಸಕರು ಕೂಡಾ ಸರಕಾರದ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಬಾರದು ಎಂದು ಒತ್ತಾಯಿಸಿದ್ದರು.

ಸಿದ್ದರಾಮಯ್ಯ ಟ್ವೀಟ್ ವಾಗ್ದಾಳಿ ಬೆನ್ನಲ್ಲೇ ಟ್ವಿಟ್ಟರ್‌ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಅವರಿಗೋಸ್ಕರವೇ ವಿನಿಯೋಗಿಸಲಾಗುವುದು‌ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ ದುರ್ಬಲಗೊಳಿಸಿದರೆ ದಲಿತರ ದಂಗೆ- ಸಿದ್ದರಾಮಯ್ಯ ಎಚ್ಚರಿಕೆ

ಈ ಮೊತ್ತವನ್ನು ಅಗತ್ಯತೆಗಳಿಗೆ ಆಧರಿಸಿ, ಪರಿಣಾಮಕಾರಿಯಾಗಿ ಸದ್ಬಳಕೆ ಮಾಡುವ ಉದ್ದೇಶ ನಮ್ಮದು. ಇಂತಹ ಗಾಳಿ ಸುದ್ದಿಗಳಿಗೆ ಜನರು ಕಿವಿ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ